ಆಗಾಗ್ಗೆ ವಿಮಾನ ಪ್ರಯಾಣ ಅಪಾಯಕಾರಿ

ಸೋಮವಾರ, 12 ನವೆಂಬರ್ 2007 (21:33 IST)
WD
ವಾಣಿಜ್ಯ ಉದ್ದೇಶಕ್ಕಾಗಿ ಆಗಾಗ್ಗೆ ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ಜೀವಕ್ಕೆ ಬೆದರಿಕೆ ಒಡ್ಡುವ ಬ್ಲಡ್ ಕ್ಲಾಟ್(ರಕ್ತ ಹೆಪ್ಪುಗಟ್ಟುವಿಕೆ)ಗೆ ಒಳಗಾಗುವ ಅಪಾಯ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಎಂದು ನೆದರ್‌ಲೆಂಡ್ ಸಂಶೋಧಕರು ದೃಢಪಡಿಸಿದ್ದಾರೆ.

ಜೀವಕ್ಕೆ ಬೆದರಿಕೆ ಒಡ್ಡುವ ರಕ್ತ ಹೆಪ್ಪುಗಟ್ಟುವಿಕೆ ಮತ್ತು ವಿಮಾನಪ್ರಯಾಣದ ನಡುವೆ ನಂಟಿದೆಯೆಂದು 50 ವರ್ಷಗಳಿಂದ ನಂಬಲಾಗಿತ್ತು, ಆದರೆ ಈ ಸಖ್ಯವನ್ನು ದೃಢಪಡಿಸಿದ ಮೊದಲ ಸಂಶೋಧನೆ ಇದಾಗಿದೆ.

ವಿಮಾನದಲ್ಲಿ ಕಡಿಮೆ ವಾಯು ಒತ್ತಡದಿಂದ ರಕ್ತದ ಜಟಿಲ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗುವ ಬಗ್ಗೆ ಕೆಲವು ಪುರಾವೆಗಳಿವೆ ಎಂದು ಅಂತಾರಾಷ್ಟ್ರೀಯ ಹೆರಾಲ್ಡ್ ಟ್ರಿಬ್ಯೂನ್ ಪತ್ರಿಕೆ ಲೇಡನ್ ವಿ.ವಿ. ವೈದ್ಯಕೀಯ ಕೇಂದ್ರದ ಫ್ರಿಟ್ಸ್ ರೊಸೆಂಡಾಲ್ ಉಲ್ಲೇಖಿಸಿ ವರದಿಮಾಡಿದೆ.

ದೇಹದ ಆಳವಾದ ರಕ್ತನಾಳದಲ್ಲಿ ಸಾಮಾನ್ಯವಾಗಿ ಕಾಲಿನಲ್ಲಿ ಸಂಭವಿಸುವ ಈ ಬ್ಲಡ್ ಕ್ಲಾಟ್‌ಗಳನ್ನು ಡೀಪ್ ವೈನ್ ಥ್ರಾಂಬೋಸಿಸ್ ಅಥವಾ ಡಿವಿಟಿ ಎನ್ನುತ್ತೇವೆ. ಅದಕ್ಕೆ ಚಿಕಿತ್ಸೆ ಮಾಡದೇ ಹಾಗೇ ಬಿಟ್ಟರೆ ಹೆಪ್ಪುಗಟ್ಟಿದ ರಕ್ತದ ಕೆಲವು ಭಾಗ ಬೇರ್ಪಟ್ಟು ಶ್ವಾಸಕೋಶಕ್ಕೆ ಸಂಪರ್ಕಿಸುವ ರಕ್ತನಾಳದಲ್ಲಿ ಶೇಖರಣೆಯಾಗಿ ಶ್ವಾಸಕೋಶಕ್ಕೆ ರಕ್ತದ ಹರಿವನ್ನು ನಿಲ್ಲಿಸಿ ದಿಢೀರ್ ಸಾವು ಸಂಭವಿಸಬಹುದೆಂದು ಹೇಳಲಾಗಿದೆ.

ವಿಮಾನದಲ್ಲಿ ಪ್ರಯಾಣಿಸುವ 4500 ಜನರಲ್ಲಿ ಕನಿಷ್ಠ ಒಬ್ಬರಿಗೆ 8 ವಾರಗಳಲ್ಲಿ ಡಿವಿಟಿ ಕಾಣಿಸಿಕೊಳ್ಳಬಹುದು ಎಂದು ಇನ್ನೊಬ್ಬ ಸಂಶೋಧಕ ಸುಜೇನ್ ಕೆನ್ನೆಗೈಟರ್ ತಿಳಿಸಿದರು. ದೊಡ್ಡ ಅಂತಾರಾಷ್ಟ್ರೀಯ ಕಂಪೆನಿಗಳ 9000 ನೌಕರರನ್ನು ಸಂಶೋಧಕರು ನಾಲ್ಕರಿಂದ 5 ವರ್ಷಗಳ ಕಾಲ ಅಧ್ಯಯನ ಮಾಡಿದರು.

ಸ್ಥೂಲಕಾಯ, ಎತ್ತರದಲ್ಲಿ ಏರುಪೇರು, ಹಾರ್ಮೋನ್ ಬದಲಿ ಚಿಕಿತ್ಸೆ ಮತ್ತು ವಂಶಗತವಾಗಿ ಬಂದ ರಕ್ತ ಹೆಪ್ಪುಗಟ್ಟುವಿಕೆ ಅವ್ಯವಸ್ಥೆ ಇರುವವರಿಗೆ ಈ ಅಪಾಯ ಅತೀ ಹೆಚ್ಚಿರುತ್ತದೆ.

ವೆಬ್ದುನಿಯಾವನ್ನು ಓದಿ