ಮಾನವನ ಎಲ್ಲ ಅಂಗಾಂಗಗಳಲ್ಲಿ ಕಣ್ಣು ಒಂದು ಅದ್ಭುತ ಜ್ಞಾನೇಂದ್ರಿಯ. ಸಕಲ ಜೀವಕೋಟಿಗೆ ಜ್ಞಾನದೀವಿಗೆ ಕಣ್ಣು. ಆದರೆ ಕಣ್ಣು ಕೂಡ ಬೇನೆಗಳಿಗೆ ತುತ್ತಾಗುವ ಸಂಭವ ಇಲ್ಲದಿಲ್ಲ. ಅಭಿವೃದ್ಧಿ ಹೊಂದಿದ ರಾಷ್ಟ್ರವಾದ ಅಮೆರಿಕದಲ್ಲಿ ಕೂಡ ದಶಲಕ್ಷಕ್ಕೂ ಹೆಚ್ಚು ಜನರು ಪ್ರತಿ ವರ್ಷ ಆಂಶಿಕ ದೃಷ್ಟಿ ಕಳೆದುಕೊಳ್ಳುತ್ತಾರೆ.
ಅವರಲ್ಲಿ ನಾಲ್ಕನೇ ಒಂದು ಭಾಗದಷ್ಟು ಜನರು ಸಂಪೂರ್ಣ ಕುರುಡರಾಗುತ್ತಾರೆ. ಕಣ್ಣಿಗೆ ಯಾವುದೇ ಸೋಂಕು ತಗುಲದಂತೆ ರಕ್ಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯಗಳಲ್ಲಿ ಒಂದಾಗಿದೆ.
ಕಂಪ್ಯೂಟರ್ ವಿಷನ್ ಸಿಂಡ್ರೋಮ್
ಹೊಸ ತಂತ್ರಜ್ಞಾನ ಹೊಸ ಸಮಸ್ಯೆಗಳನ್ನು ತರುತ್ತವೆ. ಸತತವಾಗಿ 8 ಗಂಟೆಗಳವರೆಗೆ ಕಂಪ್ಯೂಟರ್ ಸ್ಕ್ರೀನ್ ವೀಕ್ಷಿಸುವುದು ಕಣ್ಣಿಗೆ ಶ್ರಮ. ಇದರಿಂದ ಕಣ್ಣಿನ ಜತೆ ಬೆನ್ನಿಗೂ ಕೆಲವು ಸಮಸ್ಯೆಗಳು ಉಂಟಾಗಬಹುದು. ಕಂಪ್ಯೂಟರ್‌ನಲ್ಲಿ ನಮ್ಮ ಕಣ್ಣಿನ ದೃಷ್ಟಿಯ ಮಟ್ಟಕ್ಕಿಂತ ಕೆಲವು ಇಂಚುಗಳ ಕೆಳಗೆ ನೋಡುವುದು ಅನುಕೂಲಕರ ಭಂಗಿ.
ಕಣ್ಣಿನ ದೃಷ್ಟಿಯ ಮಟ್ಟಕ್ಕಿಂತ ಮೇಲೆ ನೋಡುವುದರಿಂದ ಕಣ್ಣನ್ನು ಮಾಮೂಲಿಗಿಂತ ಹೆಚ್ಚು ಅಗಲಿಸಬೇಕಾಗುತ್ತದೆ. ಇದರಿಂದ ದೃಷ್ಟಿ ಮತ್ತು ಭಂಗಿಯ ಸಮಸ್ಯೆಗಳು ಉಂಟಾಗುತ್ತದೆ. ಕಂಪ್ಯೂಟರ್ ಮಾನಿಟರ್ ನಿಮ್ಮ ಕಣ್ಣಿನ ಮಟ್ಟಕ್ಕಿಂತ 4-8 ಇಂಚು ಕೆಳಕ್ಕೆ ಇದ್ದರೆ ಒಳ್ಳೆಯದು.
ಪ್ರತಿ ಅರ್ಧಗಂಟೆಗೆ ಕಣ್ಣನ್ನು ಮುಂಚಿ ರೆಪ್ಪೆಯ ಒಳಗೆ ಕಣ್ಣಿನ ಗುಡ್ಡೆಗಳನ್ನು ಅತ್ತಿತ್ತ ಚಲಿಸಿ. ಮಾನಿಟರ್ ನಿಮ್ಮ ಮುಖದಿಂದ 20-30 ಇಂಚುಗಳು ದೂರದಲ್ಲಿರಬೇಕು. ಮಾನಿಟರ್ ನಮ್ಮೆದುರು ನೇರವಾಗಿ ಇರಬೇಕು, ಅದನ್ನು ಕೋನವಾಗಿ ಇಡಬಾರದು.
