ಜೇನು ತುಪ್ಪದ ಬಗೆಗಿನ ಐದು ಸುಳ್ಳುಗಳು, ಅದರ ಸತ್ಯಾ ಸತ್ಯತೆಗಳು ಹೀಗಿದೆ ನೋಡಿ..
ಶನಿವಾರ, 11 ಸೆಪ್ಟಂಬರ್ 2021 (08:45 IST)
ನಾವು ನಿತ್ಯ ಸೇವಿಸುವ ಹಲವಾರು ಆಹಾರ ವಸ್ತುಗಳ ಬಳಕೆಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಸಲಹೆ, ಮಾಹಿತಿ ಇತ್ಯಾದಿಗಳನ್ನು ನೀಡುತ್ತಲೇ ಇರುತ್ತಾರೆ. ಜೇನು ತುಪ್ಪವೂ ಇದಕ್ಕೆ ಹೊರತಾಗಿಲ್ಲ. ಜೇನುತುಪ್ಪದ ಕುರಿತು ಇರುವ ಹಲವಾರು ಸಂಗತಿಗಳಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ನಂಬಬಾರದು ಎಂಬ ಗೊಂದಲ ಇದ್ದೇ ಇರುತ್ತದೆ.
ನಿಮಗೂ ಅಂತಹ ಗೊಂದಲಗಳಿವೆಯೇ? ಚಿಂತಿಸಬೇಡಿ. ನಾವು ಇದನ್ನು ನಿವಾರಿಸುತ್ತೇವೆ.
ಸಿಹಿ ತಿನ್ನದೇ ಇರಲು ಸಾಧ್ಯವಿಲ್ಲವೇ? ಸಕ್ಕರೆಗೆ ಪರ್ಯಾಯವಾಗಿ ಏನನ್ನು ಸೇವಿಸಬೇಕು ಎನ್ನುತ್ತೀರಾ? ಜೇನು ತುಪ್ಪವು ಸಕ್ಕರೆಗೆ ಅತ್ಯುತ್ತಮ ಪರ್ಯಾಯ ಎಂಬುವುದು ನಿಮಗೂ ಗೊತ್ತೇ ಇರುತ್ತದೆ. ಸಿಹಿಯಾದ, ಅಂಟು ಅಂಟಾದ ಈ ನೈಸರ್ಗಿಕ ಸಿಹಿಯನ್ನು ತಿಂದಷ್ಟು ಮತ್ತೆ ಮತ್ತೆ ಚಪ್ಪರಿಸಿ ತಿನ್ನಬೇಕು ಅಂದುಕೊಳ್ಳದವರು ವಿರಳ. ಈ ಚಿನ್ನದ ಬಣ್ಣದ , ನೈಸರ್ಗಿಕ ಸಿಹಿಯಲ್ಲಿ ಆ್ಯಂಟಿಆಕ್ಸಿಡೆಂಟ್ಗಳು, ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಸೇರಿದಂತೆ ಲೆಕ್ಕವಿಲ್ಲದಷ್ಟು ಔಷಧೀಯ ಗುಣಗಳಿವೆ.
ಯುಎಸ್ ಮೂಲದ ನ್ಯಾಶನಲ್ ಲೈಬ್ರೆರಿ ಆಫ್ ಮೆಡಿಸಿನ್ ನಡೆಸಿರುವ ಅಧ್ಯಯನವೊಂದರ ಪ್ರಕಾರ, ಜೇನುತುಪ್ಪದಲ್ಲಿ ಪ್ರೋಟೀನ್ , ಅಮಿನೋ ಆಮ್ಲ, ಮಿಟಮಿನ್ , ಮಿನರಲ್ ಹಾಗೂ ಆ್ಯಂಟಿಮೈಕ್ರೋಬಿಯಲ್ ಗುಣಲಕ್ಷಣಗಳಿರುತ್ತವೆ. ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಜೇನುತುಪ್ಪ ಅತ್ಯಂತ ಪ್ರಯೋಜನಕಾರಿ.
