ಖಾಲಿ ಹೊಟ್ಟೆಯಲ್ಲಿ ಯಾವ್ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದು ಅಂತ ಗೊತ್ತಾ?

ಬುಧವಾರ, 19 ಸೆಪ್ಟಂಬರ್ 2018 (19:08 IST)
ಹಸಿವು ಅನ್ನೋದು ನೈಸರ್ಗಿಕ ಪ್ರಕ್ರಿಯೆ. ಸಕಲ ಜೀವರಾಶಿಗಳಿಗೂ ಹಸಿವು ಸಾಮಾನ್ಯ. ಆದರೆ ಹಸಿವಾಯಿತೆಂದು ಸಿಕ್ಕಿದ್ದೆಲ್ಲಾ ತಿನ್ನುವುದು ಆರೋಗ್ಯಕ್ಕೆ ಹಾನಿಕರ. ಕೆಲವು ಅಹಾರ ಪದಾರ್ಥಗಳನ್ನು ನಾವು ಖಾಲಿ ಹೊಟ್ಟೆಯಲ್ಲಿಯೇ ಸೇವಿಸಬೇಕಾಗುತ್ತದೆ. ಅಂತಹ ಆಹಾರ ಪಟ್ಟಿಗಳೇ ಬೇರೆ.

ಆದರೆ ಕೆಲವು ಆಹಾರ ಪದಾರ್ಥಗಳು ಹೇರಳವಾಗಿ ಪೋಷಕಾಂಶಗಳು, ವಿಟಾಮಿನ್‌ಗಳನ್ನು ಹೊಂದಿದ್ದು, ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸಿದರೂ ಖಾಲಿ ಹೊಟ್ಟೆಯಲ್ಲಿ ಸೇವಿಸುವಂತಹದಲ್ಲ. ಸೇವಿಸಿದರೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎನ್ನುವುದು ಆರೋಗ್ಯ ತಜ್ಞರ ವಾದ. ಹಾಗಾದರೆ ಯಾವ್ಯಾವ ಆಹಾರ ಪದಾರ್ಥಗಳನ್ನು ಹಸಿದ ಹೊಟ್ಟೆಯಲ್ಲಿ ಸೇವಿಸಬಾರದು ಎಂದು ನೋಡೋಣ.
 
* ಟೀ/ಕಾಫಿ : ನಮ್ಮಲ್ಲಿ ಕೆಲವರಿಗೆ ಬೆಳಗಿನ ದಿನಚರಿಯು ಪ್ರಾರಂಭವಾಗುವುದು ಟೀ ಅಥವಾ ಕಾಫಿಯೊಂದಿಗೆ. ಆದರೆ ಆರೋಗ್ಯಶಾಸ್ತ್ರಜ್ಞರ ಪ್ರಕಾರ ಈ ಅಭ್ಯಾಸವನ್ನು ಬಿಡುವುದು ಒಳಿತು. ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿಯುವುರಿಂದ ಹಾರ್ಮೋನ್‌ಗಳಲ್ಲಿ ಅಸಮಾನತೆ ಉಂಟಾಗಿ ತೀವ್ರವಾದ ಒತ್ತಡಕ್ಕೆ ಒಳಗಾಗುತ್ತಾರೆ. 
 
* ಬಾಳೆಹಣ್ಣು : ಜೀರ್ಣಕ್ರಿಯೆಗೆ ಸೂಪರ್‌ಫುಡ್ ಎಂದು ಕರೆಯಲಾಗುವ ಬಾಳೆಹಣ್ಣಿನಲ್ಲಿ ಮ್ಯಾಗ್ನಿಶಿಯಂ ಮತ್ತು ಪೊಟ್ಯಾಶಿಯಂ ಹೇರಳವಾಗಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದಾಗ ರಕ್ತದಲ್ಲಿರುವ ಇವುಗಳ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತದೆ. ಪ್ರತಿಫಲವಾಗಿ ಇದು ಹೃದಯದ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ.
 
