ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳ ಜ್ಯೂಸ್‌ಗಳು...

ನಾಗಶ್ರೀ ಭಟ್

ಗುರುವಾರ, 21 ಡಿಸೆಂಬರ್ 2017 (17:46 IST)
ಸೇಬು, ಕಿತ್ತಳೆ, ಪಪ್ಪಾಯ, ದಾಳಿಂಬೆ, ದ್ರಾಕ್ಷಿ, ಚೆರ್ರಿ ಹೀಗೆ ಹಣ್ಣುಗಳ ಪಟ್ಟಿ ತುಂಬಾ ದೊಡ್ಡದಿದೆ. ಇವುಗಳಲ್ಲಿ ಯಾವೆಲ್ಲಾ ಹಣ್ಣುಗಳು ನಿಮ್ಮ ಆರೋಗ್ಯವನ್ನು ಉತ್ತಮಪಡಿಸುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಪ್ರತಿದಿನ ಅಂಗಡಿಯಿಂದ ತಂದಿರುವ ಪ್ಯಾಕೆಟ್ ಜ್ಯೂಸ್ ಅನ್ನು ಕುಡಿಯುವ ಬದಲು ನೀವು ಮನೆಯಲ್ಲಿಯೇ ಫ್ರೆಶ್ ಜ್ಯೂಸ್ ಮಾಡಿ ಕುಡಿಯಬಹುದು.

ಯಾವ ಹಣ್ಣಿನ ಜ್ಯೂಸ್‌ಗಳು ಯಾವ ಯಾವ ರೋಗಗಳನ್ನು ತಡೆಗಟ್ಟುತ್ತವೆ, ಯಾವ ರೀತಿಯಲ್ಲಿ ನಿಮ್ಮ ಆರೋಗ್ಯವನ್ನು ಉತ್ತಮವಾಗಿಸುತ್ತದೆ ಎಂಬುದನ್ನು ತಿಳಿಯಲು ಇಲ್ಲಿ ನೋಡಿ,
 
1. ಕಿತ್ತಳೆ ಹಣ್ಣು:
ಪ್ರತಿದಿನ 1 ಕಿತ್ತಳೆ ಹಣ್ಣಿನ ತೊಳೆಗಳನ್ನು ಬಿಡಿಸಿ ಅದಕ್ಕೆ ರುಚಿಗೆ ಸಕ್ಕರೆ ಮತ್ತು 1 ಲೋಟ ನೀರನ್ನು ಸೇರಿಸಿಕೊಂಡು ಜ್ಯೂಸ್ ಮಾಡಿ ಕುಡಿಯುತ್ತಾ ಬನ್ನಿ. ಇದು ದೇಹಕ್ಕೆ ಅಗತ್ಯವಿರುವ ವಿಟಮಿನ್ ಸಿ ಅನ್ನು ಅಧಿಕ ಪ್ರಮಾಣದಲ್ಲಿ ಒದಗಿಸುತ್ತದೆ. ಫಾಸ್ಟ್ ಫುಡ್‌ನಿಂದ ನಿಮ್ಮ ದೇಹಕ್ಕಾಗುವ ಹಾನಿಯನ್ನು ಇದು ತಡೆಯುತ್ತದೆ. ಇದು ನಿಮ್ಮ ತ್ವಚೆಯನ್ನು ಕಾಂತಿಯುತವಾಗಿಸುತ್ತದೆ ಮತ್ತು ಫ್ರೆಶ್ ಆಗಿ ಕಾಣುವಂತೆ ಮಾಡುತ್ತದೆ ಮತ್ತು ಇತರ ಚರ್ಮವ್ಯಾಧಿಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
 
2. ದಾಳಿಂಬೆ ಹಣ್ಣು:
ಪ್ರತಿದಿನ ಕೇವಲ ದಾಳಿಂಬೆಯೊಂದನ್ನೇ ಹಾಕಿ ಫ್ರೆಶ್ ಜ್ಯೂಸ್ ಮಾಡಿ ಕುಡಿಯಿರಿ. ಇದು ನಿಮ್ಮ ಹೃದಯದ ಆರೋಗ್ಯವನ್ನು, ಬ್ಲಡ್ ಶುಗರ್ ಲೆವೆಲ್ ಮತ್ತು ಬ್ಲಡ್ ಪ್ರೆಶರ್‌ನ ಲೆವೆಲ್ ಅನ್ನು ಕಾಪಾಡುತ್ತದೆ. ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಮೃದುವಾಗಿಸಿ ತ್ವಚೆಯನ್ನು ಕಾಂತಿಯುತವನ್ನಾಗಿಸುತ್ತದೆ.
 
