ಬೆಂಗಳೂರು: ಇನ್ನೇನು ಮಾವಿನ ಹಣ್ಣಿನ ಸೀಸನ್ ಬಂತು. ಈಗ ಮಾವಿನ ಹಣ್ಣನ್ನು ಮಧುಮೇಹಿಗಳು ತಿನ್ನಬಹುದೇ? ಮಧುಮೇಹಿಗಳು ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ ಎಂಬ ಅನುಮಾನಗಳಿಗೆ ಇಲ್ಲಿದೆ ಉತ್ತರ.
ಮಾವಿನ ಹಣ್ಣು ಅತಿಯಾಗಿ ಸಿಹಿ ರುಚಿ ಹೊಂದಿರುತ್ತದೆ. ಹೀಗಾಗಿ ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗಬಹುದೇನೋ ಎಂಬ ಆತಂಕ ಅನೇಕರಲ್ಲಿರುತ್ತದೆ. ಅವರ ಆತಂಕಕ್ಕೆ ತಕ್ಕಂತೆ ಮಾವಿನ ಹಣ್ಣಿನಲ್ಲಿ ಸಕ್ಕರೆಯ ಅಂಶ ಹೆಚ್ಚಿರುತ್ತದೆ. ಹೀಗಾಗಿ ಇದನ್ನು ಮಧುಮೇಹಿಗಳು ತಿನ್ನುವುದು ಅಷ್ಟು ಒಳ್ಳೆಯದಲ್ಲ.
ಮಾವಿನ ಹಣ್ಣಿನಲ್ಲಿ ಗ್ಲುಕೋಸ್, ಪ್ರಾಕ್ಟೋಸ್ ಜೊತೆಗೆ ನೈಸರ್ಗಿಕ ಸಕ್ಕರೆಯ ಅಂಶವಿದೆ. ಇದರಿಂದಾಗಿ ಜೀರ್ಣಕ್ರಿಯೆ ಸುಲಭವಾಗಿ ನಡೆದು, ಪೋಷಕಾಂಶಗಳನ್ನು ನಿಧಾನವಾಗಿ ಹೀರಿಕೊಳ್ಳುವುದು. ಇದರಿಂದ ಸಕ್ಕರೆ ಅಂಶ ಹಠಾತ್ ಅಲ್ಲದೇ ಇದ್ದರೂ ನಿಧಾನವಾಗಿ ಹೆಚ್ಚು ಮಾಡಬಹುದು.
ಹಾಗಂತ ಮಾವಿನ ಹಣ್ಣನ್ನು ಸ್ವಲ್ಪವೂ ತಿನ್ನಲೇಬಾರದು ಎಂದೇನಲ್ಲ. ಹಿತಮಿತವಾಗಿ ಬಳಕೆ ಮಾಡುವುದಕ್ಕೆ ತೊಂದರೆಯೇನಿಲ್ಲ. ಅತಿಯಾದರೆ ಯಾವುದೂ ಒಳ್ಳೆಯದಲ್ಲ. ಅದರಂತೆ ಮಾವಿನ ಹಣ್ಣನ್ನೂ ಮಿತವಾಗಿ ತಿಂದರೆ ಮಧುಮೇಹಿಗಳಿಗೂ ಯಾವುದೇ ಸಮಸ್ಯೆಯಾಗದು.