* ಅಲ್ಕೋಹಾಲ್ : ಖಾಲಿ ಹೊಟ್ಟೆಯಲ್ಲಿ ಅಲ್ಕೋಹಾಲ್ ಕುಡಿದರೆ ದೇಹದ ಜಠರ ವ್ಯವಸ್ಥೆಗೆ ಸಂಪೂರ್ಣವಾಗಿ ಹೊಡೆತ ಬೀಳುತ್ತದೆ. ಹೊಟ್ಟೆನೋವು, ಅಧಿಕ ತೂಕದಂತಹ ಸಮಸ್ಯೆಗಳು ತಲೆದೋರುತ್ತವೆ. ಮತ್ತು ಬೆಳಿಗ್ಗೆ ಇದನ್ನು ಸೇವಿಸಿದರೆ ಅದರ ಪ್ರಭಾವ ಜಾಸ್ತಿ ಇರುವುದಲ್ಲದೇ ಇವು ರಕ್ತಾನಾಳಗಳನ್ನು ಪ್ರಭಾವಿಸುತ್ತಾ ಮಿದುಳನ್ನೂ ಸಹ ಬಹಳ ಶೀಘ್ರವಾಗಿ ಪ್ರಭಾವಿಸುತ್ತದೆ. ಇದರಿಂದ ಹೃದಯ ಸೇರಿದಂತೆ ಅನೇಕ ಅಂಗಗಳು ಘಾಸಿಯಾಗಬಹುದು.
 
* ಖಾರದಂತಹ ಪದಾರ್ಥಗಳು : ಖಾರದಂತಹ ಪದಾರ್ಥಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆಗಳು ಉತ್ಪನ್ನವಾಗುತ್ತವೆ. ಖಾಲಿ ಹೊಟ್ಟೆಯಲ್ಲಿ ಮೊದಲು ನೀರನ್ನು ಕುಡಿಯದೇ ಖಾರವನ್ನು ತಿನ್ನುವುದರಿಂದ ಅಲ್ಸರ್‌ನಂತಹ ರೋಗಗಳೂ ಸಹ ಬರುವ ಸಾಧ್ಯತೆಗಳಿರುತ್ತವೆ. 
 
* ಸಿಟ್ರಸ್ ಹಣ್ಣುಗಳು : ಸಾಮಾನ್ಯವಾಗಿ ಸಿಟ್ರಸ್ ಹಣ್ಣುಗಳು ವಿಟಾಮಿನ್ ಸಿ ಅಂಶವನ್ನು ಹೊಂದಿರುವುದಲ್ಲದೇ ಇವು ಹುಳಿಯಾಗಿರುತ್ತವೆ. ಇಂತಹ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಇವುಗಳಿಂದ ಅಸಿಡಿಟಿ ಉಂಟಾಗುತ್ತದೆ. ಮತ್ತು ಇವುಗಳಲ್ಲಿರುವ ಫ್ರೂಟ್ ಆ್ಯಸಿಡ್‌ಗಳು ಎದೆಯುರಿ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಹುಣ್ಣಿನಂತಹ ರೋಗಗಳಿಗೆ ದಾರಿ ಮಾಡಿಕೊಡುತ್ತದೆ.
 
* ಟೊಮೆಟೊ : ಟೊಮೆಟೊದಲ್ಲಿ ವಿಟಾಮಿನ್ ಸಿ ಮತ್ತು ನ್ಯೂಟ್ರಿಯೆಂಟ್ಸ್ ಅಂಶವು ಬಹಳಷ್ಟಿರುತ್ತದೆ. ಇದರಲ್ಲಿರುವ ಟ್ಯಾನಿಕ್ ಆ್ಯಸಿಡ್‌‌ನಿಂದ ದೇಹದೊಳಗೆ ಅಸಿಡಿಟಿ ಉಂಟಾಗುತ್ತದೆ. ಟೊಮೆಟೊದಲ್ಲಿರುವ ಆ್ಯಸಿಡ್‌‌ಗಳು ಹೊಟ್ಟೆಯಲ್ಲಿ ಸೇರಿದಾಗ ವಾಂತಿಯಾಗುವುದಷ್ಟೇ ಅಲ್ಲದೇ ಕರುಳಿನಲ್ಲಿ ಉರಿಯನ್ನೂ ಉಂಟುಮಾಡುತ್ತದೆ.
 
* ಸಿಹಿಯಾದ ಪದಾರ್ಥ/ ಕ್ಯಾಂಡಿಗಳು : ಬಹಳ ಸಿಹಿಯಾದ ಪದಾರ್ಥಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಒಳ್ಳೆಯದಲ್ಲ. ಇವುಗಳನ್ನು ತಿನ್ನುವುದರಿಂದ ಲಿವರ್ ಮೇಲೆ ಪ್ರಭಾವ ಬೀರುತ್ತದೆ. ಅಷ್ಟೇ ಅಲ್ಲದೇ ಅಂಗಾಂಗಗಳ ಸಾಮರ್ಥ್ಯವೂ ಸಹ ಕುಂಠಿತವಾಗುತ್ತದೆ. ಮತ್ತು ಕೆಲವು ರೀತಿಯ ಖಾಯಿಲೆಗಳೂ ಬರುವ ಸಾಧ್ಯತೆಗಳಿರುತ್ತವೆ. 
 
