ಮಧುಮೇಹ ರೋಗಿಗಳಿಗೆ ನೋವಿನ ಇಂಜಕ್ಷನ್ ಬದಲಿಗೆ ಪರ್ಯಾಯ ಇನ್ಸುಲಿನ್ ಮಾತ್ರೆಗಳನ್ನು ಭಾರತೀಯ ಕಂಪನಿಯೊಂದು ಅಭಿವೃದ್ಧಿಪಡಿಸಿದ್ದು, ಲಕ್ಷಾಂತರ ಜನ ಮಧುಮೇಹ ರೋಗಿಗಳು ನಿಟ್ಟುಸಿರುಬಿಡುವಂತಾಗಿದೆ.
ಭಾರತದ ಪ್ರಮುಖ ಜೈವಿಕತಂತ್ರಜ್ಞಾನ ಕಂಪನಿ ಬಯೋಕಾನ್ ಲಿಮಿಟೆಡ್ ಓರಲ್ ಇನ್ಸುಲಿನ್ ಬಗ್ಗೆ ಮೊದಲನೆ ಹಂತದ ಅಧ್ಯಯನದ ಫಲಿತಾಂಶವನ್ನು ಆಮ್ಸ್‌ಸ್ಟರ್‌ಡ್ಯಾಂನಲ್ಲಿ ಮಧುಮೇಹ ಅಧ್ಯಯನ ಸಂಸ್ಥೆಯ ಸಭೆಯಲ್ಲಿ ಮಂಡಿಸಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ವಿಶ್ವದಲ್ಲೇ ಅತ್ಯಧಿಕ ಸಂಖ್ಯೆಯ 41 ದಶಲಕ್ಷ ಮಧುಮೇಹ ರೋಗಿಗಳು ಇರುವ ರಾಷ್ಟ್ರದಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.ಐಎನ್-105 ಇನ್ಸುಲಿನ್ ವಿಶೇಷ ಗುಣಗಳನ್ನು ಹೊಂದಿದ್ದು, ಮಾತ್ರೆಯ ರೂಪದಲ್ಲಿ ಸೇವಿಸಲು ಸಾಧ್ಯವಾಗಿದೆ.
ಸೂಜಿ ಮುಕ್ತ ಇನ್ಸುಲಿನ್ ಆಗಿರುವ ಇದು ದೇಹದೊಳಗೆ ಸೇರಿದಾಗ ಮೇದೋಜೀರಕ ಗ್ರಂಥಿ ರಕ್ತ ಪರಿಚಲನೆಯೊಳಗೆ ಇನ್ಸುಲಿನ್ ಬಿಡುಗಡೆ ಮಾಡುತ್ತದೆ.ಐಎನ್-105ಯನ್ನು ಮಾತ್ರೆಗಳ ರೂಪದಲ್ಲಿ ಆರೋಗ್ಯಯುಕ್ತ ಕಾರ್ಯಕರ್ತರ ಮೇಲೆ ಪ್ರಯೋಗಿಸಲಾಯಿತು,
ಈ ಫಲಿತಾಂಶದ ಆಧಾರದ ಮೇಲೆ ಬಯೋಕಾನ್ ಇನ್ನಷ್ಟು ಕ್ಲಿನಿಕಲ್ ಪರೀಕ್ಷೆಗಳ ಮೂಲಕ ಇದರ ಅಭಿವೃದ್ಧಿಗೆ ಇಚ್ಛಿಸಿದೆ.ಮದುಮೇಹಿ ರೋಗಿಗಳಿಗೆ ಓರಲ್ ಇನ್ಸುಲಿನ್ ತರುವ ಪ್ರಯತ್ನದಲ್ಲಿ ಇದು ನಮ್ಮ ಪ್ರೋತ್ಸಾಹಕಾರಿ ಹೆಜ್ಜೆ ಎಂದು ಬಯೋಕಾನ್ ಸಿಎಂಡಿ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.
ವಿಶ್ವದಲ್ಲೇ ಅತ್ಯಧಿಕ ಸಂಖ್ಯೆಯ ಮಧುಮೇಹಿ ರೋಗಿಗಳನ್ನು ಹೊಂದಿರುವ ಭಾರತದಲ್ಲಿ ಸಕ್ಕರೆ ಕಾಯಿಲೆ ಅಗಾಧ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಿದೆ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ 1995ರಲ್ಲಿ 19 ದಶಲಕ್ಷ ಇದ್ದದ್ದು 2007ರಲ್ಲಿ 40.9 ದಶಲಕ್ಷಕ್ಕೆ ಏರಿಕೆಯಾಗಿದೆ.
ಪ್ರಸಕ್ತ ಭಾರತದ ನಗರ ಜನಸಂಖ್ಯೆಯಲ್ಲಿ ಶೇ. 11ರಷ್ಟು ಮಂದಿಗೆ ಮತ್ತು ಗ್ರಾಮೀಣ ಜನಸಂಖ್ಯೆಯಲ್ಲಿ ಶೇ. 15ರಷ್ಟು ಜನರಿಗೆ ಮಧುಮೇಹವಿದೆ. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಲು ಸದಾ ಕುಳಿತುಕೊಂಡೇ ಇರುವ ಜೀವನಶೈಲಿ, ದೈಹಿಕ ಚಟುವಟಿಕೆಯ ಕೊರತೆ, ಒತ್ತಡ ಮತ್ತು ಕೊಬ್ಬು, ಸಕ್ಕರೆ ಮತ್ತು ಕ್ಯಾಲರಿ ಅಂಶಗಳಿರುವ ಆಹಾರ ಸೇವನೆ ಕಾರಣವೆಂದು ವಿವಿಧ ಅಧ್ಯಯನಗಳು ದೃಢಪಡಿಸಿವೆ.
ಟೈಪ್ 2 ಮಧುಮೇಹಿಗಳು ಶೇ. 95ರಷ್ಟು ಇದ್ದಾರೆ. ಈ ರೋಗಿಗಳು ಇನ್ಸುಲಿನ್ ಅವಲಂಬಿಸಬೇಕಿಲ್ಲ ಮತ್ತು ಸಮತೋಲಿತ ಆಹಾರ ಸೇವಿಸುವ ಮೂಲಕ, ನಿಯಮಿತ ವ್ಯಾಯಾಮ ಮತ್ತು ಔಷಧಿ ಮೂಲಕ ರಕ್ತದಲ್ಲಿ ಗ್ಲುಕೋಸ್ ಅಂಶವನ್ನು ಅವರು ನಿಯಂತ್ರಿಸಬಹುದು.
ಮಧುಮೇಹವು ಸಾವಿಗೆ ನಾಲ್ಕನೇ ಪ್ರಮುಖ ಕಾರಣಗಳಲ್ಲಿ ಒಂದಾಗಿದ್ದು, ಮಧುಮೇಹ ಸಂಬಂಧಿತ ಕಾರಣಗಳಿಂದ ಪ್ರತಿ 10 ಸೆಕೆಂಡಿಗೆ ಒಬ್ಬ ವ್ಯಕ್ತಿ ಸಾವನ್ನಪ್ಪುತ್ತಿರುವುದು ಮಧುಮೇಹದ ಭೀಕರತೆಗೆ ಸಾಕ್ಷಿಯಾಗಿದೆ.