ಚೆನ್ನೈನ ಮಾಲಾರ್ ಆಸ್ಪತ್ರೆಯನ್ನು ಸ್ವಾಧೀನಕ್ಕೆ ತೆಗೆದುಕೊಂಡ ಬಳಿಕ ರಾನ್‌ಬಾಕ್ಸಿ ಸಮೂಹ ಪ್ರಾಯೋಜಿತ ಫೋರ್ಟಿಸ್ ಹೆಲ್ತ್‌ಕೇರ್ ದಕ್ಷಿಣದಲ್ಲಿ ತನ್ನ ಹೆಜ್ಜೆಗುರುತನ್ನು ಹೆಚ್ಚಿಸಲು ತರಾತುರಿ ತೋರಿಸುತ್ತಿದೆ. ಚೆನ್ನೈನ 450 ಹಾಸಿಗೆಯ ಲೈಫ್‌ಲೈನ್ ಆಸ್ಪತ್ರೆಯ ಸರಪಳಿ ಮೇಲೆ ಫೋರ್ಟಿಸ್ ಈಗ ಕಣ್ಣಿಟ್ಟಿದೆ.
ದೆಹಲಿ ಮೂಲದ ಹೆಲ್ತ್‌ಕೇರ್ ಪ್ರಮುಖ ಸಂಸ್ಥೆಯು ಡಾ. ಜೆ.ಎಸ್. ಜಯಕುಮಾರ್ ಪ್ರವರ್ತಕರಾದ ಆಸ್ಪತ್ರೆಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಪ್ರಸ್ತಾಪವನ್ನು ಫೋರ್ಟಿಸ್ ಮಂಡಿಸಿದೆ.
ದಕ್ಷಿಣ ಪ್ರದೇಶದ ವಿಶೇಷವಾಗಿ ತಮಿಳುನಾಡಿನ ಮಧ್ಯಮಗಾತ್ರದ ಆಸ್ಪತ್ರೆಗಳ ಸ್ವಾಧೀನಕ್ಕೆ ಹಪಹಪಿಸುತ್ತಿರುವ ಪೋರ್ಟಿಸ್ ತಿರುನಲ್ವೇಲಿಯ 100 ಹಾಸಿಗೆಗಳ ಗೆಟ್ ವೆಲ್ ಆಸ್ಪತ್ರೆಯನ್ನು ಹೊಂದಲು ಮಾತುಕತೆಯ ಅಂತಿಮ ಹಂತದಲ್ಲಿದೆಯೆಂದು ಹೇಳಲಾಗಿದೆ. ಲೈಫ್‌ಲೈನ್ ಆಸ್ಪತ್ರೆ ಸರಪಳಿಯಲ್ಲಿ ಈಗ 450 ಹಾಸಿಗೆಗಳು ಮತ್ತು 30+ ಕಾರ್ಪೋರೇಟ್ ಕ್ಲಿನಿಕ್‌ಗಳಿವೆ.
ಅದರ ಪಟ್ಟಿಯಲ್ಲಿ 1000 ನೌಕರರಿದ್ದಾರೆ. ಮಾ.2007ರಲ್ಲಿ 20 ಕೋಟಿ ರೂ.ವಹಿವಾಟು ನಡೆಸಿರುವ ಲೈಫ್‌ಲೈನ್ ಮೌಲ್ಯವನ್ನು 200ರಿಂದ 300 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ, ಈ ವರ್ಷ 40 ಕೋಟಿ ರೂ. ವಹಿವಾಟು ನಡೆಸಲು ಲೈಫ್‌ಲೈನ್ ಕಣ್ಣಿರಿಸಿದೆ. ನಗರದ ನಾಲ್ಕು ಆಸ್ಪತ್ರೆಗಳಲ್ಲಿ 2.5 ಲಕ್ಷ ಚದರ ಅಡಿ ಜಾಗವನ್ನು ಹೊಂದಿರುವ ಆಸ್ಪತ್ರೆ 1997ರಲ್ಲಿ ಕೇವಲ 25 ಜನರೊಂದಿಗೆ 20 ಹಾಸಿಗೆಯೊಂದಿಗೆ ಆರಂಭವಾಯಿತು.
