ಇತ್ತೀಚಿನ ದಿನಗಳಲ್ಲಿ ಒತ್ತಡದ ಬದುಕು ಎಲ್ಲರಿಗೂ ಸಿಕ್ಕ ವರದಂತಾಗಿದೆ. ದಿನನಿತ್ಯದ ಕೆಲಸದ ಒತ್ತಡ, ಮಾನಸಿಕ ಒತ್ತಡ ಸೇರಿ ದಿನದ ಅಂತ್ಯಕ್ಕೆ ಬದುಕು ಹೈರಾಣಾಗುತ್ತದೆ.
ಇದಕ್ಕೆ ಪರಿಹಾರವಾಗಿ ಯೋಗ, ಪ್ರಾಣಾಯಾಮ ಮಾಡುವುದು ಎಲ್ಲರಿಗೂ ತಿಳಿದ ವಿಷಯ. ಒತ್ತಡದ ಬದುಕಿನಿಂದ ವಿಮುಖರಾಗಲು ಆಹಾರವೂ ಸಹಾಯ ಮಾಡುತ್ತದೆ. ಊಟದ ಹೊರತಾಗಿ ಕೆಲವು ಆಹಾರಗಳು ನಿಮ್ಮ ಒತ್ತಡವನ್ನು ನಿವಾರಿಸುತ್ತದೆ. ಕೆಲವು ಆಹಾರಗಳು ನಿಮ್ಮನ್ನು ಒತ್ತಡದಿಂದ ತಕ್ಷಣ ಹೊರತಂದು ರಿಲ್ಯಾಕ್ಸ್ ಮೂಡಿಗೆ ಕರೆದೊಯ್ಯುತ್ತದೆ.
ಒತ್ತಡ ನಿರ್ವಹಣೆಯ ಜತೆಗೆ ಬದುಕು ಸಾಗಿಸುವುದು ಅನಿವಾರ್ಯವಾದ ಕಾರಣ ಅದರಿಂದ ಹೊರಬರಲು ದಾರಿಗಳನ್ನು ಹುಡುಕಿಕೊಳ್ಳುವುದೂ ಕೂಡ ಅಷ್ಟೇ ಅನಿವಾರ್ಯ. ಆದ್ದರಿಂದ ಒತ್ತಡವನ್ನು ನಿಯಂತ್ರಿಸಿ ಮನಸ್ಥಿತಿಯನ್ನು ಸರಿಪಡಿಸಲು ಈ ಆಹಾರಗಳನ್ನು ಸೇವಿಸಿ.
ಡಾರ್ಕ್ ಚಾಕೋಲೆಟ್
ಡಾರ್ಕ್ ಚಾಕೋಲೆಟ್ ಒತ್ತಡ ನಿವಾರಣೆಗೆ ಉತ್ತಮ ಆಹಾರವಾಗಿದೆ. ಡಾರ್ಕ್ ಚಾಕಲೇಟ್ಗಳಲ್ಲಿರುವ ಪ್ಲೆವನಾಯ್ಡ್ಗಳು ಒತ್ತಡವನ್ನು ಕಡಿಮೆ ಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಡಾರ್ಕ್ ಚಾಕೋಲೇಟ್ ಒತ್ತಡ ಉಂಟುಮಾಡುವ ಕಾರ್ಟಿಸೋಲ್ ಹಾರ್ಮೋನ್ಗಳನ್ನು ನಿಯಂತ್ರಿಸುತ್ತದೆ. ಆದರೆ ನೆನಪಿಡಿ ನೀವು ಸೇವಿಸುವ ಡಾರ್ಕ್ ಚಾಕೋಲೆಟ್ನಲ್ಲಿ ಹೆಚ್ಚು ರಾಸಾಯನಿಕಗಳನ್ನು ಬಳಸಿರುವ ಸಾಧ್ಯತೆ ಇರುತ್ತದೆ.
ಡ್ರೈ ಪ್ರೂಟ್ಸ್
ಒಣ ಹಣ್ಣುಗಳು ನಿಮ್ಮ ಮೂಡನ್ನು ಉತ್ತಮಗೊಳಿಸುವಲ್ಲಿ ಸಹಾಯಕವಾಗಿದೆ. ಒಮೆಗಾ 3 ಮತ್ತು ಒಮೆಗಾ 6 ಅಂಶಗಳನ್ನು ಸಮೃದ್ಧವಾಗಿ ಹೊಂದಿರುವ ಡ್ರೈ ಪ್ರೂಟ್ಸ್ಗಳು ದೇಹದಲ್ಲಿ ಸಿರೋಟೆನಿನ್ ಉತ್ಪಾದನೆಯನ್ನು ಹೆಚ್ಚಿಸಿ ನಿಮ್ಮ ಒತ್ತಡವನ್ನು ನಿಯಂತ್ರಿಸುತ್ತದೆ. ಕೆಲವು ಒಣ ಹಣ್ಣುಗಳು ಅಧಿಕ ರಕ್ತದೊತ್ತಡವನ್ನೂ ನಿಯಂತ್ರಿಸಲು ಸಹಾಯಕವಾಗಿದೆ. ಡ್ರೈ ಪ್ರೂಟ್ಸ್ಗಳನ್ನು ನೀವು ಸಲಾಡ್ ಗಳ ಜತೆಯೂ ಸೇವಿಸಬಹುದು.
ಸಿಟ್ರಸ್ ಹಣ್ಣುಗಳು
ಒತ್ತಡದ ಸಮಯದಲ್ಲಿ ನಿಮ್ಮ ದೇಹಕ್ಕೆ ವಿಟಮಿನ್ ಸಿ ಬೇಕಾಗುತ್ತದೆ. ಹೀಗಾಗಿ ನೀವು ಸಿಟ್ರಸ್ ಗುಣಗಳಿರುವ ಮಾವು, ದ್ರಾಕ್ಷಿ, ಕಿತ್ತಳೆ, ಪಪ್ಪಾಯಿಗಳನ್ನು ಸೇವಿಸಿ. ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವ ಸಿಟ್ರಸ್ ಹಣ್ಣುಗಳು ಮಾನಸಿಕ ಒತ್ತಡ ಮತ್ತು ನರಗಳ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ನಿಮಗೆ ರಿಲ್ಯಾಕ್ಸ್ ಆಗಲು ಸಿಟ್ರಸ್ ಹಣ್ಣುಗಳನ್ನು ಬಳಕೆಯಲ್ಲಿರಿಸಿಕೊಳ್ಳಿ.
ಅವಕಾಡೊ
ಅವಕಾಡೊ ಅಥವಾ ಬೆಣ್ಣೆಹಣ್ಣುಗಳು ಮಾನಸಿಕ ಒತ್ತಡವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಅವಕಾಡೊದಲ್ಲಿರುವ ಸಿ ಇ ಕೆ, ಬಿ6 ಮತ್ತು ಪೊಲೇಟೋಗಳಂತಹ ಅಗತ್ಯ ವಿಟಾಮಿನ್ಗಳು , ಖನಿಜಗಳು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತವೆ. ಅವಕಾಡೊ ಸೇವನೆಯಿಂದ ಅಧಿಕ ರಕ್ತದೊತ್ತಡ ಮತ್ತು ಸ್ಥೂಲಕಾಯತೆಯನ್ನೂ ಕೂಡ ನಿಯಂತ್ರಿಸಬಹುದು.