ಟೈಪ್ 2 ಮಧುಮೇಹ ರೋಗಿಗಳು ಅತ್ಯಧಿಕ ಸಂಖ್ಯೆಯಲ್ಲಿರುವ ರಾಷ್ಟ್ರ ಭಾರತ ಎನ್ನುವುದು ಸರ್ವವೇದ್ಯ ಸಂಗತಿಯಾಗಿದೆ. ಈ ವಿಷಯವನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ ಇತ್ತೀಚೆಗೆ ದೃಢಪಡಿಸಿದೆ.
ಪ್ರಸಕ್ತ ಭಾರತದಲ್ಲಿ 40 ದಶಲಕ್ಷ ಟೈಪ್ 2 ಮಧುಮೇಹ ರೋಗಿಗಳಿದ್ದಾರೆಂದು ಅಂದಾಜು ಮಾಡಲಾಗಿದೆ.ಭಾರತದಲ್ಲಿ ಇಂತಹ ಪರಿಸ್ಥಿತಿ ಏಕಿದೆ?ಭಾರತದ ಅಗಾಧ ಜನಸಂಖ್ಯೆ ಅಥವಾ ಕ್ಷಿಪ್ರಗತಿಯ ನಗರೀಕರಣ ಮಾತ್ರ ಇದಕ್ಕೆ ಕಾರಣವಲ್ಲ. ಅನುವಂಶೀಯತೆಯ ಪ್ರಭಾವವೂ ಸಹ ಉಳಿದ ರಾಷ್ಟ್ರಗಳಿಂತ ಹೆಚ್ಚು ಮಧುಮೇಹಿಗಳಾಗಲು ಕಾರಣವಾಗಿದೆ.
ಮಧುಮೇಹಿ ಪಾದವೆಂದರೇನು?
ಮಧುಮೇಹಿಗಳು ಮೂತ್ರಪಿಂಡ ವೈಫಲ್ಯ, ಹೃದಯಾಘಾತ ಮತ್ತು ಅಂಗಚ್ಛೇದನ ಮುಂತಾದ ಹಲವಾರು ಸಮಸ್ಯೆಗಳಿಗೆ ತುತ್ತಾಗುವ ಸಂಭವವಿದೆ. ಇವೆಲ್ಲ ಸಮಸ್ಯೆಗಳಲ್ಲಿ ಮಧುಮೇಹಿ ಪಾದದ ಸೋಂಕು ಸಮಸ್ಯೆಯನ್ನು ಬಹುಮಟ್ಟಿಗೆ ನಿವಾರಿಸಬಹುದಾಗಿದೆ.
ಮಧುಮೇಹಿ ಪಾದದ ಸೋಂಕು ಸಮಸ್ಯೆಯ ಪ್ರಮಾಣವೇನು? ಚೆನ್ನೈನ ಎಂವಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿಜಯ್ ವಿಶ್ವನಾಥನ್ ಅವರು ನವದೆಹಲಿಯ ಏಮ್ಸ್, ವೆಲ್ಲೂರಿನ ಸಿಎಂಸಿ ಮತ್ತು ಮಧುರೈನ ಸರ್ಕಾರಿ ವೈದ್ಯಕೀಯ ಕಾಲೇಜು ಸಹಯೋಗದಲ್ಲಿ ಮಧುಮೇಹಿ ರೋಗಿಗಳ ಬಗ್ಗೆ ಬಹುಕೇಂದ್ರಿತ ಅಧ್ಯಯನ ನಡೆಸಿದರು.
ಮಧುಮೇಹಿ ಪರೀಕ್ಷೆ ಕ್ಲಿನಿಕ್ಗಳಲ್ಲಿ ಶೇ.10ರಷ್ಟು ಹೊರರೋಗಿಗಳಿಗೆ ಪಾದದ ಸೋಂಕಿನ ಸಮಸ್ಯೆಯಿರುವುದು ಕಂಡುಬಂತು. ಪಾದಗಳ ರಕ್ಷಣೆ ಮತ್ತು ಉಗುರು ಕತ್ತರಿಸುವ ಬಗ್ಗೆ ಅಲ್ಪ ತಿಳಿವಳಿಕೆ ಈ ಸಮಸ್ಯೆಗಳಿಗೆ ಕಾರಣವಾಗಿತ್ತು.
ಡಯಾಬಿಟಿಕ್ ಫುಟ್ ಸೊಸೈಟಿ:
ಮಧುಮೇಹಿ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಮಧುಮೇಹಿ ಪಾದದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2001ರಲ್ಲಿ ಈ ಸೊಸೈಟಿಯನ್ನು ರಚಿಸಲಾಯಿತು. ಮಧುಮೇಹಿ ಪಾದದ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆ ಮತ್ತು ಪಾದಕ್ಕೆ ಸೋಂಕು ತಗುಲಿದ ರೋಗಿಗಳ ಅಂಗಚ್ಛೇದನ ನಿವಾರಣೆಯ ವಿವಿಧ ವಿಧಾನಗಳ ಬಗ್ಗೆ ವೈದ್ಯರಿಗೆ ಶಿಕ್ಷಣ ನೀಡುವುದು ಇದರ ಉದ್ದೇಶವಾಗಿತ್ತು.