ಜೇನು ನಮ್ಮ ಆರೋಗ್ಯಕ್ಕೆ ಅಮೃತ...

ನಾಗಶ್ರೀ ಭಟ್

ಗುರುವಾರ, 14 ಡಿಸೆಂಬರ್ 2017 (19:32 IST)
ಜೇನಿಗೆ ಸಂಸ್ಕ್ರತದಲ್ಲಿ ಮಧು ಎಂದು ಕರೆಯುತ್ತಾರೆ. ಪ್ರಕೃತಿಯ ಕೊಡುಗೆಯಾಗಿರುವ ಇದು ಹಲವಾರು ರೋಗಗಳಿಗೆ ಒಳ್ಳೆಯ ಔಷಧಿಯಾಗಿದೆ. ಆಯುರ್ವೇದದ ಔಷಧಗಳಲ್ಲಿ ಜೇನನ್ನು ಹೆಚ್ಚಾಗಿ ಬಳಸುತ್ತಾರೆ. 

ಅಧಿಕ ಪೌಷ್ಠಿಕಾಂಶಗಳನ್ನು ಹಾಗೂ ಅಧಿಕ ಔಷಧೀಯ ಗುಣವನ್ನು ಹೊಂದಿರುವ ಜೇನನ್ನು ನೀವು ಇದುವರೆಗೆ ಬಳಸುತ್ತಿಲ್ಲವಾದಲ್ಲಿ ಇನ್ನಾದರೂ ಬಳಸಿ. ಅಧಿಕ ಸಿಹಿಯಾಗಿರುವ ಇದನ್ನು ದೈನಂದಿನ ಆಹಾರ ಕ್ರಮದಲ್ಲಿ ಬಳಸುವುದು ಬಹಳ ಸುಲಭವಾಗಿದೆ.
 
ಹೆಜ್ಜೇನು, ಕೋಲು ಜೇನು, ತುಡುವೆ ಜೇನು ಎಂದು ಜೇನಿನಲ್ಲಿ ಹಲವಾರು ವಿಧಗಳಿವೆ. ಜೇನು ನೊಣಗಳು ವಿವಿಧ ಜಾತಿಯ ಹೂವುಗಳ ಮಕರಂದವನ್ನು ಹೀರಿ ತಮ್ಮ ಗೂಡಿನಲ್ಲಿ ಜೇನನ್ನು ಸಂಗ್ರಹಿಸಿಡುತ್ತವೆ. ಹೀಗೆ ಹಲವಾರು ಹೂವುಗಳಿಂದ ಮಕರಂದವನ್ನು ಸಂಗ್ರಹಿಸುವುದರಿಂದ ಜೇನಿನಲ್ಲಿ ಅಧಿಕ ಔಷಧೀಯ ಗುಣಗಳಿರುತ್ತದೆ. ಜೇನುತುಪ್ಪದ ಕೆಲವೊಂದು ಪ್ರಮುಖ ಉಪಯೋಗಗಳಿಗಾಗಿ ಇಲ್ಲಿ ನೋಡಿ,
 
* ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ 1 ಚಮಚ ಜೇನು ಮತ್ತು 5-6 ಹನಿ ನಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ, ಚರ್ಮದ ಬಣ್ಣ ತಿಳಿಯಾಗುತ್ತದೆ ಮತ್ತು ದೇಹದಲ್ಲಿರುವ ಕೊಲೆಸ್ಟ್ರಾಲ್ ಕರಗುತ್ತದೆ.
 
* ಇದು ಚರ್ಮದ ಸುಕ್ಕುಗಟ್ಟುವಿಕೆಯನ್ನು ನಿಯಂತ್ರಿಸುತ್ತದೆ ಮತ್ತು ತ್ವಚೆಯನ್ನು ಮೃದುವಾಗಿಸುತ್ತದೆ.
 
* ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಮೈಕ್ರೋಬಿಯಲ್ ಗುಣವನ್ನು ಹೊಂದಿರುವ ಇದು ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ.
 
* ಸೂರ್ಯನ ಕಿರಣಗಳಿಂದ ಚರ್ಮ ಟ್ಯಾನ್ ಆಗುವುದನ್ನು ತಡೆಯಲು ಇದನ್ನು ತ್ವಚೆಗೆ ಹಚ್ಚಿ 20-30 ನಿಮಿಷಗಳ ನಂತರ ತೊಳೆಯಬೇಕು.
 