* ಸೋಡಾ/ ಕೂಲ್‌ಡ್ರಿಂಕ್ಸ್ : ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ Ph ಅಂಶವು ಹೆಚ್ಚಾಗಿರುವುದರಿಂದ ಸೋಡಾ ಅಥವಾ ಕೂಲ್‌ಡ್ರಿಂಕ್ಸ ಕುಡಿಯುವುದರಿಂದ ಕರುಳಿನಲ್ಲಿ ಇರಿಟೇಷನ್ ಆಗಿ ವಾಂತಿಯಾಗುವ ಸಾಧ್ಯತೆಗಳಿರುತ್ತವೆ. ಅದಲ್ಲದೇ ಅಸಿಡಿಟಿಯೂ ಉಂಟಾಗುತ್ತದೆ ಮತ್ತು ದೇಹದಲ್ಲಿರುವ ಉದರದ ಆಮ್ಲಗಳೊಂದಿಗೆ ಸೇರಿ ಸ್ನಾಯುಸೆಳೆತ, ಮೈ ಕೈ ನೋವು ಕಾಣಿಸಿಕೊಳ್ಳಬಹುದು.
 
* ಹಸಿರು ಸೊಪ್ಪುಗಳು : ಹಸಿರು ಸೊಪ್ಪುಗಳು ದೇಹಕ್ಕೆ ಸಾಕಷ್ಟು ಒಳ್ಳೆಯ ಪರಿಣಾಮವನ್ನೇ ಕೊಡುತ್ತವೆ. ಆದರೆ ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸುವುದರಿಂದ ಸ್ಟಮಕ್ ಲೈನಿಂಗ್ ಹಾಳಾಗುತ್ತದೆ. ಮತ್ತು ಸೌತೆಕಾಯಿಯಂತಹ ಹಸಿ ಹಸಿರು ತರಕಾರಿಗಳನ್ನು ಖಾಲಿ ಹೊಟ್ಟೆಯಲ್ಲಿ ತಿಂದಾಗ ಹೊಟ್ಟೆನೋವು, ಎದೆಉರಿ ಕಾಣಿಸಬಹುದು.
 
* ಪೇರಳೆಹಣ್ಣು : ಪೇರಳೆಹಣ್ಣುಗಳಲ್ಲಿ ಒರಟಾದ ಫೈಬರ್ ಅಂಶವಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ತಿಂದಾಗ ಈ ಫೈಬರ್‌ಗಳು ದೇಹದೊಳಗಿನ ಸೂಕ್ಷ್ಮ ಮ್ಯೂಕಸ್ ಮೆಂಬ್ರೇನ್‌ಗಳಿಗೆ ಹಾನಿ ಮಾಡಬಹುದು.
 
* ಮೊಸರು : ಮೊಸರೂ ಕೂಡಾ ಖಾಲಿ ಹೊಟ್ಟೆಯಲ್ಲಿ ಸೇವಿಸಲು ಯೋಗ್ಯವಲ್ಲ. ಮೊಸರನ್ನು ತಿಂದರೆ ಹೈಡ್ರೋಕ್ಲೋರಿಕ್ ಆ್ಯಸಿಡ್‌ ಉತ್ಪತ್ತಿಯಾಗುತ್ತದೆ. ಇದರಿಂದ ಅಸಿಡಿಟಿಯೂ ಉಂಟಾಗಬಹುದು.
 
ಬೆಳಗಿನ ಹೊತ್ತು ಎನ್ನುವುದು ಒಂದು ಹೊಸ ದಿನದ ಆರಂಭ. ಅದ್ದರಿಂದ ಬೆಳಗಿನ ಹೊತ್ತು ನಾವು ಸೇವಿಸುವ ಆಹಾರ ಪದಾರ್ಥಗಳು ನಮ್ಮ ಇಡೀ ದಿನದ ಉಲ್ಲಾಸ, ನವ ಚೈತನ್ಯವನ್ನು ಹುಟ್ಟುಹಾಕುವಂತಿರಬೇಕು. ಆದ್ದರಿಂದ ಆರೋಗ್ಯವೇ ಭಾಗ್ಯ ಎನ್ನುವಂತೆ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುವ, ಪೌಷ್ಟಿಕಾಂಶಪೂರಕವಾದ ಆಹಾರವನ್ನು ಸೇವಿಸಿ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳೋಣ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