ಭಾವಾತ್ಮಕ ಹಿಂಸಾಚಾರಕ್ಕೆ ಕಾರಣವಾಗುವ ಮದ್ಯಪಾನ

ಕುಡಿತದ ಅಮಲಿನ ದೌರ್ಜನ್ಯವು ಕೌಟುಂಬಿಕ ಹಿಂಸಾಚಾರ ಮತ್ತು ಸಾವಿನಲ್ಲಿ ಪರ್ಯಾವಸನವಾಗುತ್ತದೆ. ಇತ್ತೀಚೆಗೆ ಹೆತ್ತವರು ತಮ್ಮದೇ ಮಗುವನ್ನು ಸಾಯಿಸಿರುವುದಕ್ಕೆ ಕುಡಿತದ ಅಮಲು ಕಾರಣ ಎಂದು ಹೇಳಲಾಗಿದೆ.

ಕುಡಿತವು ದೈಹಿಕ ಹಿಂಸಾಚಾರಕ್ಕೆ ಪ್ರೇರೇಪಣೆ ನೀಡುವಂತೆ, ಮಾನಸಿಕ ಹಿಂಸಾಚಾರಕ್ಕೂ ಪ್ರೇರೇಪಣೆ ನೀಡುತ್ತದೆ ಎಂದು ಕುಡಿತದ ಪರಿಣಾಮದಿಂದ ನಲುಗಿದ ಕುಟುಂಬದ ಸುರೇಖಾ ಹೇಳುತ್ತಾರೆ.

ಸುರಖಾಳ ಪತಿ ಇದೀಗ ಕುಡಿತದಿಂದ ಮುಕ್ತಿ ಹೊಂದಿದ್ದರೂ, ಹಿಂದಿನ ಅನುಭವದ ದುಸ್ವಪ್ನದ ಭೀತಿಯಿಂದ ಅವರು ಇಂದಿಗೂ ಹೊರಬಂದಿಲ್ಲ.
ಮನೆಯಲ್ಲಿ ದಿನನಿತ್ಯವೂ ಸಿಟ್ಟು ಮತ್ತು ಭಯ. ಅವರು ಸುರಕ್ಷಿತವಾಗಿ ಮನೆ ತಲುಪುತ್ತಾರೋ, ಇಲ್ಲ ಎಲ್ಲಿಯಾದರೂ ಕಾರು ಡಿಕ್ಕಿಯಾಗುತ್ತದೆಯೋ ಎಂಬುದು ದೈನಂದಿನ ಉದ್ವಿಗ್ನತೆಯಾಗಿತ್ತು ಎಂದವರು ಹೇಳಿಕೊಂಡಿದ್ದಾರೆ.

ಕುಡುಕರಿರುವ ಮನೆಗಳಲ್ಲಿ ಕೌಟುಂಬಿಕ ಹಿಂಸಾಚಾರ ವಿಜೃಂಭಿಸುತ್ತದೆ. ಮದ್ಯಪಾನವು ಹಿಂಸೆಗೆ ನೇರ ಕಾರಣ ಅಲ್ಲದಿದ್ದರೂ ಪರೋಕ್ಷವಾಗಿ ಅದು ಮಾನಸಿಕ ಹಿಂಸೆಗೆ ದಾರಿಯಾಗುತ್ತದೆ ಎಂದು ಸಾಮಾಜಿಕ ವಿಜ್ಞಾನಿಗಳು ಹೇಳುತ್ತಾರೆ.

ಕುಡಿತದ ಅತಿದೊಡ್ಡ ಬಲಿಪಶುಗಳೆಂದರೆ ಮಕ್ಕಳು. 14 ವರ್ಷದ ಕುಮಾರನ ಕತೆ ಕೇಳಿ. ಆತ ತನ್ನ ಕುಟುಂಬದ ಏಕೈಕ ದುಡಿಮೆಗಾರ. ಈತ ತರಕಾರಿ ಮಾರುಕಟ್ಟೆಯಲ್ಲಿನ ಅಳಿದುಳಿದ ತ್ಯಾಜ್ಯವನ್ನು ಮಾರಾಟಮಾಡುತ್ತಾನೆ. ಆತನ ಹೆತ್ತವರು ಸಿಕ್ಕಾಪಟ್ಟೆ ಕುಡಿಯುವ ಕಾರಣ ಅವರಲ್ಲಿ ದುಡಿಯಲು ಶಕ್ತಿ ಇಲ್ಲ. ಆಕೆಯ ಅಕ್ಕ ಮನೆಗೆಲಸಗಳನ್ನು ಮಾಡುವುದರೊಂದಿಗೆ ತನ್ನ ಕುಡುಕ ಅಪ್ಪಅಮ್ಮನ ಸೇವೆಯನ್ನೂ ಮಾಡುತ್ತಾಳೆ. ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡಬೇಕಾಗಿದ್ದ ಮಕ್ಕಳಿಗೆ ಇದು ಹೆತ್ತವರ ಮದ್ಯಪಾನ ನೀಡಿದ ಶಿಕ್ಷೆ.

ಎರಡು ವರ್ಷಗಳ ಹಿಂದೆ ವ್ಯಕ್ತಿಯೊಬ್ಬ ಕುಡಿತದ ಅಮಲಿನಲ್ಲಿ ತನ್ನ ಪತ್ನಿಗೆ ಮೂರು ಬಾರಿ ತಲಾಕ್ ಹೇಳಿದ್ದ. ಹಾಗಾಗಿ ವೈವಾಹಿಕ ಜೀವನವೇ ಒಡೆದು ಹೋಗಿತ್ತು! ಹೀಗಾಗಿ ಮದ್ಯಪಾನವು ದೈಹಿಕ ಹಿಂಸೆಯೊಂದಿಗೆ ಕುಟುಂಬದಲ್ಲಿನ ಮಾನಸಿಕ ಹಿಂಸೆಗೂ ಹಾದಿಯಾಗುತ್ತದೆ.

ವೆಬ್ದುನಿಯಾವನ್ನು ಓದಿ