ಆಧುನಿಕ ಜೀವನ ಶೈಲಿಯಲ್ಲಿ ತಮ್ಮ ಆಹಾರದ ಬಗ್ಗೆ ಹೆಚ್ಚು ಗಮನವೀಯದವರು ಅನೇಕ ರೋಗಗಳಿಂದ ಬಳಲುತ್ತಿರುವುದು ದಿನನಿತ್ಯದ ಸಂಗತಿಯಾದರೂ ಅದರಲ್ಲಿ ಬಹುತೇಕ ಮಂದಿಯು ಹೃದಯದ ಕಾಯಿಲೆಗೆ ತುತ್ತಾಗಿರುವುದನ್ನು ನಾವು ಕಾಣಬಹುದು. ಆಧುನಿಕತೆಯ ಭರಾಟೆಯಲ್ಲಿ ತಾವು ಸೇವಿಸುತ್ತಿರುವ ಆಹಾರ ತಮ್ಮ ಹೊಟ್ಟೆ ತುಂಬಿದರೆ ಸಾಕು ಅಥವಾ ನಾಲಗೆಗೆ ರುಚಿಯೆನಿಸುವ ಯಾವುದೇ ವಸ್ತುಗಳನ್ನು ಸೇವಿಸುವುದರೆ ಸಾಕೆನ್ನುವುದು ಇಂದಿನ ಜನಾಂಗದ "ಶೈಲಿ " ಆಗಿಬಿಟ್ಟಿದೆ.
ತಾವು ಸೇವಿಸುವ ಆಹಾರವು ದೇಹಕ್ಕೆ ಯೋಗ್ಯವೋ ಎಂಬುದನ್ನು ಅರಿತು ಆಹಾರ ಸೇವಿಸುವವರು ನಮ್ಮಲ್ಲಿ ಅತೀವಿರಳ.ಆದುದರಿಂದಲೇ ಬಹುತೇಕ ಮಂದಿಯು ಹಲವು ರೋಗಗಳಿಂದ ಬಳಲುತ್ತಿದ್ದು ಅಂತವುಗಳಲ್ಲಿ ಹೃದ್ರೋಗವು ಒಂದಾಗಿದ್ದು, ಇದು ಜಗತ್ತಿನಾದ್ಯಂತ ತಲೆದೋರಿದ್ದು ಹಲವು ಜನರನ್ನು ಈಗಾಗಲೇ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಕಾಲ ಕಳೆದಂತೆ ಇದು ಯುವಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಅಂದರೆ ಇಂದು ಹೃದಯ ಕಾಯಿಲೆಯು 30ರ ಹರೆಯದಲ್ಲೇ ಕಾಣಿಸಿಕೊಳ್ಳತೊಡಗಿದೆ ಎಂಬುದು ದುಃಖದ ವಿಷಯ. ಪಾಶ್ಚಾತ್ಯ ಸಂಸ್ಕೃತಿಯ ಬೆನ್ನು ಹತ್ತಿ ಫಾಸ್ಟ್ ಫುಡ್ ,ಜಂಕ್ ಫುಡ್ ಜೊತೆಗೆ ಆರಾಮವಿಲ್ಲದ ಕೆಲಸ, ಜೀವನದ ನಡುವೆ ಇಂದಿನ ಯುವಜನರು ತೊಳಲಾಡುತ್ತಿರುವಾಗ ಭಾರತದಲ್ಲಿ ಹೃದ್ರೋಗದ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಬರುತ್ತಿರುವುದು ಖೇದಕರ.
ಈ ರೋಗವನ್ನು ನಿಯಂತ್ರಿಸ ಬೇಕಾದರೆ ನಾವು ಸೇವಿಸುವ ಆಹಾರವನ್ನು ನಿಯಂತ್ರಣಕ್ಕೆ ತರಲೇ ಬೇಕು ಅಂದರೆ ಸಮತೂಕದ ಆಹಾರ ಸೇವನೆಯು ಅತೀ ಮುಖ್ಯ.ಅತಿಯಾದ ಆಹಾರ ಸೇವನೆಯು ಹಲವು ರೋಗಗಳಿಗೆ ರಹದಾರಿ ಅದರಂತೆಯೇ ನಾವು ಸೇವಿಸುವ ಆಹಾರಗಳು ಆರೋಗ್ಯಕರವಾಗಿ ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದರೆ ಮಾತ್ರ ದೇಹದ ಪ್ರತಿಯೊಂದು ಭಾಗವು ಆರೋಗ್ಯಕರವಾಗಿರಬಲ್ಲದು.