ನೀವು ಜೇನು ತುಪ್ಪದ ಕುರಿತು ತಿಳಿದುಕೊಳ್ಳಬೇಕಾದ ಕೆಲವು ವಾಸ್ತವ ಸಂಗತಿಗಳನ್ನು ಈ ಕೆಳಗೆ ನೀಡಲಾಗಿದೆ. ಸುಳ್ಳು: ಅದು ಹರಳುಗಟ್ಟಿದರೆ ಹಾಳಾಗಿದೆ ಎಂದರ್ಥ ಸತ್ಯ: ಹರಳುಗಟ್ಟುವುದು ಜೇನುತುಪ್ಪವನ್ನು ಸಂರಕ್ಷಿಸುವ ನಿಸರ್ಗದ ಒಂದು ವಿಧಾನ. ಆದರೆ ಹರಳುಗಟ್ಟುವಿಕೆಯ ಬಗ್ಗೆ ಹಲವಾರು ತಪ್ಪು ಕಲ್ಪನೆಗಳಿವೆ. ಜೇನುತುಪ್ಪ ಹರಳುಗಟ್ಟಿದರೆ ಅದು ಹಾಳಾಯಿತು ಎಂದು ಅರ್ಥವಲ್ಲ. ಬಿಸಿ ನೀರಿನಲ್ಲಿ ಅದರ ಬಾಟಲಿಯನ್ನು ನಿಲ್ಲಿಸಿಟ್ಟು, ಅದನ್ನು ನಿಧಾನವಾಗಿ ಬಿಸಿ ಮಾಡಿದರೆ ಮತ್ತು ನಿಧಾನವಾಗಿ ಕಲಕಿದರೆ ಅದು ಮೊದಲಿನ ರೂಪಕ್ಕೆ ಮರಳುತ್ತದೆ. ಹರಳುಗಟ್ಟಿದ ನಂತರವೂ ಜೇನುತುಪ್ಪದ ರುಚಿ ಮತ್ತು ಅದರಲ್ಲಿನ ಪೌಷ್ಟಿಕಾಂಶಗಳು ಹಾಗೆಯೇ ಇರುತ್ತವೆ. ಸುಳ್ಳು: ಜೇನು ತುಪ್ಪವನ್ನು ಬಿಸಿ ಮಾಡಬಾರದು ಸತ್ಯ: ಜೇನು ತುಪ್ಪವನ್ನು ಬಿಸಿ ಮಾಡಬಾರದು, ಮಾಡಿದರೆ ಅದು ವಿಷಯುಕ್ತವಾಗುತ್ತದೆ ಎಂಬುವುದು ಅತ್ಯಂತ ದೊಡ್ಡ ತಪ್ಪು ಕಲ್ಪನೆ. ಜೇನು ತುಪ್ಪವನ್ನು ಬಿಸಿ ಮಾಡಿದಾಗ ಅದರಿಂದ ವಿಷ ಹೊರಬರುವುದಿಲ್ಲ, ಏಕೆಂದರೆ ಅವು ಮೊದಲಿನಿಂದಲೂ ಜೇನಿನಲ್ಲಿ ಇರುವುದೇ ಇಲ್ಲ. ಆದರೆ ಕೆಲವು ಪೌಷ್ಟಿಕ ಅಂಶಗಳು ಕಳೆದುಹೋಗಬಹುದು, ಹಾಗಾಗಿ ಜೇನುತುಪ್ಪ ಹೆಚ್ಚು ಬಿಸಿ ಆಗದಂತೆ ಗಮನ ಹರಿಸಿ. ಸುಳ್ಳು: ಎಲ್ಲಾ ರೀತಿಯ ಜೇನುತುಪ್ಪದ ರುಚಿ ಮತ್ತು ಬಣ್ಣ ಒಂದೇ ರೀತಿ ಇರುತ್ತದೆ. ಸತ್ಯ: ಜೇನು ತುಪ್ಪಕ್ಕೆ ಬೇರೆ ಬೇರೆ ಬಣ್ಣ ಮತ್ತು ರುಚಿ ಇರುತ್ತದೆ. ಎಲ್ಲಾ ರೀತಿಯ ಜೇನುತುಪ್ಪದ ರುಚಿ ಮತ್ತು ಬಣ್ಣ ಒಂದೇ ರೀತಿ ಇರುತ್ತದೆ ಎಂಬುವುದು ಸುಳ್ಳು. ಜೇನು ಎಲ್ಲಿಂದ ಬರುತ್ತದೆ?. . . .