ನೀವು ಯಾರ ಬಳಿಯಾದರೂ ನಿಮ್ಮ ಆರೋಗ್ಯದ ಕುರಿತ ಸಣ್ಣಪುಟ್ಟ ದೂರುಗಳನ್ನು ಹೇಳಿಕೊಂಡಿರೋ, ತಟ್ಟಂತ ಬರುವ ಸಲಹೆ 'ಚೆನ್ನಾಗಿ ನೀರುಕುಡಿಯಿರಿ'. ಆದರೆ ಸಾಕಷ್ಟು ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವ ಅಂತಹ ಪ್ರಯೋಜನಗಳೇನು ಇಲ್ಲ ಅಂತ ಅಧ್ಯಯನವೊಂದು ಹೇಳಿದೆ. ಉತ್ತಮ ಆರೋಗ್ಯಕ್ಕೆ, ತ್ವಚೆಯ ಕಾಂತಿಗೆ, ಆಹಾರ ಜೀರ್ಣವಾಗಲು ದಿನಕ್ಕೆ ಎಂಟುಗ್ಲಾಸು ನೀರು ಕುಡಿಯಬೇಕು ಎಂಬುದು ಸಾಮಾನ್ಯ ನಂಬುಗೆ. ಕೆಲವು ವೈದ್ಯರೂ ನೀರು ಕುಡಿಯುವ ಸಲಹೆಯನ್ನೇ ಮಾಡುತ್ತಾರೆ.
ಆದರೆ, ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಕಂಡುಕೊಂಡಿರುವ ಪ್ರಕಾರ ದಿನವೊಂದರ ಎಂಟು ಗ್ಲಾಸು ನೀರು ಕುಡಿಯುವುದು ಆರೋಗ್ಯ ಸುಧಾರಣೆಯಲ್ಲಿ ಅಂತಾ ಮಹತ್ವದ್ದೇನು ಮಾಡುವುದಿಲ್ಲವಂತೆ.
ಹೆಚ್ಚು ನೀರು ಕುಡಿಯುವುದರಿಂದ ಲಭಿಸುವ ಅನುಕೂಲಗಳ ಕುರಿತ ಸ್ಫಷ್ಟ ಪುರಾವೆ ಏನೂ ಇಲ್ಲ. ಅದೇ ರೀತಿ ಪ್ರಯೋಜನ ಇಲ್ಲದೆ ಇರುವ ಕುರಿತೂ ಪುರಾವೆಗಳಿಲ್ಲ ಎಂಬುದಾಗಿ ಸಂಶೋಧಕರಾದ ಡಾ| ಡಾನ್ ನೆಗಾಯ್ನಾ ಮತ್ತು ಡಾ| ಸ್ಟಾನ್ಲಿ ಗೋಲ್ಡ್ಪಾರ್ಬ್ ಜರ್ನಲ್ ಆಫ್ ದ ಅಮೆರಿಕನ್ ಸೊಸೈಟಿ ಆಫ್ ನೆಫ್ರಾಲಜಿಯ ಇತ್ತೀಚಿನ ಆವೃತ್ತಿಯಲ್ಲಿ ಬರೆದಿದ್ದಾರೆ.
ಸಾಮಾನ್ಯ ಆರೋಗ್ಯವಂತ ವ್ಯಕ್ತಿಯೊಬ್ಬ ಇದೀಗ ಶಿಫಾರಸು ಮಾಡಲಾಗಿರುವ ಎಂಟು ಗ್ಲಾಸು ನೀರನ್ನು ಪ್ರತಿನಿತ್ಯ ಸೇವಿಸುವ ಅಗತ್ಯವಿದೆ ಎಂಬದನ್ನು ಯಾವುದೇ ಒಂದು ಅಧ್ಯಯನ ಪುಷ್ಠೀಕರಿಸಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಅದಲ್ಲದೆ, ದಿವಸಕ್ಕೆ ಎಂಟು ಗ್ಲಾಸು ನೀರು ಕುಡಿಯಬೇಕು ಎಂಬ ಸಲಹೆ ಎಲ್ಲಿಂದ ಬಂದಿದೆ ಎಂಬುದೂ ಸಹ ಸ್ಪಷ್ಟವಿಲ್ಲ ಎಂದು ಲೇಖನದಲ್ಲಿ ಹೇಳಲಾಗಿದೆ.