ಅದಾದ ಬಳಿಕ ಕ್ಷಿಪ್ರಗತಿಯಲ್ಲಿ ವಿಸ್ತರಣೆಯ ಯೋಜನೆಯನ್ನು ಲೈಫ್‌ಲೈನ್ ಕೈಗೊಂಡಿತು. ನಗರದ ಐಟಿ ಕಾರಿಡ್ ಪೆರುಂಗುಡಿಯಲ್ಲಿ 225 ಹಾಸಿಗೆ ಸೌಲಭ್ಯದ ಆಸ್ಪತ್ರೆಯನ್ನು ಲೈಫ್‌ಲೈನ್ ಹೊಂದಿದೆ. ಇತ್ತೀಚೆಗೆ ಟಿ.ನಗರದ ಭಾರತೀರಾಜ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದೊಂದಿಗೆ 10 ವರ್ಷಗಳ ಗುತ್ತಿಗೆ ಒಪ್ಪಂದಕ್ಕೆ ಲೈಫ್‌ಲೈನ್ ಪ್ರವೇಶಿಸಿತು. ಈ ಒಪ್ಪಂದದಿಂದ ಲೈಫ್‌ಲೈನ್ ಹಾಸಿಗೆ ಸೌಲಭ್ಯದ ಬಲ 40ರಷ್ಟು ಹೆಚ್ಚಾಯಿತು.
ಸ್ಥಿರಾಸ್ತಿ ಮೌಲ್ಯ ಮತ್ತು ಬ್ರಾಂಡ್ ಮೌಲ್ಯ ಎರಡೂ ಲೈಫ್‌ಲೈನ್ ಆಸ್ಪತ್ರೆಯನ್ನು "ಹಾಟ್" ಸ್ವಾಧೀನದ ಗುರಿಯನ್ನಾಗಿ ಮಾಡಿದೆ. ಇದರಿಂದ ಆರೋಗ್ಯಸೇವಾವಲಯದ ದೈತ್ಯರ ಗಮನವನ್ನು ಸೆಳೆಯಲು ಲೈಫ್‌ಲೈನ್‌ಗೆ ಸಾಧ್ಯವಾಗಿದೆ ಎಂದು ಕೈಗಾರಿಕೆ ಮೂಲಗಳು ಹೇಳಿವೆ,
ಲೈಫ್‌ಲೈನ್ ಇತ್ತೀಚೆಗೆ ತೀವ್ರ ಹಣಕಾಸು ಹರಿವಿನ ಮುಗ್ಗಟ್ಟು ಎದುರಿಸುತ್ತಿರುವುದು ಕೂಡ ಫೋರ್ಟಿಸ್ ಪ್ರಸ್ತಾಪವನ್ನು ಲಾಭದಾಯಕವೆನಿಸಿದೆ. ಆದಾಗ್ಯೂ, ನಾವು ಯಾವುದೇ ಬ್ಯಾಂಕಿಗೆ ಬಾಕಿಯಿರಿಸಿಲ್ಲ ಎಂದು ಆಸ್ಪತ್ರೆ ಅಧಿಕಾರಿಯೊಬ್ಬರು ತಿಳಿಸಿದ್ದು, ಈ ವರ್ಷದ ಲಾಭವನ್ನು ಘೋಷಿಸುವುದಾಗಿ ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲಿ ಮಲ್ಟಿಸ್ಪೆಷಾಲಿಟಿ ಮಾಲಾರ್ ಆಸ್ಪತ್ರೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಮೂಲಕ ಪೋರ್ಟಿಸ್ ದಕ್ಷಿಣದಲ್ಲಿ ತನ್ನ ಖಾತೆ ಆರಂಭಿಸಿತ್ತು.
ಒಪ್ಪಂದ ಕುದುರಿದ ತಕ್ಷಣವೇ ಫೋರ್ಟಿಸ್ ಹೆಲ್ತ್‌ಕೇರ್ ಮತ್ತು ಸಾಂಸ್ಥಿಕ ಅಭಿವೃದ್ಧಿ ಅಧ್ಯಕ್ಷ ದಲ್ಜಿತ್ ಸಿಂಗ್ ದಕ್ಷಿಣದಲ್ಲಿ ತನ್ನ ಬೌಗೋಳಿಕ ಉಪಸ್ಥಿತಿ ವೃದ್ಧಿಗೆ ತೀವ್ರ ಆಸಕ್ತಿ ತಾಳಿರುವುದಾಗಿ ಹೇಳಿದ್ದರು.