ಮಾನವಜನಾಂಗ ನಿರಾಶೆ ಪಡುವ ಸಂಗತಿಯೇನೆಂದರೆ ಸಾವನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲವೆನ್ನುವುದು. ಆದರೆ ಸಾವನ್ನು ಸುದೀರ್ಘ ಜೀವನದ ಮೂಲಕ ಮುಂದೂಡಲು ಸಾಧ್ಯ.
ನಾವು ನಿಜವಾಗಲೂ ಸುದೀರ್ಘ ಜೀವನ ನಡೆಸಬೇಕೆಂದು ಬಯಸಿದ್ದರೆ ನಮ್ಮ ನಡವಳಿಕೆಯನ್ನು ತಿದ್ದಿಕೊಳ್ಳುವುದರೊಂದಿಗೆ ಅದು ಆರಂಭವಾಗಬೇಕು. ನಮ್ಮ ಆಲೋಚನೆ ವಿಧಾನವು ನಮ್ಮ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುವುದರ ಜತೆಗೆ ವಾಸ್ತವವಾಗಿ ಎಷ್ಟು ವರ್ಷ ಜೀವಿಸುತ್ತೇವೆ ಎನ್ನುವುದರ ಮೇಲೆ ಪರಿಣಾಮ ಬೀರುತ್ತದೆ.
2002ರಲ್ಲಿ ರೊಕೆಸ್ಟರ್ ಮೇಯೊ ಕ್ಲಿನಿಕ್‌ನಲ್ಲಿ ನಡೆಸಿದ ಸಂಶೋಧನೆಯಲ್ಲಿ ಆಶಾವಾದಿ ಜನರು ನಿರಾಶಾವಾದಿ ಜನರಿಗೆ ಹೋಲಿಸಿದರೆ ತಮ್ಮ ಅಕಾಲಿಕ ಸಾವನ್ನು ಶೇ.50ರಷ್ಟು ಇಳಿಮುಖಗೊಳಿಸುತ್ತಾರೆ ಎಂದು ಪತ್ತೆಹಚ್ಚಲಾಗಿದೆ.
ಅಕಾಲಿಕ ಸಾವು ಅಥವಾ ಅನಾರೋಗ್ಯದ ಮೇಲೆ ಅಪಾಯಕಾರಿ ಅಂಶವಾಗಿ ವ್ಯಕ್ತಿತ್ವವು ಹೇಗೆ ಪಾತ್ರವಹಿಸುತ್ತದೆ ಎಂಬ ನಿಖರ ವ್ಯವಸ್ಥೆಯು ಸ್ಪಷ್ಟವಾಗಿ ಗೋಚರವಾಗಿಲ್ಲ ಎಂದು ಅಧ್ಯಯನ ಮುಖ್ಯ ಸಂಶೋಧನೆಕಾರ ಡಾ.ತೋಷಿಕೊ ಮರುಟಾ ಹೇಳಿದ್ದಾರೆ. ಆಶಾವಾದಿಗಳಿಗೆ ದೇಹದ ಆರೋಗ್ಯ, ವೃತ್ತಿಜೀವನದ ಸಾಧನೆಗಳು ಮತ್ತು ಮಾನಸಿಕ ಒತ್ತಡ ವಿಶೇಷವಾಗಿ ಖಿನ್ನತೆಯ ಸಮಸ್ಯೆಗಳನ್ನು ನಿಭಾಯಿಸುವ ಅವಕಾಶ ಹೆಚ್ಚಿರುತ್ತದೆ.
ಆಶಾವಾದವಲ್ಲದೇ ಇನ್ನೂ ಕೆಲವು ವ್ಯಕ್ತಿಗತ ಲಕ್ಷಣಗಳು ಸುದೀರ್ಘ ಜೀವನಕ್ಕೆ ಸಹಾಯ ಮಾಡುತ್ತದೆ. ಕ್ಯಾಲಿಫೋರ್ನಿಯ ವಿವಿಯ ಮನಃಶಾಸ್ತ್ರಜ್ಞರಾದ ಡಾ. ಹೋವಾರ್ಡ್ ಫ್ರೈಡ್‌ಮ್ಯಾನ್ ಪ್ರಕಾರ ಗಮನಾರ್ಹ ರೀತಿಯಲ್ಲಿ ಮಾನಸಿಕ ಪ್ರಜ್ಞೆಯು ನಮ್ಮ ಸಾವಿಗೆ ಸಂಬಂಧಿಸಿದೆ. ಟರ್ಮನ್ ಜೀವನಚಕ್ರ ಅಧ್ಯಯನವು ವ್ಯಕ್ತಿತ್ವ, ಅಭ್ಯಾಸಗಳು, ಸಾಮಾಜಿಕ ಸಂಬಂಧಗಳು, ಶಿಕ್ಷಣ, ಬೌತಿಕ ಚಟುವಟಿಕೆಗಳು ಮತ್ತು ಸಾವಿನ ಕಾರಣಗಳು ಮುಂತಾದ ಹಲವಾರು ಅಂಶಗಳ ಬಗ್ಗೆ ಅಧ್ಯಯನ ಮಾಡಿತು.
