ಮಕ್ಕಳಿಗೆ ಕಫ ಇದ್ದರೆ ಮನೆ ಔಷಧಿಗಳು ಏನೆಲ್ಲಾ?

ಶುಕ್ರವಾರ, 6 ಜನವರಿ 2017 (11:47 IST)
ಬೆಂಗಳೂರು: ಚಿಕ್ಕ ಮಕ್ಕಳು ಆಗಾಗ ಶೀತ, ಕೆಮ್ಮು ಅಂತ ಒದ್ದಾಡುವುದು ಸಹಜ. ಹವಾಮಾನ ಬದಲಾವಣೆಗೆ ಅವರ ಆರೋಗ್ಯ ಪಕ್ಕನೇ ಹದಗೆಡುತ್ತದೆ. ಅದರಲ್ಲೂ ಶೀತ, ಕಫ, ಕೆಮ್ಮು ಸಾಮಾನ್ಯ.


ಸಣ್ಣ ಪುಟ್ಟದ್ದಕ್ಕೆಲ್ಲಾ ವೈದ್ಯರ ಬಳಿ ಹೋಗಿ ಬಾಟಲಿ ಔಷಧಿಗಳನ್ನು ಕುಡಿಸಿದರೆ ಅವರ ರೋಗ ನಿರೋಧಕ ಶಕ್ತಿ ಕಡಿಮೆಯಾದರೇ ಎಂಬ ಆತಂಕ ಕೆಲವು ಪೋಷಕರಿಗೆ. ಅಂತಹವರಿಗಾಗಿ ಕಫ ಬಂದರೆ ಮಕ್ಕಳಿಗೆ ನೀಡಬಹುದಾದ ಮನೆ ಔಷಧಗಳಿವೆ.

ನಮ್ಮ ಮನೆಯಂಗಳಲ್ಲಿ ಸಾಂಬ್ರಾಣಿ ಸೊಪ್ಪು ಮತ್ತು ತುಳಸಿ ಗಿಡ ನೆಟ್ಟರೆ ಸಾಕಷ್ಟಾಯಿತು. ಸಾಂಬ್ರಾಣಿ ಸೊಪ್ಪಿನ ಹೊಗೆ ಮಕ್ಕಳಿಗೆ ನೀಡುವುದೂ ಶೀತವಾಗಬಾರದೆಂಬ ಕಾರಣಕ್ಕೆ. ಇದೇ ಸಾಂಬ್ರಾಣಿ ಸೊಪ್ಪನ್ನು ಬಾಡಿಸಿ, ಅದರ ರಸ ತೆಗೆದು, ಸ್ವಲ್ಪ ಜೇನು ತುಪ್ಪ ಸೇರಸಿ ಕುಡಿಯುವುದರಿಂದ ಚಿಕ್ಕ ಮಕ್ಕಳಲ್ಲಿ ಕಫ ನಿವಾರಣೆಯಾಗುತ್ತದೆ.

ಶೀತವೂ ಜತೆಗಿದ್ದರೆ, ತುಳಸಿ ರಸ ಮತ್ತು ಜೇನು ತುಪ್ಪ ಸೇರಿಸಿ ಕುಡಿಸಿ. ಅಲ್ಲದೆ ವೀಳ್ಯದ ಎಲೆ ಬಾಡಿಸಿ ಮಕ್ಕಳ ನೆತ್ತಿ ಮೇಲೆ ಇಡುವುದೂ ಶೀತಕ್ಕೆ ಪರಿಹಾರ ನೀಡುತ್ತದೆ. ಇನ್ನು ಹಿಪ್ಪಲಿ ಅಥವಾ ಪಿಪ್ಪಲಿ ನೋಡಲು ಕಾಳು ಮೆಣಸಿನಂತೇ ಇದ್ದರೂ, ಸ್ವಲ್ಪ ಉದ್ದಕ್ಕೆ ಕೋಡಿನ ಹಾಗಿರುತ್ತದೆ. ಇದು ಹಳ್ಳಿ ಕಡೆ ಸಿಗುತ್ತದೆ. ಇದು ಕಾಳುಮೆಣಸಿನಂತೆ ಖಾರ ಖಾರವಾಗಿರುತ್ತದೆ. ಇದನ್ನು ಅರೆದು ಜೇನು ತುಪ್ಪದೊಂದಿಗೆ ಬೆರೆಸಿ ಮಕ್ಕಳಿಗೆ ನೀಡುವುದು ಕಫಕ್ಕೆ ಉತ್ತಮ ಮನೆ ಔಷಧ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