ಅತಿಯಾಗಿ ಪ್ಯಾರಾಸಿಟಮಲ್ ಮಾತ್ರೆ ಸೇವಿಸಿದರೆ ಅಡ್ಡಪರಿಣಾಮವೇನು ಗೊತ್ತಾ?!
ಗುರುವಾರ, 6 ಅಕ್ಟೋಬರ್ 2022 (11:01 IST)
ಬೆಂಗಳೂರು: ಸಾಮಾನ್ಯವಾಗಿ ಜ್ವರ, ತಲೆನೋವು, ಮೈಕೈ ನೋವಿನಂತಹ ಸಾಮಾನ್ಯ ಸಮಸ್ಯೆಗಳಿಗೆ ನಾವು ಹಿಂದೆ ಮುಂದೆ ನೋಡದೇ ಪ್ಯಾರಾಸಿಟಮಲ್ ಮಾತ್ರೆ ಸೇವಿಸುತ್ತೇವೆ. ಇದೊಂದು ಕಾಮನ್ ಗುಳಿಗೆಯಾಗಿಬಿಟ್ಟಿದೆ. ಆದರೆ ಅತಿಯಾದರೆ ಅಮೃತವೂ ವಿಷ ಅಂತಾರಲ್ಲ? ಅದು ಈ ಮಾತ್ರೆ ವಿಚಾರದಲ್ಲೂ ಸತ್ಯ.
ಪ್ಯಾರಾಸಿಟಮಲ್ ಮಾತ್ರೆಯನ್ನು ಅತಿಯಾಗಿ ಸೇವನೆ ಮಾಡಿದರೆ ಕೆಲವು ಅಡ್ಡಪರಿಣಾಮಗಳಾಗುತ್ತವೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಎಡಿನ್ ಬರ್ಗ್ ನ ವಿವಿಯೊಂದು ನಡೆಸಿದ ಸಂಶೋಧನೆಯಲ್ಲಿ ಪ್ಯಾರಾಸಿಟಮಲ್ ಮಾತ್ರೆಯನ್ನು ನಿಯಮಿತವಾಗಿ ಬಳಸಿದರೆ ಹೃದಯಾಘಾತ, ರಕ್ತದೊತ್ತಡ ಹೆಚ್ಚಾಗುವುದು, ಪಕ್ಷಪಾತ ಇತ್ಯಾದಿ ಸಮಸ್ಯೆಗಳ ಅಪಾಯವಿದೆ ಎಂದು ತಿಳಿದುಬಂದಿದೆ. ರಕ್ತದೊತ್ತಡ ಖಾಯಿಲೆಯಿರುವ ಸುಮಾರು 100 ಕ್ಕೂ ಹೆಚ್ಚು ರೋಗಿಗಳ ಮೇಲೆ ಸಂಶೋಧನೆ ನಡೆಸಿ ಸಂಶೋಧಕರು ಈ ಅಭಿಪ್ರಾಯಕ್ಕೆ ಬಂದಿದ್ದಾರಂತೆ. ಈ ಮಾತ್ರೆ ತೆಗೆದುಕೊಳ್ಳುವವರಲ್ಲಿ ಹೃದಯಾಘಾತದ ಅಪಾಯ ಶೇ.20 ರಷ್ಟು ಹೆಚ್ಚು ಎನ್ನುವುದು ಅವರ ಅಭಿಪ್ರಾಯ. ಹೀಗಾಗಿ ಎಚ್ಚರಿಕೆಯಿಂದಿರಿ.