3. ಪಪ್ಪಾಯ:
ವಾರಕ್ಕೆ 3-4 ಬಾರಿ ಪಪ್ಪಾಯ, 2 ಚಮಚ ಜೇನು, ರುಚಿಗೆ ಸಕ್ಕರೆಯನ್ನು ಹಾಕಿ ಒಂದು ಲೋಟ ಜ್ಯೂಸ್ ಮಾಡಿ ಕುಡಿಯಿರಿ. ಪಪ್ಪಾಯದಲ್ಲಿರುವ ಪಾಪೈನ್‌ನ ಅಂಶವು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಇದು ಗಾಯಗಳನ್ನು ಹಾಗೂ ಅಲರ್ಜಿಗಳನ್ನು ಕಡಿಮೆ ಮಾಡುತ್ತದೆ. ಪಪ್ಪಾಯ ಕ್ಯಾನ್ಸರ್ ನಿರೋಧಿಯಾಗಿದ್ದು ಇದು ಕರುಳಿನ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ. ಜೀರ್ಣಕ್ರಿಯೆಯ ತೊಂದರೆ ಮತ್ತು ಗ್ಯಾಸ್ಟ್ರಿಕ್‌ನ ಸಮಸ್ಯೆಗೆ ಉತ್ತಮ ಔಷಧವಾಗಿದೆ. ದೇಹದ ಪ್ರತಿರಕ್ಷಣಾ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಟಾನ್ಸಿಲ್ ಅನ್ನು ತಡೆಗಟ್ಟುತ್ತದೆ.
 
4. ಸೇಬು ಹಣ್ಣು:
'ಒಂದು ಸೇಬು ವೈದ್ಯರನ್ನು ದೂರವಿರಿಸುತ್ತದೆ' ಎನ್ನುವ ಮಾತಿದೆ. ದಿನವೂ ಒಂದು ಲೋಟ ಫ್ರೆಶ್ ಸೇಬಿನ ಜ್ಯೂಸ್ ಮಾಡಿ ಕುಡಿಯಿರಿ. ಸೇಬು ತ್ವಚೆಯ ಕಾಂತಿಯನ್ನು ಹೆಚ್ಚಿಸುವುದರಲ್ಲಿ ಉತ್ತಮ ಪಾತ್ರವನ್ನು ನಿರ್ವಹಿಸುತ್ತದೆ. ಇದು ನಿಮ್ಮನ್ನು ರೋಗಗಳಿಂದ ದೂರವಿರಿಸುತ್ತದೆ. ಸೇಬು ತೂಕವನ್ನು ಇಳಿಸಲು ಮತ್ತು ಹೃದಯದ ಹಾಗೂ ಯಕೃತ್ತಿನ ಆರೋಗ್ಯಕ್ಕೆ ಉತ್ತಮವಾಗಿದೆ. ಇದು ಕ್ಯಾನ್ಸರ್, ಅಸ್ತಮಾ, ಸಕ್ಕರೆ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.
 
5. ನಿಂಬೆ ಹಣ್ಣು:
ಒಂದು ಲೋಟ ಬೆಚ್ಚಗಿನ ನೀರಿಗೆ 1/2 ನಿಂಬೆ ಹಣ್ಣಿನ ರಸ ಮತ್ತು 2 ಚಮಚ ಜೇನನ್ನು ಸೇರಿಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್‌ನ ಪ್ರಮಾಣವನ್ನು ತಗ್ಗಿಸಬಹುದು. ಇದು ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಲವಾರು ಸಂಶೋಧನೆಗಳ ಮೂಲಕ ನಿಂಬೆ ಹಣ್ಣು ಕಿಡ್ನಿ ಸ್ಟೋನ್ ಸಮಸ್ಯೆಗೆ ಉತ್ತಮ ಔಷಧ ಎಂಬುದು ಸಾಬೀತಾಗಿದೆ. ದಿನವೂ 2 ಲೀಟರ್ ನೀರಿಗೆ 2 ನಿಂಬೆ ಹಣ್ಣಿನ ರಸವನ್ನು ಸೇರಿಸಿಕೊಂಡು ಅಗತ್ಯವಿದ್ದಲ್ಲಿ ರುಚಿಗೆ ಸಕ್ಕರೆಯನ್ನು ಸೇರಿಸಿ ಕುಡಿಯುತ್ತಿದ್ದರೆ ಇದು ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
 