ನಮ್ಮ ದೇಹದ ಪ್ರಧಾನ ಅಂಗವಾದ ಹೃದಯ ದೇಹದ ಎಲ್ಲಾ ಭಾಗಗಳಿಗೂ ರಕ್ತ ಸಂಚಾರ ನಡೆಸುವಂತೆ ಪ್ರವರ್ತಿಸುತ್ತಿದ್ದು ಇದರ ಆರೋಗ್ಯದ ಬಗ್ಗೆ ಗಮನಹರಿಸುವವರು ಅತೀ ವಿರಳ. ಯಾಕೆಂದರೆ ತಾವು ತಿನ್ನುವ ಆಹಾರದ ಪರಿಣಾಮವು ಬರೀ ಹೊಟ್ಟೆಗೆ ಮಾತ್ರ ಸೀಮಿತವಾಗಿದೆ ಎಂದು ಬಹುತೇಕ ಮಂದಿಯ ಅನಿಸಿಕೆ.
ಆದುದರಿಂದಲೇ ಹೃದಯದ ಬಗ್ಗೆ ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಪರಿಣಾಮ ಹೃದಯಾಘಾತ, ಹೃದಯಸ್ತಂಭನಗಳು ಇಲ್ಲವೇ ಇನ್ನಿತರ ಹೃದ್ರೋಗಗಳು ತಲೆದೋರಿದಾಗ ಮಾತ್ರ ನಾವು ಹೃದಯದ ಬಗ್ಗೆ ಎಚ್ಚೆತ್ತುಕೊಳ್ಳುತ್ತೇವೆ. ಆಹಾರ ಸೇವನೆಯ ಬಗ್ಗೆ ಕಾಳಜಿ ವಹಿಸುವುದರಿಂದ ಹೃದ್ರೋಗವನ್ನು ತಡೆಯಬಹುದು, ಸಮತೂಕದ ಆಹಾರ ಸೇವನೆಯು ಇದಕ್ಕೆ ದಿವ್ಯೌಷಧಿಯಾಗಿದೆ.
ಆರೋಗ್ಯಯುತವಾದ ಹೃದಯಕ್ಕಾಗಿ ಕೆಲವು ಸಲಹೆಗಳು:
ಸಮತೂಕದ ಆಹಾರ ಸೇವನೆ ವ್ಯಾಯಾಮ ಶುದ್ಧವಾದ ವಾಯು ಸೇವನೆ ಮಾದಕ ವಸ್ತುಗಳನ್ನು ಬಳಸದೇ ಇರುವುದು ಚಿಂತೆ, ವ್ಯಾಕುಲತೆಗಳಿಂದ ದೂರವಿರುವುದು
ಸಮತೂಕದ ಆಹಾರ ದೇಹಕ್ಕೆ ಪೌಷ್ಟಿಕತೆಯನ್ನು ಒದಗಿಸುವಂತಹ ಆಹಾರಗಳನ್ನು ಸರಿಯಾದ ರೀತಿಯಲ್ಲಿ,ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಅಳತೆಯಲ್ಲಿ ಸೇವಿಸುವಂತಹ ಆಹಾರವು ಸಮತೂಕದ ಆಹಾರ ಎಂದು ಕರೆಯಲ್ಪಡುತ್ತದೆ. ತಾವು ಸೇವಿಸುವ ಆಹಾರವು ಸರಿಯಾಗಿ ಪಚನಗೊಳ್ಳುವಂತಿರಬೇಕು ಅದಕ್ಕಾಗಿ ಧಾರಾಳ ನೀರು ಅಥವಾ ದ್ರವಾಹಾರ ಸೇವಿಸುವುದು ಉತ್ತಮ.ತಾವು ಸೇವಿಸುವ ಆಹಾರವು ಪೋಷಕ ಸಮೃದ್ಧವಾಗಿರಲಿ ಮತ್ತು ಶುಚಿಯಾಗಿರಲಿ.
