ಅತೀ ಸದ್ದಿನಿಂದ ಕಿವುಡುತನ: ಎಚ್ಚರಿಕೆ

ಮಂಗಳವಾರ, 20 ನವೆಂಬರ್ 2007 (19:52 IST)
ಅತಿಯಾದ ಸದ್ದಿನೊಂದಿಗೆ ನೀವು ಸಂಗೀತ ಕೇಳಲು ಬಯಸಿದ್ದೀರೆಂದರೆ ಹುಷಾರಾಗಿರಿ. ಏಕೆಂದರೆ ನೀವು ಒಳಕಿವಿಗೆ ಆಘಾತ ಅಥವಾ ಅತಿಯಾದ ಶಬ್ದದಿಂದ ಉಂಟಾಗುವ ಕಿವುಡುತನಕ್ಕೆ ಈಡಾಗಬಹುದು. ಅಕೌಸ್ಟಿಕ್ ಟ್ರಾಮಾ ಒಳಕಿವಿಯ ಶ್ರವಣಸಾಧನಕ್ಕೆ ಉಂಟಾಗುವ ಗಾಯ. ಇದು ಅತಿಯಾದ ಶಬ್ದದಿಂದ ಸಂಭವಿಸುತ್ತದೆ.

ಇದೊಂದು ಆಧುನಿಕ ಜೀವನದ ಕೊಡುಗೆಯೆನ್ನಬಹುದು. ಉದ್ಯೋಗದಲ್ಲಿ ಶಬ್ದಕ್ಕೆ ಒಡ್ಡಿಕೊಳ್ಳುವುದು ಒಳಕಿವಿಯ ಆಘಾತಕ್ಕೆ ಮುಖ್ಯ ಕಾರಣ. ಆದರೆ ಮನರಂಜನಾತ್ಮಕ ಶಬ್ದವಾದ ಗಟ್ಟಿಯಾದ ಧ್ವನಿಯ ಸಂಗೀತ ಕೂಡ ಅಷ್ಟೇ ದುಷ್ಪರಿಣಾಮ ಉಂಟುಮಾಡುತ್ತಿದೆ.

ಶಬ್ದವು ಕಿವಿಗೆ ಉಂಟುಮಾಡುವ ಹಾನಿಯು ಅದರ ಅವಧಿ ಮತ್ತು ಶಬ್ದದ ತೀವ್ರತೆಯ ಮೇಲೆ ಅವಲಂಬಿತವಾಗಿದೆ. ಕೆಲಸದ ಸುರಕ್ಷತೆ ಮತ್ತು ಆರೋಗ್ಯಾಡಳಿತ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. 75 ಡೆಸಿಬಲ್ಸ್‌ಗಿಂತ ಕಡಿಮೆಯಿರುವ ಶಬ್ದ ಸುರಕ್ಷಿತವಾಗಿರುತ್ತದೆ ಮತ್ತು 85 ಡೆಸಿಬಲ್ಸ್ ಶಬ್ದವನ್ನು ನಿರಂತರವಾಗಿ 8 ಗಂಟೆಗಳ ಕಾಲ ಆಲಿಸುವುದು ಹಾನಿಕಾರಕ.

ಸಾಮಾನ್ಯವಾಗಿ ಎರಡೂ ಕಿವಿಗಳು ಶ್ರವಣದೋಷಕ್ಕೆ ತುತ್ತಾಗುತ್ತದೆ. ಒಂದೊಮ್ಮೆ ಶ್ರವಣ ದೋಷ ಸಂಭವಿಸಿದರೆ ಅದನ್ನು ಮರುಸ್ಥಾಪಿಸುವುದು ಸಾಧ್ಯವಿಲ್ಲ. ಅದಕ್ಕೆ ಒಂದೇ ಪರಿಹಾರವೆಂದರೆ ಹಿಯರಿಂಗ್ ಏಡ್ ಬಳಸುವುದು.

ಆದ್ದರಿಂದ ಎಚ್ಚರಿಕೆ ಸೂಚನೆಗಳನ್ನು ಗಮನಿಸುವುದು ಅತೀ ಮುಖ್ಯವಾಗಿದೆ.ದೊಡ್ಡ ಶಬ್ದಕ್ಕೆ ಕಿವಿಗೊಟ್ಟ ಬಳಿಕ ವ್ಯಕ್ತಿಯ ಕಿವಿಯಲ್ಲಿ ಗುಯ್‌ಗುಡುತ್ತಿದ್ದರೆ ಕಿವಿಗೆ ಹಾನಿಯುಂಟಾಗಲು ಅಷ್ಟೇ ಸಾಕಾಗುತ್ತದೆ.ಆಗಾಗ್ಗೆ ಭಾರೀ ಶಬ್ದ ಕಿವಿಗೆ ಅಪ್ಪಳಿಸುತ್ತಿದ್ದರೆ ಬಳಸಿ ಬಿಸಾಡುವ ಇಯರ್ ಪ್ಲಗ್‌ಗಳನ್ನು ಬಳಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