ಹೂವಿನಿಂದ. ಜೇನು ತುಪ್ಪದ ಬಣ್ಣ ಮತ್ತು ಪರಿಮಳ, ಜೇನು ಹುಳಗಳು ಯಾವ ರೀತಿಯ ಹೂವಿನಿಂದ ಮಧುವನ್ನು ಹೀರಿಕೊಂಡಿವೆ ಎಂಬುದನ್ನು ಅವಲಂಬಿಸಿರುತ್ತದೆ. ಎಲ್ಲಾ ಹೂಗಳು ಒಂದೇ ರೀತಿ ಇರುತ್ತವೆಯೇ? ಹಾಗೆಯೇ ಜೇನು ತುಪ್ಪದ ಬಣ್ಣ, ರುಚಿ ಮತ್ತು ಪರಿಮಳ ಕೂಡ, ಅದರ ಮೂಲವನ್ನು ಅವಲಂಬಿಸಿರುತ್ತದೆ. ಸುಳ್ಳು: ದಪ್ಪ ಮತ್ತು ಹರಿಯದ ಹನಿ ಉತ್ಕಷ್ಟ ಗುಣಮಟ್ಟ ಹೊಂದಿರುತ್ತದೆ. ಸತ್ಯ: ಗಾಢ ಮತ್ತು ತೆಳು ಜೇನುತುಪ್ಪದ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅದರ ತೇವಾಂಶ. ಉಳಿದ ಪೌಷ್ಟಿಕ ಅಂಶಗಳು ಒಂದೇ ಆಗಿರುತ್ತದೆ. ಜೇನು ತುಪ್ಪದ ಬಣ್ಣ, ರುಚಿ ಮತ್ತು ಪರಿಮಳ ಹೇಗೆ ಅದರ ಮೂಲವನ್ನು ಅವಲಂಬಿಸಿರುತ್ತದೆಯೋ, ಹಾಗೆಯೇ ಅದರ ಅಂಟು ಗುಣವೂ ಕೂಡ ಹವಾಗುಣ, ಆದ್ರತೆ, ಮಳೆಯ ಸುರಿತ, ಮಣ್ಣು, ಭೂ ಪ್ರದೇಶ, ಹೂಗಳು ಮತ್ತು ಜೇನುಗಳ ಮೇವು ಇತ್ಯಾದಿಯನ್ನು ಅವಂಬಿಸಿರುತ್ತದೆ. ಸುಳ್ಳು: ಜೇನು ತುಪ್ಪ ಹಾಳಾಗುವುದೇ ಇಲ್ಲ ಸತ್ಯ: ಇದು ತಾಂತ್ರಿಕವಾಗಿ ಸತ್ಯವೂ ಆಗಿರುವಂತಹ , ಜೇನು ತುಪ್ಪದ ಬಗೆಗಿನ ಹೆಚ್ಚು ಜನಪ್ರಿಯ ಸುಳ್ಳು. ಸರಿಯಾಗಿ ಸಂರಕ್ಷಿಸಿ ಇಡದಿದ್ದರೆ ಜೇನು ತುಪ್ಪ ಅದರ ಪರಿಮಳ ಮತ್ತು ಸ್ವಾದ ಕಳೆದುಕೊಳ್ಳಬಹುದು. ಅದು ದೀರ್ಘ ಕಾಲದವರೆಗೆ ಬಾಳಿಕೆ ಬರುತ್ತದೆ, ಆದರೆ ಮೊದಲಿನ ಸ್ವಾದ ಮತ್ತು ಆರೋಗ್ಯಕರ ಅಂಶಗಳನ್ನು ಒಳಗೊಂಡಿರುವುದಿಲ್ಲ. ಹಾಗಾಗಿ ಜೇನುತುಪ್ಪವನ್ನು ತಾಜಾವಾಗಿದ್ದಾಗಲೇ ಸೇವಿಸುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಕಾಲ ಕಳೆದಂತೆ ಅದರ ಬಣ್ಣವು ಕೂಡ ಗಾಢವಾಗುತ್ತದೆ.