ಹೃದಯದ ಆರೋಗ್ಯಕ್ಕಾಗಿ ಆಹಾರಸೇವನೆಯಲ್ಲಿ ಅಳವಡಿಸಿಕೊಳ್ಳ ಬೇಕಾದ ಅಂಶಗಳು ಇಂತಿವೆ:
ಎಣ್ಣೆ ,ಕೊಬ್ಬು ಪದಾರ್ಥಗಳನ್ನು ವರ್ಜಿಸಿ ಆಹಾರದಲ್ಲಿ ಕರಿದ ತಿಂಡಿಗಳು, ಫಾಸ್ಟ್, ಜಂಕ್ ಫುಡ್‌ಗಳ ಸೇವನೆಯನ್ನು ಕಡಿಮೆ ಮಾಡಿ.ಇಂತವುಗಳು ಶರೀರದಲ್ಲಿ ಬೇಗನೆ ಪಚನಗೊಳ್ಳದೆ ಅಜೀರ್ಣತೆಗೆ ಕಾರಣವಾಗುವುದರ ಜೊತೆಗೆ ಬೊಜ್ಜು ಬೆಳೆಯಲು ಸಹಕಾರಿಯಾಗುತ್ತವೆ.ಅದೇ ರೀತಿ ಮೀನು,ಮಾಂಸ,ಹಾಲು,ತುಪ್ಪ,ಬೆಣ್ಣೆ ಮೊದಲಾದ ಜಿಡ್ಡಿನ ಆಹಾರಗಳನ್ನು ಮಿತವಾಗಿ ಬಳಸಿ.
ಸೋಡಿಯಂ ಅಂಶ ಕಡಿಮೆ ಮಾಡಿ ಸೋಡಿಯಂ(ಉಪ್ಪು)ನ ಅಂಶವು ದೇಹಕ್ಕೆ ಮುಖ್ಯವಾಗಿದ್ದರೂ ಅದರ ಅತಿಯಾದ ಬಳಕೆಯು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿದ್ದು ಇದು ಹೃದ್ರೋಗವನ್ನುಂಟು ಮಾಡುವ ಸಾಧ್ಯತೆ ಇದೆ.
ಕ್ಯಾಲೊರಿ ಅಂಶವು ಮಿತವಾಗಿರಲಿ ಆಹಾರದಲ್ಲಡಗಿರುವ ಕ್ಯಾಲೊರಿಯು ದೇಹದ ತೂಕವನ್ನು ಹೆಚ್ಚಿಸಲು ಕಾರಣವಾಗಿದ್ದು,ದೇಹದ ಅತಿಭಾರವು ಹೃದ್ರೋಗಕ್ಕೆ ಹೇತುವಾಗುತ್ತದೆ.
ನಾರು ಪದಾರ್ಥಗಳ ಸೇವನೆ ಅಧಿಕವಾಗಿರಲಿ ನಾರುಯುಕ್ತ ಪದಾರ್ಥಗಳ ಸೇವನೆಯು ಶರೀರದಲ್ಲಿ ಆಹಾರವು ಜೀರ್ಣಿಸಲು ಸಹಾಯವಾಗುವುದರೊಂದಿಗೆ ಕೊಬ್ಬಿನ ಅಂಶವನ್ನು ಮಿತಿಯಲ್ಲಿರಿಸುತ್ತದೆ.ಹಣ್ಣು ಹಂಪಲು,ಹಸುರೆಲೆ ತರಕಾರಿಗಳು, ಬೇಳೆಕಾಳುಗಳನ್ನು ಆಹಾರದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಹೃದ್ರೋಗವನ್ನು ನಿಯಂತ್ರಣದಲ್ಲಿಡಬಹುದು.
ಆಹಾರ ಸೇವಿಸುವ ವಿಧಾನ ಆಹಾರವನ್ನು ಹೊತ್ತಿಗೆ ಸರಿಯಾಗಿ ಸೇವಿಸುವುದು,ಸೇವಿಸುವ ಆಹಾರವು ಶುಚಿ,ರುಚಿಯಾಗಿದ್ದು ಹೆಚ್ಚಿನ ಪೋಷಕಾಂಶಗಳನ್ನೊಳಗೊಂಡಿರಬೇಕು. ಆಹಾರವನ್ನು ಸರಿಯಾಗಿ ಜಗಿದು ತಿನ್ನುವುದು ಮತ್ತು ಧಾರಾಳ ನೀರು ಸೇವಿಸುವುದರಿಂದ ಆಹಾರವು ಜೀರ್ಣಿಸಲು ಸಹಾಯವಾಗುತ್ತದೆ ಮತ್ತು ಮಲಬದ್ಧತೆಯು ಶಮನವಾಗುತ್ತದೆ.
