ಮೆದುಳಿನ ರಚನೆಯ ವ್ಯತ್ಯಾಸದಿಂದ ಒಸಿಡಿ

ಸೋಮವಾರ, 26 ನವೆಂಬರ್ 2007 (16:35 IST)
ಆಬ್ಸೆಸಿವ್ ಕಂಪಲ್ಸಿವ್ ಡಿಸ್‌ಆರ್ಡರ್‌(ಒಸಿಡಿ) ಅಥವಾ ಮಾನಸಿಕ ಕಳವಳದ ಕಾಯಿಲೆಯು ಮೆದುಳಿನ ರಚನೆಯಲ್ಲಿ ವ್ಯತ್ಯಾಸದಿಂದ ಉಂಟಾಗುತ್ತದೆ ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದು, ಈ ಅವ್ಯವಸ್ಥೆಗೆ ಹೊಸ ಚಿಕಿತ್ಸೆಗಳನ್ನು ಶೋಧಿಸಲು ದಾರಿ ಕಲ್ಪಿಸಿದೆ. ಈ ಆತಂಕದ ಸ್ಥಿತಿಯಿಂದ ವ್ಯಕ್ತಿ ಪುನರಾವರ್ತನೆಯ ವಾಡಿಕೆಗಳನ್ನು ಇಟ್ಟುಕೊಳ್ಳುತ್ತಾನೆ.

ಪದೇ ಪದೇ ಕೈತೊಳೆಯುವುದು, ಮನೆಗೆ ಬೀಗವನ್ನು ಹಾಕಿದೆಯೇ, ಇಲ್ಲವೇ ಎಂದು ಪುನಃ ಪುನಃ ನೋಡಿಕೊಳ್ಳುವುದು ಮತ್ತು ವಸ್ತುಗಳನ್ನು ಪದೇ ಪದೇ ಜೋಡಿಸಿಡುವುದು ಇದರ ಲಕ್ಷಣಗಳು. ಈ ಕಾಯಿಲೆಗೆ ಒಳಗಾಗುವ ಮೆದುಳಿನ ಭಾಗವನ್ನು ವಿಜ್ಞಾನಿಗಳು ಗುರುತಿಸಿದ್ದು, ಹೊಸ ಔಷಧಿಗಳು ಮತ್ತು ರೋಗಗುರುತಿಸುವ ಪರೀಕ್ಷೆಗಳಿಗೆ ಅವು ನೆರವಾಗಬಹುದು.

ಕೇಂಬ್ರಿಜ್ ವಿವಿಯ ಸಂಶೋಧಕರು ಒಸಿಡಿಯ ಕೌಟುಂಬಿಕ ಹಿನ್ನೆಲೆಯಿರುವ ಗುಂಪಿನ ಮತ್ತು ಒಸಿಡಿ ಹಿನ್ನೆಲೆ ಇಲ್ಲದಿರುವ ಆರೋಗ್ಯಯುಕ್ತ ಗುಂಪಿನ ಒಟ್ಟು 31 ಜನರ ಮೆದುಳಿನ ಸ್ಕ್ಯಾನ್‌ಗಳನ್ನು ತೆಗೆದುಕೊಂಡಿತು ಎಂದು ಡೇಲಿ ಮೇಲ್ ವರದಿ ಮಾಡಿದೆ.

ಈ ಮೆದುಳಿನ ಚಿತ್ರಗಳನ್ನು ಹೋಲಿಸಿದಾಗ ಒಸಿಡಿ ರೋಗಿಗಳು ಮತ್ತು ಅವರ ಬಂಧುಗಳ ಮೆದುಳಿನ ಭಾಗದಲ್ಲಿ ನಡವಳಿಕೆಯನ್ನು ನಿಯಂತ್ರಿಸುವ ಬೂದುಬಣ್ಣದ ಪದಾರ್ಥ ಕಡಿಮೆಯಿರುವುದು ಪತ್ತೆಯಾಯಿತು.

ಒಸಿಡಿ ಮೆದುಳಿನ ರಚನೆಯ ಸ್ವರೂಪಕ್ಕೆ ಸಂಬಂಧಿಸಿದ್ದು, ಕುಟುಂಬಗಳಲ್ಲಿ ಅನುವಂಶೀಯತೆಯ ಕಾಯಿಲೆಯಾಗಿ ಕಾಣಿಸಿಕೊಳ್ಳುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಒಸಿಡಿಯ ಪ್ರಸಕ್ತ ಗುರುತಿಸುವಿಕೆಯಿಂದ ಸುಧಾರಿತ ಕ್ಲಿನಿಕಲ್ ಚಿಕಿತ್ಸೆಗಳನ್ನು ನೀಡಲು ಸಹಾಯಕವಾಗುತ್ತದೆ ಎಂದು ಸಂಶೋಧಕಿ ಲಾರಾ ಮೆಂಜೀಸ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