ಮಧ್ಯವಯಸ್ಸಲ್ಲೇ ಮಿದುಳಿನ ಬೆಳವಣಿಗೆ ವೇಗ ಕುಂಠಿತ

ಪುಟ್ಟ ಮಕ್ಕಳಿಗೆ ಬುದ್ಧಿ ಇಲ್ಲದವ ಅಂತ ಬೈತೀವಿ. ವಯಸ್ಸಾದ ಹಿರಿಯರಿಗೂ ಬುದ್ಧಿ ಇಲ್ಲ ಅಂತ ಕೆಲವೊಮ್ಮೆ ಛೇಡಿಸುವುದೂ ಇದೆ. ದೊಡ್ಡವರು ಬುದ್ಧಿ ಇಲ್ಲದವರು ಹೇಗಾಗುತ್ತಾರೆ? ಇದರ ಪ್ರಕ್ರಿಯೆ ಏನು ಎಂಬ ಬಗ್ಗೆ ಸಂಶೋಧನೆಯೊಂದು ಬೆಳಕು ಚೆಲ್ಲಿದೆ.

ವೃದ್ಧಾಪ್ಯ ಆರಂಭವಾಗುವುದಕ್ಕೆ ಸಾಕಷ್ಟು ಮೊದಲು ಅಂದರೆ ಮಧ್ಯವಯಸ್ಸಿನ ಆದಿಭಾಗದಲ್ಲೇ ಮೆದುಳಿನ ಬೆಳವಣಿಗೆ ಕುಂಠಿತವಾಗಲು ಆರಂಭಿಸುತ್ತದೆ ಎಂದು ವರದಿ ಮಾಡಿದ್ದಾರೆ ಅಮೆರಿಕದ ಪ್ರಿನ್ಸ್‌ಟಮ್ ವಿಶ್ವವಿದ್ಯಾಲಯದ ನರ ವಿಜ್ಞಾನಿಗಳು.

ಈ ಕುರಿತು ಅಧ್ಯಯನ ನಡೆಸಲು ಸಂಶೋಧಕರು ಕೇಂದ್ರೀಯ ಮತ್ತು ದಕ್ಷಿಣ ಅಮೆರಿಕದಲ್ಲಿ ವಾಸಿಸುವ ಮಾರ್ಮೋಸೆಟ್ ಜಾತಿಯ ಮಂಗಗಳನ್ನು ಪ್ರಯೋಗಕ್ಕೆ ಒಳಪಡಿಸಿದ್ದರು. ಈ ಕೋತಿಗಳು ಮಧ್ಯವಯಸ್ಸಿಗೆ ಕಾಲಿಟ್ಟಾಗ, ಪ್ರಾಣಿಯ ಮಿದುಳಿನ ಹಿಪ್ಪೋಕ್ಯಾಂಪಸ್ ಪ್ರದೇಶದಲ್ಲಿ ಹೊಸ ನರಕೋಶ ರಚನೆಯ ವೇಗವು ಕಡಿಮೆಯಾಗುತ್ತಾ ಹೋಗುತ್ತದೆ. ಮಿದುಳಿನ ಈ ಭಾಗವು ಕಲಿಕೆ ಮತ್ತು ಸ್ಮರಣೆಗೆ ಸಂಬಂಧಿಸಿದ್ದಾಗಿದೆ.

ಮಾನವ ಮತ್ತು ಏತಿ (ಏಪ್)ಗಳನ್ನು ಒಳಗೊಂಡಿರುವ ಪ್ರೈಮೇಟುಗಳ ಗಣದಲ್ಲಿ ನ್ಯೂರೋಜೆನೆಸಿಸ್ ಎಂಬ ಹೊಸ ನರಕೋಶಗಳ ಬೆಳವಣಿಗೆಯು ಕುಂಠಿತವಾಗುವ ವಿಷಯವು ಪತ್ತೆಯಾಗಿದ್ದು ಇದೇ ಮೊದಲು.

ಈ ಸಂಶೋಧನೆಯು ಹಲವು ಕಾರಣಗಳಿಗಾಗಿ ಪ್ರಮುಖವಾಗಿದೆ. ಜೀವಿತದ ಯಾವುದೇ ಅವಧಿಯಲ್ಲಿ ನರ ಕೋಶಗಳ ಬೆಳವಣಿಗೆಯ ವೇಗವನ್ನು ವರ್ಧಿಸುವಂತೆ ಮಿದುಳನ್ನು ಉತ್ತೇಜಿಸುವ ಸಾಧ್ಯತೆಗಳ ಕುರಿತು ಸಂಶೋಧನೆಗೆ ಇದು ನೆರವಾಗಲಿದೆ.

ವಯಸ್ಸಾದಂತೆ ಮಿದುಳಿನ ಬೆಳವಣಿಗೆಯೇ ನಿಂತುಹೋಗುತ್ತದೆ ಎಂದು ಈ ಹಿಂದಿನ ಸಂಶೋಧನೆಗಳು ಹೇಳಿದ್ದರೂ, ಬೆಳವಣಿಗೆಯು ಮತ್ತೂ ಮುಂದುವರಿಯುತ್ತದೆ, ಆದರೆ ನಿಧಾನಗತಿಯಲ್ಲಿ ಎಂಬ ಅಂಶ ಪತ್ತೆಯಾಗಿರುವುದು ಈ ಸಾಧ್ಯತೆಗಳ ಬಗ್ಗೆ ಮತ್ತಷ್ಟು ಸಂಶೋಧನೆ ಕೈಗೊಳ್ಳಲು ಪ್ರೇರಣೆ ನೀಡಿದೆ.

ವೆಬ್ದುನಿಯಾವನ್ನು ಓದಿ