ಮನಸ್ಸು, ದೇಹಕ್ಕೆ ಚೈತನ್ಯ ನೀಡುವ ನಿದ್ರೆ

ಹಗಲೆಲ್ಲ ದುಡಿದ ಮನುಷ್ಯ ರಾತ್ರಿಯಾಯಿತೆಂದರೆ ನಿದ್ರೆಗೆ ಶರಣಾಗುವುದು ಸೋಜಿಗದ ಸಂಗತಿ. ಮನುಷ್ಯನು ಕೋಮಾ ಸ್ಥಿತಿಗೆ ಜಾರಿದ ರೀತಿಯಲ್ಲಿ ನಿದ್ರಾವಶನಾಗುವುದು ಹೇಗೆ ಎನ್ನುವುದೇ ನಿಗೂಢ. ಏನೇ ಇರಲಿ ವಯಸ್ಕ ಪುರುಷರಿಗೆ 7ರಿಂದ 9 ಗಂಟೆಗಳ ಗರಿಷ್ಠ ಮಟ್ಟದ ನಿದ್ರೆ ಅವಶ್ಯಕ. ನಿದ್ರೆಯು ನಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ದಿನನಿತ್ಯದ ಒತ್ತಡ ಮತ್ತು ಆಯಾಸದಿಂದ ಮುಕ್ತಗೊಳಿಸುತ್ತದೆ.

ಆದಾಗ್ಯೂ, ಅನೇಕ ಮಂದಿ ಸ್ವಲ್ಪ ಪ್ರಮಾಣದಲ್ಲಾದರೂ ನಿದ್ರಾಹೀನತೆಯಿಂದ ಬಳಲುತ್ತಾರೆ. ಬಿಡುವಿಲ್ಲದ ಕೆಲಸದ ವೇಳಾಪಟ್ಟಿ ಮತ್ತು ಪೂರ್ಣ ಸಾಮಾಜಿಕ ಜೀವನ ಕೂಡ ನಿದ್ರೆಯಿಂದ ವಂಚಿತರನ್ನಾಗಿ ಮಾಡುತ್ತದೆ. ನಿದ್ರೆಯಿಂದ ವಂಚಿತರಾಗಲು ಮೂರು ಮುಖ್ಯ ಕಾರಣಗಳಿವೆ.

ಅತಿಯಾದ ಸಾಮಾಜಿಕ ಚಟುವಟಿಕೆ, ಕೆಲಸದ ವೇಳಾಪಟ್ಟಿ ಮತ್ತು ನಿದ್ರಾಭಂಗ. ಒತ್ತಡ, ಉಷ್ಣಾಂಶ ಮತ್ತು ಸದ್ದು ಮುಂತಾದ ಪರಿಸರ ಕಾರಣಗಳು, ದೈಹಿಕ ಅಂಶಗಳು ಮತ್ತು ಕೆಲವು ಬಾರಿ ಔಷಧಿಗಳು ನಿದ್ರಾಭಂಗಕ್ಕೆ ಕಾರಣವಾಗಿರುತ್ತದೆ.

ನಿದ್ರೆಯ ಕೊರತೆಯಿಂದ ಅನೇಕ ಸಮಸ್ಯೆಗಳಿಗೆ ದಾರಿಯಾಗುತ್ತದೆ. ದಿನನಿತ್ಯದ ಜೀವನ ಒತ್ತಡದಿಂದ ಕೂಡಿರುತ್ತದೆ, ಸರಳ ಕೆಲಸಗಳು ಕೂಡ ಕಷ್ಟಕರವಾಗಿ ಗೋಚರಿಸುತ್ತದೆ, ಸ್ಮರಣಶಕ್ತಿಯನ್ನು ಕುಂಠಿತಗೊಳಿಸುತ್ತದೆ ಮತ್ತು ಕೆಲಸದ ಸ್ಥಳದಲ್ಲಿ ಮತ್ತು ಮನೆಯಲ್ಲಿ ಕೂಡ ಅನೇಕ ತಪ್ಪುಗಳಿಗೆ ಎಡೆಮಾಡುತ್ತದೆ.