ಕಂಪ್ಯೂಟರ್ ಪರದೆಯಿಂದ ಬೆಳಕು ಪ್ರತಿಬಿಂಬಿಸಬಾರದು. ಕಿಟಕಿಯಿಂದ ಪ್ರಕಾಶಮಾನ ಬೆಳಕು ಪರದೆ ಮೇಲೆ ಬೀಳುತ್ತಿದ್ದರೆ ಕೆಲಸದ ಸ್ಥಳ ಬದಲಿಸಿ ಅಥವಾ ಕಿಟಕಿ ಬಾಗಿಲು ಬಂದ್ ಮಾಡಿ.
ಕಂಜಕ್ಟಿವಿಟೀಸ್ ಅಥವಾ ಮದ್ರಾಸ್ ಐ
ಮದ್ರಾಸ್ ಐ ಅಡೆನೊವೈರಸ್ ವೈರಸ್ ಗುಂಪಿನ ಸೋಂಕಿನಿಂದ ಉಂಟಾಗುತ್ತದೆ. ಮದ್ರಾಸ್ ಐ ಸೋಂಕಿನ ವ್ಯಕ್ತಿಯ ಕಣ್ಣು ಕೆಂಪಗಾಗಿ ಉರಿಯುತ್ತದೆ. ಕಣ್ಣೀರಿನ ಹನಿಗಳಲ್ಲಿ ಕೂಡ ವೈರಸ್ ಉಪಸ್ಥಿತಿ ಇರುತ್ತದೆ. ಕಣ್ಣನ್ನು ಒರೆಸಿಕೊಂಡಾಗ ಕೂಡ ರೋಗಿಯ ಕೈಯಲ್ಲಿ ವೈರಸ್‌ಗಳು ಉಳಿಯುತ್ತವೆ.
ಇತರರ ಕೈಗಳಿಗೂ, ಟವೆಲ್‌ಗಳಿಗೆ, ಬೆಡ್ ಶೀಟ್‌ಗಳಿಗೆ ವೈರಸ್ ಅಂಟಬಹುದು. ಈ ವೈರಸ್‌ಗಳು ಕೆಲವು ವಾರಗಳವರೆಗೆ ಜೀವಂತವಿರುತ್ತದೆ. ಇವುಗಳ ಸಂಪರ್ಕ ಹೊಂದಿದ ವ್ಯಕ್ತಿಗೆ ಸೋಂಕು ತಗಲಬಹುದು. ಆದರೆ ಮದ್ರಾಸ್ ಐ ಸೋಂಕು ಗಾಳಿಯ ಮೂಲಕ ಹರಡುವುದಿಲ್ಲ.
ಸೋಂಕು ತಗಲಿದ ವ್ಯಕ್ತಿಯ ಕಣ್ಣನ್ನು ದೂರದಿಂದ ವೀಕ್ಷಿಸುವುದರಿಂದ ಮದ್ರಾಸ್ ಐ ಬರಲಾರದು.ಇದು ವೈರಲ್ ಸೋಂಕು ಆಗಿರುವುದರಿಂದ ಸಾಮಾನ್ಯ ಆಂಟಿಬಯೋಟಿಕ್‌ಗಳು ಸೋಂಕಿನ ನಿವಾರಣೆಗೆ ಸಾಕು. ದಿನಕ್ಕೆ ನಾಲ್ಕಾರು ಬಾರಿ ಆಂಟಿಬಯೋಟಿಕ್ ಹನಿಗಳನ್ನು ಕಣ್ಣಿಗೆ ಬಿಟ್ಟುಕೊಂಡರೆ ಸಾಕು.
ಮುಚ್ಚಿದ ರೆಪ್ಪೆಯನ್ನು ಸ್ವಚ್ಛವಾದ ಒದ್ದೆ ವಸ್ತ್ರದಿಂದ ಒರೆಸಬೇಕು. ಬಿಸಿ ನೀರನ್ನು ಬಳಸಬಾರದು. ಸ್ಟೆರಾಯ್ಡ್ಸ್ ಚಿಕಿತ್ಸೆ ನೀಡಬಾರದು. ಏಕೆಂದರೆ ಸ್ಟೆರಾಯ್ಡ್ ಬಳಕೆಯಿಂದ ದೇಹದ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳಬಹುದು.
ಕಣ್ಣಿನ ಆರೋಗ್ಯ ಕಾಪಾಡುವುದು ಹೇಗೆ?
