ಗರ್ಭಿಣಿಯರೇ ಜೋಕೆ! ಮೊಬೈಲ್ ಬಳಕೆ ಉಚಿತವಲ್ಲವಂತೆ!

ND
ಮೊಬೈಲ್ ಪೋನ್ ಬಳಸುವ ಗರ್ಭಿಣಿ ಮಹಿಳೆಯರಿಗೆ ಜನಿಸಿದ ಮಕ್ಕಳಲ್ಲಿ ವರ್ತನೆ ಮತ್ತು ಭಾವನಾತ್ಮಕ ಸಮಸ್ಯೆಗಳಿರುತ್ತವೆ ಎಂಬ ಗಂಭೀರ ಅಂಶವನ್ನು ಅಧ್ಯಯನ ಒಂದು ಹೊರಗೆಡಹಿದೆ.

ಕೊಲಂಬಿಯಾ, ಲಾಸ್ ಏಂಜಲೀಸ್, ಅರುಸ್, ಡೆನ್ಮಾರ್ಕ್ ವಿಶ್ವವಿದ್ಯಾನಿಲಯಗಳ ಸಂಶೋಧಕರು ಸುಮಾರು 13,000 ಮಕ್ಕಳ ಸಮೀಕ್ಷೆ ನಡೆಸಿದ್ದು, ಗರ್ಭಿಣಿ ಮಹಿಳೆಯು ದಿನವೊಂದರ ಎರಡು ಅಥವಾ ಮೂರು ಬಾರಿ ಮೊಬೈಲ್ ಬಳಸಿದರೂ ಸಹ, ಅಂತಹವರ ಮಕ್ಕಳು ಅತಿಚಟುವಟಿಕೆಯ, ಗುಣನಡತೆ ಸಂಕಷ್ಟದ ಮತ್ತು ಭಾವನಾತ್ಮಕ ಸಂಬಂಧಗಳ ಸಮಸ್ಯೆಗಳನ್ನು ಎದುರಿಸುವ ಅಪಾಯ ಇದೆ ಎಂಬ ಅಂಶವನ್ನು ಪತ್ತೆ ಮಾಡಿದೆ. ಇದಲ್ಲದೆ ಇಂತಹ ಪುಟಾಣಿಗಳು ಏಳು ವರ್ಷಕ್ಕಿಂತ ಒಳಗೆ ಮೊಬೈಲ್ ಬಳಸಿದರೆ ಈ ಸಮಸ್ಯೆ ಇನ್ನಷ್ಟು ಹೆಚ್ಚುವ ಸಮಸ್ಯೆಯೂ ಇರುತ್ತದಂತೆ.

ಗರ್ಭವತಿ ಮಹಿಳೆಯರು ಮತ್ತು ಪುಟ್ಟ ಮಕ್ಕಳ ಮೊಬೈಲ್ ಬಳಕೆಯ ದುಷ್ಪರಿಣಾಮವು, ತಂಬಾಕು ಅಥವಾ ಮದ್ಯಪಾನದ ಬಳಕೆಗಿಂತ ಕಡಿಮೆ ಏನಲ್ಲ ಎಂದಿರುವ ಅಧಿಕೃತ ರಷ್ಯಾದ ರೆಡಿಯೇಶನ್ ಕಾವಲು ಸಂಸ್ಥೆ ಈ ಕುರಿತು ಎಚ್ಚರಿಕೆ ನೀಡಿದೆ.

ಎಪಿಡೆಮಿಯಾಲಜಿ ಪತ್ರಿಕೆಯ ಜುಲೈ ಆವೃತ್ತಿಯಲ್ಲಿ ಪ್ರಕಟವಾಗಬೇಕಿರುವ ಈ ಅಧ್ಯಯನದಲ್ಲಿ ವಿಜ್ಞಾನಿಗಳು, 90ರ ದಶಕದ ಅಂತ್ಯದ ವೇಳೆ ಡೆನ್ಮಾರ್ಕ್‌ನಲ್ಲಿ ಜನಿಸಿರುವ 13,159 ಮಕ್ಕಳ ಅಮ್ಮಂದಿರ ಸಮೀಕ್ಷೆ ನಡೆಸಿದ್ದು, ಗರ್ಭಾವಸ್ಥೆಯ ವೇಳೆ ಅವರ ಮೊಬೈಲ್ ಫೋನ್ ಬಳಕೆಯ ಅಭ್ಯಾಸಗಳ ಕುರಿತು ಮತ್ತು ಏಳರ ಹರೆಯದ ತನಕ ಅವರ ಮಕ್ಕಳು ಮೊಬೈಲ್ ಬಳಕೆಯ ಕುರಿತು ಅಧ್ಯಯನ ನಡೆಸಿದ್ದರು.

ಮೊಬೈಲ್ ಬಳಕೆಯ ಅಮ್ಮಂದಿರ ಮಕ್ಕಳು ಶೇ.54ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಈ ಮೇಲೆ ಹೇಳಿರುವ ಸಮಸ್ಯೆಗಳನ್ನು ಹೊಂದಿರುತ್ತಾರೆ. ಮತ್ತು ರೇಡಿಯೇಶನ್‌ಗೆ ಒಡ್ಡಿಕೊಂಡಿರುವ ಸಂಭವನೀಯತೆಗೆ ತಕ್ಕಂತೆ ಈ ಪ್ರಮಾಣ ಹೆಚ್ಚಿದೆ ಎಂಬುದಾಗಿ ಬ್ರಿಟನ್ನಿನ ಇಂಡಿಪೆಂಡೆಂಟ್ ಡೈಲಿ ಹೇಳಿದೆ.

ಅದಾಗ್ಯೂ, ಫಲಿತಾಂಶಗಳನ್ನು ಅತ್ಯಂತ ಎಚ್ಚರಿಕೆಯಿಂದ ವ್ಯಾಖ್ಯಾನಿಸಬೇಕಾಗಿದೆ ಮತ್ತು ಇನ್ನಷ್ಟು ಅಧ್ಯಯನ ನಡೆಸುವ ಮೂಲಕ ದೃಢೀಕರಿಸುವ ಅಗತ್ಯವಿದೆ ಎಂದು ಹೇಳಿದೆ.

ವೆಬ್ದುನಿಯಾವನ್ನು ಓದಿ