* ಚಿಕ್ಕ ಚಿಕ್ಕ ಗಾಯಗಳಿಗೆ, ಸುಟ್ಟ ಗಾಯಗಳಿಗೆ ಮತ್ತು ತುರಿಕೆಗೆ ಇದು ಉತ್ತಮ ಔಷಧ.
 
* ದಿನವೂ ಜೇನನ್ನು ಸೇವಿಸಿದರೆ ಅದು ರಕ್ತದಲ್ಲಿನ ಹಿಮೊಗ್ಲೋಬಿನ್‌ ಮತ್ತು ಕ್ಯಾಲ್ಶಿಯಂನ ಪ್ರಮಾಣವನ್ನು ಹೆಚ್ಚಿಸಿ ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
 
* ದಿನವೂ ಜೇನನ್ನು ಸೇವಿಸುತ್ತಾ ಬಂದರೆ ಅದು ಜೀರ್ಣಶಕ್ತಿಯನ್ನು ವೃದ್ಧಿಸಿ ದೇಹದ ತೂಕವನ್ನು ಸಮತೋಲನದಲ್ಲಿರಿಸಿಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ಮಲಬದ್ಧತೆಯನ್ನೂ ಹೋಗಲಾಡಿಸುತ್ತದೆ.
 
* ಜೇನು ಚರ್ಮದ ಆಳಕ್ಕೆ ಹೋಗಿ ತ್ವಚೆಯನ್ನು ಸ್ವಚ್ಛಪಡಿಸುವುದರ ಮೂಲಕ ಮೊಡವೆಯ ಸಮಸ್ಯೆಯನ್ನು ಬಹುತೇಕ ಹೋಗಲಾಡಿಸುತ್ತದೆ.
 
* ಹಲವಾರು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಜೇನನ್ನು ಬಳಸುತ್ತಾರೆ.
 
* ಜೇನು ಜೀವಸತ್ವಗಳು, ಅಮೈನೊ ಆಮ್ಲಗಳು, ಕ್ಯಾಲ್ಶಿಯಂ, ಕಬ್ಬಿಣ, ಸೋಡಿಯಂ ಕ್ಲೋರಿನ್, ಮೆಗ್ನೀಶಿಯಮ್, ಫಾಸ್ಫೇಟ್ ಮತ್ತು ಪೊಟ್ಯಾಸಿಯಮ್‌ಗಳಂತಹ ಖನಿಜಗಳನ್ನು ಒಳಗೊಂಡಿದೆ. ಹಾಗಾಗಿ ಜೇನಿನ ಸೇವನೆಯು ದೇಹದಲ್ಲಿನ ಈ ಎಲ್ಲಾ ಕೊರತೆಗಳನ್ನು ನೀಗಿಸುತ್ತದೆ.
 
* ದಿನವೂ ಸ್ವಲ್ಪ ಪ್ರಮಾಣದ(1 ಚಮಚ) ಜೇನುತುಪ್ಪವನ್ನು ತೆಗೆದುಕೊಂಡರೆ ನಿಮ್ಮ ದೇಹದ ಅಲರ್ಜಿಗಳಿಗೆ ನೈಸರ್ಗಿಕವಾದ ಪ್ರತಿರಕ್ಷೆಯನ್ನು ನಿರ್ಮಿಸುತ್ತದೆ.
 
* ಜೇನಿನ ನಿಯಮಿತ ಸೇವನೆಯು ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಫಾ ಹಾಗೂ ನಿದ್ರೆಯ ತೊಂದರೆಗಳನ್ನು ಹೋಗಲಾಡಿಸುತ್ತದೆ.
 
* ಜೇನು ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ಸೈನಸ್ ತೊಂದರೆಗಳನ್ನು ನಿವಾರಿಸುತ್ತದೆ.
 
ಹೀಗೆ ಹಲವಾರು ಕಾರಣಗಳಿಂದ ಬಹುಪಯೋಗಿಯಾಗಿರುವ ಜೇನನ್ನು ಇದುವರೆಗೆ ಬಳಸುತ್ತಿಲ್ಲವಾದಲ್ಲಿ ಇನ್ನಾದರೂ ಬಳಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