ಸೂರ್ಯನ ಕಿರಣಗಳು ಕಣ್ಣಿಗೆ ನೇರವಾಗಿ ಬೀಳದಂತೆ ರಕ್ಷಣೆ, ಧೂಮಪಾನ ನಿಷೇಧ ಮತ್ತು ಆಂಟಿಆಕ್ಸಿಡೆಂಟ್ ವಿಟಮಿನ್‌ಗಳು ಸಮೃದ್ಧವಾಗಿರುವ ಆಹಾರ ಸೇವನೆಯಿಂದ ಕಣ್ಣಿನ ಆರೋಗ್ಯ ಕಾಪಾಡಬಹುದು.
ಕಣ್ಣನ್ನು ಆರೋಗ್ಯವಾಗಿಡುವ ಮುಖ್ಯ ಕ್ರಮಗಳಲ್ಲಿ ನಿಯಮಿತ ಕಣ್ಣಿನ ಪರೀಕ್ಷೆಗಳು ಕೂಡ ಸೇರಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.ಸೂರ್ಯನ ಬೆಳಕಿನಲ್ಲಿರುವ ಯುವಿಎ ಮತ್ತು ಯುವಿಬಿ ಕಿರಣಗಳು ಕಣ್ಣಿಗೆ ಹಾನಿಕರ. ಕೆಟಾರೆಕ್ಟ್ ಮುಂತಾದ ಕಾಯಿಲೆಗಳಿಗೆ ಅವು ಕಾರಣವಾಗಿದೆ.
ಯುವಿಎ ಮತ್ತು ಯುವಿಬಿ ಸೂರ್ಯನ ಬೆಳಕಿನಲ್ಲಿರುವ ಅದೃಶ್ಯ ಕಿರಣಗಳು. ಸೂರ್ಯನ ಹಾನಿಕರ ಕಿರಣಗಳು ಕಣ್ಣಿಗೆ ಬೀಳದಂತೆ ತಡೆಯಲು ಯುವಿ ಫಿಲ್ಟರ್ ಗ್ಲಾಸ್‌ಗಳನ್ನು ಬಳಸುವುದು ಕ್ಷೇಮಕರ. ಕಾಂಟ್ಯಾಂಕ್ಟ್ ಲೆನ್ಸ್‌ಗಳು ಕೂಡ ಈಗ ಯುವಿ ರಕ್ಷಣೆ ಹೊಂದಿವೆ.ಯುವಿಗೆ ಕಣ್ಣನ್ನು ಒಡ್ಡುವ ಅಪಾಯವು ಪ್ರತಿಬಿಂಬಿತ ಸ್ಥಳಗಳಲ್ಲಿ ಹೆಚ್ಚಿಗೆ ಇರುತ್ತದೆ.
ಉದಾಹರಣೆಗೆ ನೀರು. ಬೀಚ್‌ಗಳಲ್ಲಿ, ಬೋಟಿಂಗ್ ಸ್ಥಳಗಳಲ್ಲಿ ಸನ್ ಗ್ಲಾಸ್ ಬಳಸುವುದು ಉಚಿತ. ಇಳಿವಯಸ್ಸಿನಲ್ಲಿ ಕೆಟಾರಾಕ್ಟ್ ಬೆಳೆಯಲು ಧೂಮಪಾನದ ನಂಟು ಕೂಡ ಸೇರಿದೆ. ಅಸಂಖ್ಯ ಧೂಮಪಾನಿಗಳು ಕಣ್ಣಿನ ದೋಷಗಳಿಗೆ ತುತ್ತಾಗಿರುವುದು ರುಜುವಾತಾಗಿದೆ.
ಆಂಟಿಆಕ್ಸಿಡೆಂಟ್ ಅಂದರೆ ರಾಸಾಯನಿಕ ಕ್ರಿಯೆಗೆ ಒಳಪಡದ ವಿಟಮಿನ್‌ಗಳು ಸಮೃದ್ಧವಾಗಿರುವ ಆಹಾರ ಸೇವನೆಯಿಂದ ಇಳಿವಯಸ್ಸಿನ ಅಕ್ಷಿಪಟಲದ ತೊಂದರೆಯಿಂದ ರಕ್ಷಿಸುತ್ತದೆ. ಎ, ಸಿ, ಮತ್ತು ಇ ಆಂಟಿಆಕ್ಸಿಡೆಂಟ್ ವಿಟಮಿನ್‌ಗಳು ಅಕ್ಷಿಪಟಲದ ರಕ್ಷಣೆ ಮಾಡುತ್ತವೆ.