ಯಾವುದೇ ತಿನಿಸಿನಲ್ಲಿ ಉಪ್ಪು ಇಲ್ಲದೇ ಇದ್ದರೆ, ಒಂದು ತುತ್ತನ್ನು ಒಂದೆರಡು ಬಾರಿ ಅಗಿಯುತ್ತಲೇ ತಿಳಿಯುತ್ತದೆ. ಊಟದ ರುಚಿಯಲ್ಲಿ ಉಪ್ಪಿನ ಮಹತ್ವ ಮತ್ತು ಅಗತ್ಯ ಅಂತದ್ದು. ಹಾಗೆಯೇ ಇನ್ನೊಂದು ರೀತಿಯ ಪದಾರ್ಥವು ಕೂಡ ಆಹಾರದಲ್ಲಿ ಇಲ್ಲದೆ ಇದ್ದಾಗ ಏನೋ ಕೊರತೆಯಾದಂತೆ ಅನಿಸುವುದುಂಟು.
ಅದುವೇ ಆಮ್ಲ. ಭಾರತೀಯ ಅಡುಗೆಯಲ್ಲಿ ಆಮ್ಲ ವಿವಿಧ ರೂಪಗಳಲ್ಲಿ ಕಾಣಸಿಗುತ್ತದೆ, ಕೆಲವೊಂದು ತಿನಿಸುಗಳಲ್ಲಿ ಅದೇ ಪ್ರಮುಖವಾಗಿದ್ದರೆ, ಇನ್ನು ಕೆಲವು ತಿನಿಸುಗಳಲ್ಲಿ ಅದು ಸಣ್ಣ ಪ್ರಮಾಣದಲ್ಲಿರುತ್ತದೆ. ಸಾಲ್ಟ್, ಫ್ಯಾಟ್ , ಆ್ಯಸಿಡ್ ಹೀಟ್ ಪುಸ್ತಕದಲ್ಲಿ ಲೇಖಕಿ ಸ್ಯಾಮಿನ್ ಸುಸ್ರತ್ , “ಆಮ್ಲದ ನಿಜವಾದ ಮೌಲ್ಯವು ಅದರ ಸುಕ್ಕಲ್ಲ, ಬದಲಿಗೆ ಸಮತೋಲನ” ಎಂದು ಬರೆದಿದ್ದಾರೆ. ಸಿಟ್ರಸ್ ಹಣ್ಣುಗಳು, ವಿನೆಗರ್ ಮತ್ತು ಹುಣಸೆ ಹಣ್ಣಿನಿಂದ ಹಿಡಿದು, ಹುಳಿ ಕ್ರೀಂ, ಚೀಸ್ ಹಾಗೂ ವೈನ್ವರೆಗೆ, ಜಗತ್ತಿನಲ್ಲಿ ಬಹಳಷ್ಟು ಬಗೆಯ ಆಮ್ಲದ ಮೂಲಗಳಿವೆ. ಕರ್ನಾಟಕದಲ್ಲಿ ಬೆಳೆಯುವ ಅಮಟೆಕಾಯಿ ಅವುಗಳಲ್ಲಿ ಒಂದು.
ಅಮಟೆಕಾಯಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ದೇಶದ ಇತರ ಭಾಗಗಳಲ್ಲಿಯೂ ಅದನ್ನು ಬೆಳೆಯುತ್ತಾರೆ, ಬಳಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಅಮರಾ, ಕೇರಳದಲ್ಲಿ ಅಂಬಳೆಂಗ, ತುಳುವಿನಲ್ಲಿ ಅಂಬಡೆ ಮತ್ತು ಆಂಗ್ಲ ಭಾಷೆಯಲ್ಲಿ ಹೋಗ್ ಪ್ಲಮ್ ಎಂದು ಕರೆಯಲ್ಪಡುವ ಅಮಟೆಕಾಯಿ - ಪಚ್ಚೆ ಹಸಿರು ಬಣ್ಣದ, ಗಾಢ ಪರಿಮಳ ಉಳ್ಳ ಹುಳಿಯಾದ ಪುಟ್ಟ ಹಣ್ಣು. ಈ ಹಣ್ಣಿನ ಮಧ್ಯಭಾಗದಲ್ಲಿ ದೊಡ್ಡ ಬೀಜವಿದ್ದು, ತೆಳುವಾದ ತಿರುಳಿನ ಪದರ ಆವರಿಸಿಕೊಂಡಿರುತ್ತದೆ. ಅಡುಗೆಗೆ ಹುಳಿ ಹಣ್ಣಿನ ರುಚಿ ನೀಡುವ ಅಮಟೆಕಾಯಿಯನ್ನು ಗೊಜ್ಜು, ಉಪ್ಪಿನಕಾಯಿಗೆ ಮತ್ತು ಮಂಗಳೂರು ಭಾಗಗಳಲ್ಲಿ ಸಮುದ್ರ ಜೀವಿಗಳ ಸಾಂಬಾರುಗಳಲ್ಲಿ, ಗೋವಾದ ಸಾಸವಾಗಳಲ್ಲಿ ಮತ್ತು ಗೌಡ ಸಾರಸ್ವತ ಬ್ರಾಹ್ಮಣರ ಸಸ್ಯಹಾರಿ ಖಾದ್ಯಗಳಲ್ಲಿ ಬಳಸುತ್ತಾರೆ.
