ಮಾನಸಿಕ ಖಿನ್ನತೆಗೆ ಆಯಸ್ಕಾಂತ ಚಿಕಿತ್ಸೆ

ಶುಕ್ರವಾರ, 23 ನವೆಂಬರ್ 2007 (17:27 IST)
ಮಾನಸಿಕ ಖಿನ್ನತೆ ಅನೇಕ ಕಾರಣಗಳಿಂದ ವ್ಯಕ್ತಿಯೊಬ್ಬನಿಗೆ ಕಾಣಿಸಿಕೊಳ್ಳಬಹುದು. ನಕಾರಾತ್ಮಕ ಚಿಂತನೆ, ಮಾನಸಿಕ ಆಘಾತ, ಪರೀಕ್ಷೆಯಲ್ಲಿ ವೈಫಲ್ಯ, ಯಾವುದಾದರೂ ಚಿಂತೆ ಹಚ್ಚಿಕೊಂಡು ಕೊರಗುವುದರಿಂದ ಮಾನಸಿಕ ಖಿನ್ನತೆ ಗೋಚರಿಸುತ್ತದೆ. ಮಾನಸಿಕ ಖಿನ್ನತೆಯುಳ್ಳ ವ್ಯಕ್ತಿಗಳಿಗೆ ಖಿನ್ನತೆ ನಿಗ್ರಹದ ಔಷಧಿಗಳನ್ನು ನೀಡುವ ಮೂಲಕ ಖಿನ್ನತೆಯನ್ನು ದೂರಮಾಡಬಹುದು.

ಆದರೆ ಖಿನ್ನತೆಯು ಹೆಚ್ಚಿನ ಪ್ರಮಾಣದಲ್ಲಿದ್ದರೆ ಆಯಸ್ಕಾಂತದ ಮೂಲಕ ಚಿಕಿತ್ಸೆಯಿಂದ ಉತ್ತಮ ಫಲಿತಾಂಶ ಸಿಕ್ಕಿದೆ. ಹೆಚ್ಚಿನ ಮಾನಸಿಕ ಖಿನ್ನತೆ ಅನುಭವಿಸುವ ರೋಗಿಗಳ ಮೆದುಳಿಗೆ ಆಯಸ್ಕಾಂತೀಯ ಚಿಕಿತ್ಸೆಯ ಮೂಲಕ ಉದ್ದೀಪನವು(ಟಿಎಂಎಸ್) ಪರಿಣಾಮಕಾರಿ, ಔಷಧಿರಹಿತ ಚಿಕಿತ್ಸೆಯೆಂದು ದೊಡ್ಡ ಪ್ರಮಾಣದ ಅಧ್ಯಯನದಿಂದ ಪತ್ತೆಯಾಗಿದೆ.

ಮನಃಶಾಸ್ತ್ರದ ಪ್ರಾಧ್ಯಾಪಕ ಡಾ. ಫಿಲಿಪ್ ಜಾನಿಕಾಕ್ ಈ ಚಿಕಿತ್ಸೆಯು ಸಾಂಪ್ರದಾಯಿಕ ಖಿನ್ನತೆ ನಿಗ್ರಹ ಔಷಧಿಗಳಿಗೆ ಪ್ರತಿಕ್ರಿಯಿಸದ ಅತೀ ಖಿನ್ನತೆಯ ಲಕ್ಷಣಗಳಿಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ. ಆಯಸ್ಕಾಂತೀಯ ಕಂಪನಗಳನ್ನು ಹಾಯಿಸಿದಾಗ ಮೆದುಳಿನ ನ್ಯೂರೋನ್‌ಗಳನ್ನು ಉದ್ದೀಪನಗೊಳಿಸುತ್ತವೆ. ಈ ಅಧ್ಯಯನದಲ್ಲಿ ಮುಂಚಿನ ಖಿನ್ನತೆವಿರೋಧಿ ಚಿಕಿತ್ಸೆಗಳಿಗೆ ಸ್ಪಂದಿಸದಿರುವ ಖಿನ್ನತೆ ರೋಗಿಗಳನ್ನು ಒಳಪಡಿಸಲಾಯಿತು.

ಅಧ್ಯಯನದ ಸಂದರ್ಭದಲ್ಲಿ ಖಿನ್ನತೆ ನಿಗ್ರಹ ಔಷಧಿಗಳನ್ನು ಅವರು ಸೇವಿಸುವುದನ್ನು ಬಿಟ್ಟಿದ್ದರು. ಸುಮಾರು 4ರಿಂದ 6 ವಾರಗಳ ಬಳಿಕ ಅವರ ಪ್ರತಿಕ್ರಿಯೆ ಮತ್ತು ಕಾಯಿಲೆಯ ಪ್ರಮಾಣದ ದರಗಳನ್ನು ಗಮನಿಸಲಾಯಿತು. ಈ ಚಿಕಿತ್ಸೆಗೆ ರೋಗಿಗಳು ಸೂಕ್ತವಾಗಿ ಸ್ಪಂದಿಸಿದ್ದು ಕಂಡುಬಂತು.

ಇದರ ಫಲಿತಾಂಶಗಳಿಂದ ಖಿನ್ನತೆವಿರೋಧಿ ಔಷಧಿಗಳಿಗೆ ಸ್ಪಂದಿಸದ ರೋಗಿಗಳಿಗೆ ಟಿಎಂಎಸ್ ಹೊಸ ಮತ್ತು ಆಕರ್ಷಕ ಚಿಕಿತ್ಸಾ ವಿಧಾನವಾಗಿದೆಯೆಂಬುದು ಸಾಬಾತಾಗಿದೆ ಎಂದು ಪೆನ್ಸಿಲ್‌ವೇನಿಯಾ ವಿವಿಯ ಮನಃಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಜಾನ್ ಪಿ ಒರಿಯರ್ಡನ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