ಬಾಯಿ ವಾಸನೆ ಬರುತ್ತಿದೆಯೇ? ಹೀಗೆ ಮಾಡಿ

ಶನಿವಾರ, 7 ಜನವರಿ 2017 (08:56 IST)
ಬೆಂಗಳೂರು: ಕೆಲವರಿಗೆ ಇದೊಂದು ಸಮಸ್ಯೆ. ಹತ್ತಿರ ನಿಂತು ಮಾತನಾಡಲೂ ಆಗದ ಕಿರಿ ಕಿರಿ. ಬಾಯಿ ತೆರೆದರೆ ಉಳಿದವರು ಮೂಗು ಮುಚ್ಚಿ ಕೂರುವ ಪರಿಸ್ಥಿತಿ. ಅದುವೇ ಬಾಯಿಯ ದುರ್ಗಂಧದ ಸಮಸ್ಯೆ. ಇದಕ್ಕೆ ಮನೆಯಲ್ಲಿ ನಾವೇನು ಮಾಡಬಹುದು ಎಂಬುದಕ್ಕೆ ಕೆಲವು ಪರಿಹಾರ ಹುಡುಕೋಣ.


ಬಾಯಿ ದುರ್ಗಂಧಕ್ಕೆ ಮೊದಲ ಕಾರಣ ನಾಲಿಗೆಯಲ್ಲಿರುವ ಅಗ್ರ. ರಾತ್ರಿ ಮಲಗುವ ಮೊದಲು ಇದನ್ನು ಕ್ಲೀನ್ ಮಾಡಿಕೊಂಡರೆ, ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವುದನ್ನು ತಡೆಗಟ್ಟಬಹುದು. ಇದರಿಂದ ಬಾಯಿ ವಾಸನೆಯೂ ಅರ್ಧಕ್ಕರ್ಧ ಕಡಿಮೆಯಾಗಬಹುದು.

ಏನಾದರೂ ತಿಂದ ಕೂಡಲೇ ಬಾಯಿ ಮುಕ್ಕಳಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಆಹಾರ ನಮ್ಮ ಬಾಯಲ್ಲಿದ್ದಷ್ಟು ಹೊತ್ತು ಬ್ಯಾಕ್ಟೀರಿಯಾ ಹುಟ್ಟುವಿಕೆಗೆ ಕಾರಣವಾಗುತ್ತದೆ. ಇದು ಬಾಯಿಯ ದುರ್ಗಂಧವನ್ನು ಹೆಚ್ಚಿಸುತ್ತದೆ. ರಾತ್ರಿ ಮಲಗುವ ಮೊದಲು ಮತ್ತು ಬೆಳಿಗ್ಗೆ ಎದ್ದ ತಕ್ಷಣ ಚೆನ್ನಾಗಿ ಬ್ರಷ್ ಮಾಡಿ.

ಚೆನ್ನಾಗಿ ಬಾಯಿ ತೊಳೆದುಕೊಂಡ ಮೇಲೆ ತಂಪು ನೀರನ್ನು ಸ್ವಲ್ಪ ಹೊತ್ತು ಬಾಯಲ್ಲಿಟ್ಟುಕೊಂಡು ಮುಕ್ಕಳಿಸುವುದು ಒಳ್ಳೆಯದು. ಏಲಕ್ಕಿ ಅಥವಾ ಲವಂಗ ಬಾಯಲ್ಲಿ ಹಾಕಿಕೊಂಡು ಜಗಿದರೆ ಬಾಯಿ ದುರ್ಗಂಧ ಹೋಗಿ ಒಳ್ಳೆಯ ಸುವಾಸನೆ ಕೊಡುತ್ತದೆ.

ಸರಿಯಾದ ಬ್ರಷ್ ಬಳಕೆ ಮಾಡಿ ಮತ್ತು ಪ್ರತಿ ಎರಡು ತಿಂಗಳಿಗೊಮ್ಮೆಯಾದರೂ ಅದನ್ನು ಬದಲಾಯಿಸುತ್ತಿರಿ. ಸಾಕಷ್ಟು ನೀರು ಕುಡಿಯುವುದು ಎಲ್ಲದಕ್ಕೂ ಒಳ್ಳೆಯ ಪರಿಹಾರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