ಕೋಕನಟ್ ಗ್ರೋವ್ ಅಡುಗೆ ಪುಸ್ತಕದ ಲೇಖಕಿ ದೀಪಿಕಾ ಶೆಟ್ಟಿ, ತಮ್ಮ ಪುಸ್ತಕದಲ್ಲಿ “ ನನ್ನ ಅಮ್ಮ ಅಮಟೆಕಾಯಿಯ ಹೆಸರು ತೆಗೆಯುತ್ತಲೇ, ಆಕೆಯ ಬಾಯಲ್ಲಿ ನೀರೂರುತ್ತದೆ ಮತ್ತು ಆಕೆ ತನ್ನ ಮನೆಯಲ್ಲಿದ್ದಾಗ ಸವಿದ ಆ ಎಲ್ಲಾ ಹುಳಿ ಹಣ್ಣುಗಳನ್ನು ನೆನೆಸಿಕೊಳ್ಳುವಾಗ ಆಕೆಯ ಕಣ್ಣುಗಳು ಸಂತೋಷದಿಂದ ಹೊಳೆಯುವುದನ್ನು ನಾನು ನೋಡಬಲ್ಲೆ” ಎಂದು ಬರೆದಿದ್ದಾರೆ. ಆ ಪುಸ್ತಕದಲ್ಲಿ ಅಮಟೆಕಾಯಿ, ಹೀರೆಕಾಯಿ ಚಟ್ನಿ ಮಾಡುವ ವಿಧಾನವನ್ನು ಕೂಡ ತಿಳಿಸಲಾಗಿದೆ. “ನೀವದನ್ನು ಹಸಿಯಾಗಿ ತಿನ್ನಲು ಪ್ರಯತ್ನಿಸಿದರೆ ಅದು ನಿಮ್ಮ ಪ್ಯಾಲೆಟ್ ಮೇಲೆ ಅಂಟಿಕೊಳ್ಳುತ್ತದೆ, ಅದನ್ನು ಬೇಯಿಸಿದಾಗ ಮಾವಿನ ಕಾಯಿಯಂತೆ ಇರುತ್ತದೆ” ಎನ್ನುತ್ತಾರೆ ದೀಪಿಕಾ.
ಈ ಹಣ್ಣು ಎಲ್ಲಾ ಅಂಗಡಿಗಳಲ್ಲಿ ಸುಲಭವಾಗಿ ಸಿಗುವುದಿಲ್ಲ. ಬೆಂಗಳೂರಿನ ನಾಟ್ ಜಸ್ಟ್ ಹಾಟ್ ಆಹಾರ ಉದ್ಯಮದ ಮಾಲಕಿ ಸರಿತಾ ಹೆಗ್ಡೆ, ಇವುಗಳನ್ನು ನಗರದ ಮಂಗಳೂರು ಸ್ಟೋರ್ಗಳಲ್ಲಿ ಖರೀದಿಸುತ್ತಾರೆ. ಅವರು ಕರಾವಳಿಯ ತಮ್ಮ ಪೂರ್ವಜರ ಮನೆಗಳ ಹೊಗಿರುವ ಅಮಟೆಕಾಯಿ ಮರಗಳು, ಅಮ್ಮ ಮರದ ಕೆಳಗೆ ಬಿದ್ದಿರುತ್ತಿದ್ದ ಅಮಟೆಕಾಯಿಗಳನ್ನು ಎತ್ತಿಕೊಂಡು ಬರಲು ತನಗೆ ಹೇಳುತ್ತಿದ್ದ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. “ ಅದು ಹಣ್ಣಾಗಿದ್ದರೆ ನೀವು ಅದೃಷ್ಟಶಾಲಿ, ಅದು ಸ್ವಲ್ಪ ಸಿಹಿಯಾಗಿರುತ್ತದೆ ಕೂಡ, ಕೆಲವೊಮ್ಮೆ ನೀವದನ್ನು ತಿನ್ನುತ್ತಾ ಖುಷಿ ಪಡಬಹುದು” ಎನ್ನುತ್ತಾರೆ ಅವರು.