ಮನಸ್ಸಿಗೆ ಚೈತನ್ಯ ನೀಡುವ ನಡಿಗೆ

ಶನಿವಾರ, 22 ಡಿಸೆಂಬರ್ 2007 (21:19 IST)
ಬಿರುಸಿನ ನಡಿಗೆ ಮಾಡುವುದು ದೈಹಿಕ ಆರೋಗ್ಯ ಮತ್ತು ಸದೃಢತೆಗೆ ಸಹಕಾರಿ ಎನ್ನುವುದು ಅನೇಕ ಮಂದಿಗೆ ತಿಳಿದಿರಲಾರದು. ನಡಿಗೆ ಮನಸ್ಸಿನ ಜತೆಗೆ ದೇಹಕ್ಕೂ ಅನುಕೂಲ ಎಂದು ಇತ್ತೀಚಿನ ಸಂಶೋಧನೆ ದೃಢಪಡಿಸಿದೆ. ದೈಹಿಕ ಚಟುವಟಿಕೆಯು ಮಾನಸಿಕ ಆರೋಗ್ಯಕ್ಕೆ ಕೂಡ ಒಳ್ಳೆಯ ವ್ಯಾಯಾಮ ಎನ್ನುವುದು ಇದರಿಂದ ರುಜುವಾತಾಗಿದೆ.

ನಡಿಗೆಯಂತ ಸರಳ ವ್ಯಾಯಾಮವು ಮಾನಸಿಕ ಚೇತನ ನೀಡುತ್ತದೆ. ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ, ಸಮಸ್ಯೆಗಳನ್ನು ಬಿಡಿಸುವುದು ಮತ್ತು ಗಮನಹರಿಸುವ ಸಾಮರ್ಥ್ಯವನ್ನು ನಡಿಗೆ ಸುಧಾರಿಸುತ್ತದೆ. ಕೇವಲ 15 ನಿಮಿಷಗಳ ನಡಿಗೆಯ ಸಣ್ಣ ಡೋಸ್ ಕೂಡ ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಅನುಕೂಲ ಬರೀ ಅಲ್ಪಾವಧಿಯದಲ್ಲ.

ನಿಮ್ಮ ದೇಹವು ನಡಿಗೆಯಿಂದ ತಂಪಾದ ಬಳಿಕ ಮಾನಸಿಕ ಚಟುವಟಿಕೆ ಉಲ್ಬಣಿಸುತ್ತದೆ. ನಿಮಗೆ ಜೀವನದಲ್ಲಿ ಬೇಸರವಾಗಿದ್ದರೆ ನಿಮ್ಮ ಕೆಲವು ದುಃಖ ಮತ್ತು ಉದ್ವೇಗದ ಹೊರೆಯನ್ನು ನಡಿಗೆ ಶಮನಗೊಳಿಸುತ್ತದೆ. ದೈಹಿಕ ಚಟುವಟಿಕೆಯು ನಿಮ್ಮ ದೇಹಕ್ಕೆ ಅಡ್ರೆನೆಲಿನ್ ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್‌ಗಳು ನಿಮ್ಮ ನರವ್ಯವಸ್ಥೆ ಮೇಲೆ ಮುಖ್ಯ ಪಾತ್ರ ವಹಿಸುತ್ತದೆ ಮತ್ತು ನಿಮ್ಮ ಭಾವನೆಗಳಿಗೆ ಚೈತನ್ಯ ನೀಡುತ್ತದೆ.

ಈ ಚಟುವಟಿಕೆಯ ಸಂದರ್ಭದಲ್ಲಿ ಎಂಡೋರ್ಫಿನ್ ಕೂಡ ಬಿಡುಗಡೆಯಾಗಿ ನೋವನ್ನು ತಗ್ಗಿಸುತ್ತದೆ. ನಡಿಗೆಯ ಫಲಾಫಲಗಳೇನಿರಬಹುದು? ನಿಮ್ಮ ಒತ್ತಡವನ್ನು ತಗ್ಗಿಸುತ್ತದೆ. ಮನಸ್ಸನ್ನು ತಿಳಿಗೊಳಿಸುತ್ತದೆ. ಸೃಜನಾತ್ಮಕ ಚಿಂತನೆಗೆ ಪ್ರೇರೇಪಣೆ ನೀಡುತ್ತದೆ. ಹೊಸ ಕಲ್ಪನೆಗಳು ಹೊಳೆಯುತ್ತವೆ.ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನಡಿಗೆಯ ದೈಹಿಕ ಚಟುವಟಿಕೆಯಿಂದ ಇನ್ನೂ ಕೆಲವು ಉಪಯೋಗಗಳಿವೆ. ಸುಖವಾಗಿ ನಿದ್ರೆ ಹೋಗಲು ನೆರವಾಗುತ್ತದೆ.

ಸ್ಪಷ್ಟ ಚಿಂತನಾ ಪ್ರಕ್ರಿಯೆಗಳಿಗೆ ರಾತ್ರಿ ನಿದ್ರೆ ಅತ್ಯವಶ್ಯಕ. ನೀವು ನಡಿಗೆ ಮುಂದುವರಿಸಿದಂತೆ ನಿಮ್ಮ ಸ್ವಂಪ್ರೇರಣೆ ಮತ್ತು ಇಚ್ಛಾಶಕ್ತಿ ಆಳವಾಗುತ್ತದೆ. ನಿಮಗೆ ಬೇಕಾದ ಮಾನಸಿಕ ಶಕ್ತಿ ಲಭ್ಯವಾಗುತ್ತದೆ. ನೀವು ಮಾನಸಿಕ ಉದ್ವೇಗಕ್ಕೆ ಒಳಗಾದಾಗ ನಡಿಗೆಗೆ ಸ್ವಲ್ಪ ಸಮಯ ವಿನಿಯೋಗಿಸಿ. ನಿಮ್ಮ ಮಾನಸಿಕ ಹೊರೆಯಿಂದ ಸ್ವಲ್ಪ ಮಟ್ಟಿಗೆ ಉಪಶಮನ ಸಿಗುತ್ತದೆ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಇಷ್ಟು ಹೇಳಿದ ಮೇಲೂ ತಡಮಾಡದೇ ಇಂದೇ ವಾಕಿಂಗ್ ಆರಂಭಿಸಿ.

ವೆಬ್ದುನಿಯಾವನ್ನು ಓದಿ