ಹದಿವಯಸ್ಕರ ಆರೋಗ್ಯ ಕುಸಿತ

ಗುರುವಾರ, 11 ಅಕ್ಟೋಬರ್ 2007 (20:30 IST)
ಸ್ಥೂಲಕಾಯ, ಖಿನ್ನತೆ ಮತ್ತು ಮಧುಮೇಹದ ಪ್ರಮಾಣ ಹೆಚ್ಚುತ್ತಿದ್ದಂತೆ ಹದಿವಯಸ್ಸಿನ ಯುವಜನರ ಆರೋಗ್ಯ ಕ್ಷೀಣಿಸುತ್ತಿದೆಯೆಂದು ಆಸ್ಟ್ರೇಲಿಯದ ಸಂಶೋಧಕರು ಪತ್ತೆಹಚ್ಚಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಂಕಿಅಂಶಗಳು ಸಾವಿನ ಪ್ರಮಾಣ ಕುಸಿದಿದೆ ಮತ್ತು ಶೇ.90ರಷ್ಟು ಯುವಜನರು ತಮ್ಮ ಆರೋಗ್ಯ ಉತ್ತಮವಾಗಿದೆಯೆಂದು ಹೇಳಬಹುದು.

ಆದರೆ ಆಸ್ಟ್ರೇಲಿಯ ರಾಷ್ಟ್ರೀಯ ವಿ.ವಿ.ಯ ಆರೋಗ್ಯ ತಜ್ಞ ರಿಚರ್ಡ್ ಎಕರ್‌ಸ್ಲೆ ಇಂತಹ ಅಂಕಿಅಂಶಗಳು ತೀವ್ರ ಆರೋಗ್ಯ ಸಮಸ್ಯೆಗಳನ್ನು ಪೂರ್ಣರೂಪದಲ್ಲಿ ಪ್ರತಿನಿಧಿಸುವುದಿಲ್ಲ ಮತ್ತು ಆರೋಗ್ಯದ ಮೇಲೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರ ಬದಲಾವಣೆಯನ್ನು ಬಿಂಬಿಸುವುದಿಲ್ಲ ಎಂದು ಹೇಳಿದ್ದಾರೆ.

ಇನ್ನಿತರ ಅಂಕಿಅಂಶಗಳು ಹದಿವಯಸ್ಸಿನವರ ಮಾನಸಿಕ ಮತ್ತು ದೈಹಿಕ ಆರೋಗ್ಯ ಕ್ಷೀಣಿಸುತ್ತಿರುವ ಅಂಶಗಳನ್ನು ತೋರಿಸಿದೆ. ಆಸ್ಟ್ರೇಲಿಯದ ಆರೋಗ್ಯ ಸಂಸ್ಥೆಯೊಂದು ಕೂಡ ಹದಿಹರೆಯದ ವಯಸ್ಸಿನವರಲ್ಲಿ ಮಾನಸಿಕ ವ್ಯಾಧಿ ಅತೀ ಕಳವಳಕಾರಿ ವಿಷಯ ಎಂದು ವರದಿ ಮಾಡಿದೆ.

ಸಂಶೋಧನೆಯ ಸಂದರ್ಭದಲ್ಲಿ 2004-05ರಲ್ಲಿ 47,000ಕ್ಕೂ ಹೆಚ್ಚು ಹದಿವಯಸ್ಕರು ಖಿನ್ನತೆ, ಉನ್ಮಾದತೆ ಮುಂತಾದ ಮಾನಸಿಕ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿರುವುದು ಪತ್ತೆಯಾಯಿತು.

ಜತೆಗೆ ಸ್ಥೂಲಕಾಯ ಕೂಡ ವೇಗವಾಗಿ ಬೆಳೆಯುತ್ತಿರುವ ಸಮಸ್ಯೆಯಾಗಿದೆ. 2004-05ರಲ್ಲಿ ಶೇ.25ರಷ್ಟು ಯುವಜನರು ಸ್ಥೂಲಕಾಯ ಅಥವಾ ಸಹಜ ತೂಕಕ್ಕಿಂತ ಹೆಚ್ಚು ತೂಕವುಳ್ಳವರೆಂದು ತಿಳಿದುಬಂದಿತು.

ಹದಿಹರೆಯದವರ ಆರೋಗ್ಯ ನಮ್ಮ ಮುಂದಿನ ಪೀಳಿಗೆಯ ಆರೋಗ್ಯ ಶೈಲಿಯ ಸೂಚಕವಾಗಿದೆ. ವಯಸ್ಕ ಆರೋಗ್ಯವನ್ನು ನಿರ್ಧರಿಸುವ ಅನೇಕ ನಡವಳಿಕೆಗಳು, ವರ್ತನೆಗಳು ಮತ್ತು ಅಪಾಯದ ಅಂಶಗಳು ಬಾಲ್ಯದಲ್ಲಿ,ಹದಿವಯಸ್ಸಿನಲ್ಲಿ ಸ್ಥಿರಪಟ್ಟಿರುತ್ತದೆ ಎಂದು ಅವರು ಹೇಳುತ್ತಾರೆ.

ಈ ಪ್ರವೃತ್ತಿಯನ್ನು ತಡೆಯಲು ಆಸ್ಟ್ರೇಲಿಯದ ಅಧಿಕಾರಿಗಳು ಪ್ರತಿಬಂಧಕ ಆರೋಗ್ಯ ನಿಲುವಿನ ಕಡೆ ಗಮನಹರಿಸಬೇಕೆಂದು ಅವರು ಹೇಳಿದ್ದಾರೆ. ವ್ಯಕ್ತಿಯ ಕಾಯಿಲೆಗಳ ಬಗ್ಗೆ ಮಾತ್ರ ಗಮನನೀಡುವುದಲ್ಲದೇ ಯುವಜನರ ಅನಾರೋಗ್ಯದ ಫಲಶ್ರುತಿಗೆ ಕೊಡುಗೆ ನೀಡುವ ಪ್ರತಿಕೂಲ ಸಾಮಾಜಿಕ ಪ್ರವೃತ್ತಿಗಳನ್ನು ಪರಿಗಣಿಸಬೇಕೆಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