ವ್ಯಾಯಾಮ ಶರೀರಕ್ಕೆ ವ್ಯಾಯಾಮ ಅತ್ಯಗತ್ಯ.ಆದುದರಿಂದ ಶರೀರವನ್ನು ಕೆಲಸದಲ್ಲಿ ತೊಡಗಿಸಿಕೊಳ್ಳಿ.ಒಂದೇ ಸಮನೆ ಕುಳಿತಲ್ಲಿಯೇ ಕುಳಿತುಕೊಂಡು ಕೆಲಸಮಾಡುವುದರಿಂದ ಬೊಜ್ಜು ಬೆಳೆಯುತ್ತದೆ.ಶರೀರದ ಎಲ್ಲಾ ಅಂಗಾಗಗಳಿಗೂ ವ್ಯಾಯಾಮವನ್ನು ನೀಡುವುದರಿಂದ ಶರೀರದಲ್ಲಿನ ರಕ್ತಸಂಚಾರ ಸುಗಮವಾಗಿ ದೇಹ ಆರೋಗ್ಯಯುತವಾಗುತ್ತದೆ.
ಶುದ್ಧವಾದ ವಾಯು ಸೇವನೆ ಬೆಳಗ್ಗೆ ಅಥವಾ ಸಾಯಂಕಾಲ ವಾಯು ವಿಹಾರ ಮಾಡುವುದು ಶರೀರಕ್ಕೆ ಉತ್ತೇಜನವನ್ನು ನೀಡಲು ಸಹಕರಿಸುತ್ತದೆ.ಕಾಲ್ನಡಿಗೆಯು ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.
ಮಾದಕ ವಸ್ತುಗಳನ್ನು ಬಳಸದಿರಿ ಇಂದಿನ ಯುವಜನಾಂಗವು ಮಾದಕ ವಸ್ತುಗಳ ದಾಸ್ಯಕ್ಕೆ ಬೇಗನೆ ತುತ್ತಾಗುತ್ತಿದ್ದು,ಇಂತವರಲ್ಲಿ ಹೃದ್ರೋಗವು ಅತೀ ಕಿರಿಯ ವಯಸ್ಸಿನಲ್ಲೇ ಕಂಡು ಬರುತ್ತದೆ.ಧೂಮಪಾನದ ಅತಿಯಾದ ಸೇವನೆಯು ಬಹುತೇಕ ಮಂದಿಯಲ್ಲಿ ಅತೀ ಕಿರಿಯ ವಯಸ್ಸಿನಲ್ಲಿ ಹೃದಯಾಘಾತವನ್ನುಂಟು ಮಾಡಲು ಮೂಲ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಚಿಂತೆ, ವ್ಯಾಕುಲತೆಗಳಿಂದ ದೂರವಿರುವುದು ಅತಿಯಾದ ಚಿಂತೆ,ವ್ಯಾಕುಲತೆ,ಭಯ,ನಿರಾಶೆಗಳು,ಖಿನ್ನತೆ ಮೊದಲಾದವುಗಳು ಮನುಷ್ಯನ ಹೃದಯದ ಮೇಲೆ ಅತಿಯಾದ ಪರಿಣಾಮವನ್ನು ಬೀರುತ್ತದೆ.ಇಂತಹ ಸನ್ನಿವೇಶಗಳು ಹೃದಯದ "ನಿಶ್ಶಬ್ದ ಆಘಾತ"ಕ್ಕೆ ಕಾರಣವಾಗುತ್ತದೆ.ಆದುದರಿಂದ ಇಂತವುಗಳಿಂದ ದೂರವಿದ್ದು ಸಂತೋಷದಿಂದ ಜೀವನ ಸಾಗಿಸಿದರೆ ನಮ್ಮ ಹೃದಯವು ಸಂತೋಷದಿಂದ ಇರಬಹುದು.
ರಕ್ತದಲ್ಲಿನ ಕೊಲೆಸ್ಟರಾಲ್,ರಕ್ತದೊತ್ತಡ,ಸಕ್ಕರೆಯ ಅಂಶ ಮೊದಲಾದವುಗಳನ್ನು ಪರಿಶೀಲಿಸಿ,ಸೂಕ್ತವಾದ ಕ್ರಮ ಕೈಗೊಂಡು ಆಹಾರ ಕ್ರಮ,ಜೀವನದಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಂದರೆ ಹೃದಯವು ಎಂದೂ ಹದಿಹರೆಯದಂತಿರಬಹುದು.