6. ಟೊಮ್ಯಾಟೋ:
ಟೊಮ್ಯಾಟೋ ಹಣ್ಣು, ರುಚಿಗೆ ಉಪ್ಪು, ಸಕ್ಕರೆ ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಜ್ಯೂಸ್ ಮಾಡಿ ವಾರಕ್ಕೆ 2-3 ಬಾರಿ ಕುಡಿಯಿರಿ. ಟೊಮ್ಯಾಟೋ ಲೈಕೊಪೀನ್‌ನ ಅಂಶವನ್ನು ಹೊಂದಿದ್ದು ಇದು ಪ್ರಾಸ್ಟೇಟ್ ಮತ್ತು ಇತರ ಕ್ಯಾನ್ಸರ್‌ಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದರಲ್ಲಿನ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಫೈಬರ್‌ನ ಅಂಶಗಳು ನಿಮ್ಮ ದೀರ್ಘಕಾಲದ ಆರೋಗ್ಯಕ್ಕೆ ಉತ್ತಮವಾಗಿದೆ. ಇದು ಉತ್ತಮ ರೋಗನಿರೋಧಕ ಅಂಶವನ್ನು ಹೊಂದಿದೆ.
 
7. ಚೆರ್ರಿ:
ದಿನವೂ ಒಂದು ಲೋಟ ಚೆರ್ರಿ ಜ್ಯೂಸ್ ಕುಡಿದರೆ ಅದು ಕ್ಯಾನ್ಸರ್‌ನ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ದೇಹದ ಪ್ರತಿರಕ್ಷಣಾ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಊತದ ನೋವನ್ನು ಕಡಿಮೆ ಮಾಡುತ್ತದೆ. ಚೆರ್ರಿ ಅಧಿಕ ಪೊಟ್ಯಾಸಿಯಂ ಅನ್ನು ಹೊಂದಿರುವುದರಿಂದ ಇದು ದೇಹದಾದ್ಯಂತ ವಿದ್ಯುತ್ ಪ್ರಚೋದನೆಗಳನ್ನು ನಡೆಸುವ ಮೂಲಕ ವ್ಯಾಯಾಮದ ನಂತರದ ಆಯಾಸವನ್ನು ಹೋಗಲಾಡಿಸುತ್ತದೆ.
 
8. ದ್ರಾಕ್ಷಿ ಹಣ್ಣು:
ಪ್ರತಿದಿನವೂ ಒಂದು ಲೋಟ ದ್ರಾಕ್ಷಿ ಹಣ್ಣಿನ ಜ್ಯೂಸ್ ಮಾಡಿ ಕುಡಿದರೆ ಅದು ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್‌ನ ಮಟ್ಟವನ್ನು ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇದು ಕರುಳಿನ ಸಮಸ್ಯೆ ಮತ್ತು ಜೀರ್ಣಕ್ರಿಯೆಯಲ್ಲಿನ ಸಮಸ್ಯೆಯನ್ನು ನಿವಾರಿಸುತ್ತದೆ. ದ್ರಾಕ್ಷಿಯ ಜ್ಯೂಸ್ ದೇಹಕ್ಕೆ ಚೇತನವನ್ನು ನೀಡುತ್ತದೆ ಮತ್ತು ಮೂಳೆಯ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಕ್ಯಾನ್ಸರ್ ಮತ್ತು ಮಹಿಳೆಯರ ಮುಟ್ಟಿನ ಸಮಸ್ಯೆಯನ್ನು ತಡೆಗಟ್ಟುತ್ತದೆ.
 
ಹಣ್ಣುಗಳ ಜ್ಯೂಸ್ ಮಾಡಿ ಕುಡಿಯುವುದರಿಂದ ನೀವು ಅನೇಕ ರೋಗಗಳನ್ನು ತಡೆಗಟ್ಟಿ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಲು ಸಾಧ್ಯವಾಗುವುದಾದರೆ ನೀವೂ ಒಮ್ಮೆ ಪ್ರಯತ್ನಿಸಬಹುದಲ್ಲವೇ...!?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