ವಯಸ್ಕ ಪ್ರಜ್ಞೆ ಕಡಿಮೆ ಮಟ್ಟದಲ್ಲಿರುವವರಿಗೆ ಬೇಗ ಸಾವು ಸಂಭವಿಸುತ್ತದೆ ಎಂದು ಫ್ರೈಡ್‌ಮ್ಯಾನ್ ತೀರ್ಮಾನಿಸಿದರು. ಪ್ರಜ್ಞೆ ಎಂದರೆ ರಸ್ತೆಯನ್ನು ದಾಟುವಾಗ ಎರಡೂ ಕಡೆ ದಿಟ್ಟಿಸುವುದಲ್ಲ. ಪ್ರಜ್ಞೆಯೆಂದರೆ ಹಸಿರು ದೀಪ ಬೆಳಗಿದಾಗ ಎರಡೂ ದಿಕ್ಕಿನಲ್ಲಿ ನೋಡುವುದಾಗಿದೆ. ಏಕೆಂದರೆ ನಿಧಾನವಾಗಿ ನಡೆಯುವ ಪಾದಚಾರಿಯೊಬ್ಬನಿಗೆ ಆಕಸ್ಮಿಕ ಡಿಕ್ಕಿ ಹೊಡೆಯುವ ಸಂಭವವಿರುತ್ತದೆ.
ಕೆಲವು ಮಾನಸಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ರಚನಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸುವ ಮನೋವೃತ್ತಿ ಹೊಂದಿರುವುದು ಕೂಡ ಪ್ರಜ್ಞಾವಂತ ವ್ಯಕ್ತಿಯ ಸುದೀರ್ಘ ಜೀವನದ ಗುಟ್ಟಾಗಿದೆ. ಜಗತ್ತನ್ನು ರಂಗುರಂಗಿನ ಬಣ್ಣದ ಗಾಜಿನಿಂದ ನೋಡುವುದರ ಜತೆಗೆ ದೀರ್ಘಾಯುಷಿಯು ಕೆಲವು ಸಾಂಪ್ರದಾಯಿಕ ಅಭ್ಯಾಸಗಳನ್ನೂ ಅನುಸರಿಸಬೇಕಾಗುತ್ತದೆ.
ಧೂಮಪಾನ ವರ್ಜ್ಯ, ಸಮತೋಲಿತ ಆಹಾರ ಸೇವನೆ, ಆರೋಗ್ಯಯುಕ್ತ ತೂಕವನ್ನು ಕಾಯ್ದುಕೊಳ್ಳುವುದು ಕೂಡ ದೀರ್ಘಾಯುಷಿಗೆ ಅತ್ಯಗತ್ಯವಾಗಿದೆ.ಮಧುಮೇಹ, ಹೃದಯಬೇನೆ ಮತ್ತು ಕ್ಯಾನ್ಸರ್‌ಗಳಿಗೆ ಸ್ಥೂಲಕಾಯ ಕೊಡುಗೆ ನೀಡುತ್ತದೆನ್ನುವುದನ್ನು ಸಂಶೋಧನೆ ಸಾಬೀತು ಮಾಡಿದೆ. ಕೆಲವು ಜೀವನಶೈಲಿ ಆಯ್ಕೆಗಳು ಎಷ್ಟೊಂದು ಪ್ರಭಾವಶಾಲಿಯಾಗಿದೆಯೆಂದರೆ ದೈಹಿಕ ಚಟುವಟಿಕೆ ನಿರ್ವಹಣೆ ಜತೆಗೆ ಸಮತೋಲಿತ ಆಹಾರ ಮತ್ತು ಸೂಕ್ತ ದೇಹದ ತೂಕವು ಕ್ಯಾನ್ಸರ್ ಪ್ರಮಾಣವನ್ನು ಶೇ.30ರಿಂದ ಶೇ.40ರಷ್ಟು ಕುಂದಿಸುತ್ತದೆ ಎಂದು ಕ್ಯಾನ್ಸರ್ ಸಂಶೋಧನೆಯ ಅಮೆರಿಕದ ಸಂಸ್ಥೆ ಹೇಳಿದೆ.
ಸಾಕುಪ್ರಾಣಿಪ್ರಿಯರು ಸಂತೋಷಪಡುವ ಸಂಗತಿಯೇನೆಂದರೆ ಸಾಕುಪ್ರಾಣಿಗಳ ಬಗ್ಗೆ ಅವರ ಮಮತೆಯು ಅವರ ಜೀವನಕ್ಕೆ ಇನ್ನಷ್ಟು ವರ್ಷಗಳನ್ನು ಸೇರಿಸುತ್ತದೆ ಎನ್ನುವುದು. ಪ್ರಾಣಿಗಳು ಸಂಗಾತಿಗಳಾಗಿ ಇರುವುದರಿಂದ ಮಾನಸಿಕ ದಣಿವು ನೀಗುತ್ತದೆ. ಒತ್ತಡದ ಹಾರ್ಮೋನ್ ಕಾರ್ಟಿಸಲ್ ಪ್ರಮಾಣ ಕಡಿಮೆಯಾಗುತ್ತದೆ. ನಮ್ಮ ಮಾನಸಿಕ ಒತ್ತಡ ಕುಂದಿಸುವ ಮುದ್ದಿನ ಪ್ರಾಣಿಗಳ ಸಾಂಗತ್ಯದಿಂದ ಜೀವನ ವಿಸ್ತರಣೆ ಲಕ್ಷಣಗಳು ಕಾಣುತ್ತವೆ. ಅತ್ಯುತ್ಸಾಹದ ಸಾಕುನಾಯಿ ನಮ್ಮ ಜತೆ ಇಲ್ಲದಿದ್ದರೆ ಎಷ್ಟು ಮಂದಿಗೆ ದೈಹಿಕ ವ್ಯಾಯಾಮ ಸಿಗುತ್ತದೆಂದು ಪ್ರಶ್ನಿಸಿಕೊಳ್ಳಬೇಕಾಗಿದೆ.