ಇದೆಲ್ಲಕ್ಕಿಂತ ಕೆಟ್ಟ ಸಂಗತಿಯೆಂದರೆ ನಿದ್ರಾಹೀನತೆಯು ಕೆಲಸದ ಸ್ಥಳದಲ್ಲಿ, ಮನೆಯಲ್ಲಿ ಮತ್ತು ಅದಕ್ಕಿಂತ ಗಂಭೀರವಾಗಿ ಹೆದ್ದಾರಿಗಳಲ್ಲಿ ಅಪಘಾತಕ್ಕೆ ದಾರಿ ಮಾಡುತ್ತದೆ. ಅಮೆರಿಕದಲ್ಲಿ ಚಲಿಸುವ ವಾಹನದಲ್ಲೇ ನಿದ್ರೆಗೆ ಶರಣಾಗುವ, ತೂಕಡಿಸುವ ಚಾಲಕರಿಂದ ಪ್ರತಿವರ್ಷ 1500 ಜನರು ಬಲಿಯಾಗುತ್ತಿದ್ದಾರೆಂದು ಕಾರ್ನೆಲ್ ವಿವಿ ಮನಃಶಾಸ್ತ್ರಜ್ಞ ಮತ್ತು ನಿದ್ರಾ ತಜ್ಞ ಜಾಮ್ಸ್ ಮಾಸ್ ಹೇಳುತ್ತಾರೆ.

ಅತಿಯಾದ ಬಳಲಿಕೆಯಾದಾಗ, ನಿದ್ರೆಯ ಜೋಂಪಿನಲ್ಲಿರುವಾಗ ವಾಹನ ಚಾಲನೆ ಮಾಡುವುದು ಕುಡಿದು ವಾಹನ ಚಾಲನೆ ಮಾಡಿದಷ್ಟೇ ಅಪಾಯಕಾರಿ ಎಂದು ಹೇಳಲಾಗಿದೆ. ದೇಹ ಮತ್ತು ಮನಸ್ಸಿನ ಚೈತನ್ಯಕ್ಕೆ 10 ಅಥವಾ 15 ನಿಮಿಷಗಳ ಸಣ್ಣ ಜೋಂಪು ನಿದ್ರೆಯಿಂದ ನಿದ್ರಾಹೀನತೆಯನ್ನು ತಡೆಯಬಹುದು ಎಂದು ಪ್ರೊ.ಮಾಸ್ ಸಲಹೆ ಮಾಡುತ್ತಾರೆ.
ನಾವು ಸಂಪೂರ್ಣವಾಗಿ ನಿದ್ರಾಹೀನತೆ ತಡೆಯಲು ಸಾಧ್ಯವಿಲ್ಲ.

ಆದರೆ ನಿದ್ರೆಯ ಗುಣಮಟ್ಟ ಸುಧಾರಣೆಗೆ ಕೆಲವು ಕ್ರಮಗಳನ್ನಾದರೂ ಕೈಗೊಳ್ಳುವುದು ಸಾಧ್ಯ. ಕಾಫಿ, ಆಲ್ಕೊಹಾಲ್ ಮತ್ತಿತರ ಉತ್ತೇಜಕಗಳ ಸೇವನೆಯನ್ನು ಕಡಿಮೆ ಮಾಡುವುದು, ನಿಯಮಿತ ವೇಳಾಪಟ್ಟಿ ಇಟ್ಟುಕೊಳ್ಳುವುದು, ದಿನದ ಆರಂಭದಲ್ಲಿ ಕೆಲವು ಹಗುರ ವ್ಯಾಯಾಮಗಳನ್ನು ಮಾಡುವುದು ಮತ್ತು ಮಲಗುವ ಸಂದರ್ಭದಲ್ಲಿ ಒತ್ತಡವನ್ನು ತಗ್ಗಿಸುವುದರಿಂದ ನಾವು ನಿದ್ರೆಗೆ ಶೀಘ್ರದಲ್ಲೇ ಶರಣಾಗಬಹುದು.

ವೆಬ್ದುನಿಯಾವನ್ನು ಓದಿ