60ರ ಅರಳುಮರುಳಾಗದಿರಲಿ... ಷಷ್ಟ್ಯಬ್ದಿಯ ರಸಘಳಿಗೆಯಾಗಲಿ...

PTI
60 ಅನ್ನೋದು ಅರಳು ಮರುಳಿನ ಸಂಕೇತ ಅನ್ನುವವರು ಒಂದು ಕಡೆ. ಅರುವತ್ತೆಂಬುದು ಜೀವನೋತ್ಸಾಹದ ರಸ ಘಳಿಗೆ ಎನ್ನುತ್ತಾ ಷಷ್ಟ್ಯಬ್ದಿ ಆಚರಿಸಿಕೊಳ್ಳುತ್ತಿರುವ ಪಂಗಡವೊಂದು ಕಡೆ. ಇದೇ ಮಾದರಿಯ ವಿವಿಧತೆಗಳಲ್ಲಿ ಏಕತೆಯನ್ನು ಸಾಧಿಸುತ್ತಲೇ ಭಾರತವಿಂದು ತನ್ನ ಪುನರ್ಜನ್ಮದ 60ನೇ ವರ್ಷವನ್ನು ಸಡಗರದಿಂದ ಆಚರಿಸಿಕೊಳ್ಳುತ್ತಿದೆ.

ಬ್ರಿಟಿಷರ ದಾಸ್ಯದ ಸಂಕೋಲೆ ಕಳಚಿಕೊಂಡು, ಧೈರ್ಯ ಮತ್ತು ತ್ಯಾಗದ ಪ್ರತೀಕವಾದ ಕೇಸರಿ, ಶುಭ್ರತೆಯ ಪ್ರತೀಕವಾಗಿ ಶ್ವೇತವರ್ಣ ಮತ್ತು ಅಭಿವೃದ್ಧಿಯ ಸಂಕೇತ- ಹಸಿರು ಬಣ್ಣಗಳ ಸೀರೆಯುಟ್ಟ ಭಾರತ ಮಾತೆ, ಈ 60 ವರ್ಷಗಳಲ್ಲಿ ಈ ಪರಿಯಾಗಿ ವಿಶ್ವಮಟ್ಟದಲ್ಲಿ ಬೆಳೆದು ನಿಂತದ್ದು ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ.

ಎರಡನೇ ವಿಶ್ವಯುದ್ಧದಲ್ಲಿ ಅಮೆರಿಕದ ಅಣುಬಾಂಬ್ ದಾಳಿಗೆ ನುಚ್ಚು ನೂರಾಗಿದ್ದ ಜಪಾನ್ ಯಾವ ಪ್ರಮಾಣದಲ್ಲಿ ದುರಂತದ ಎಲ್ಲಾ ಕರಾಳ ಛಾಯೆಯನ್ನು ಕೊಡವಿಕೊಂಡು ಮೇಲೆದ್ದಿತೋ... ಅದೇ ಮಾದರಿಯಲ್ಲಿ, ಶತಮಾನಗಳಷ್ಟು ಕಾಲದಿಂದ ಆಕ್ರಮಣಶೀಲ ಮುಸಲ್ಮಾನ ದೊರೆಗಳಿಂದ ತುಳಿತಕ್ಕೊಳಗಾಗಿ, ಕೊನೆಯದಾಗಿ ಬ್ರಿಟಿಷರ ದುರಾಡಳಿತಕ್ಕೆ ಸಿಲುಕಿ ಛಿದ್ರ ವಿಚ್ಛಿದ್ರವಾಗಿ ಹೋಗಿದ್ದ ಭಾರತವು, ಇಂದು ಇಡೀ ಜಗತ್ತೇ ಬೆಚ್ಚಿ ಬೀಳುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಇದೆಲ್ಲಾ ಸಾಧ್ಯವಾದದ್ದು ನಮ್ಮ ಭಾರತೀಯರ ಇಚ್ಛಾಶಕ್ತಿಯಿಂದ ಮತ್ತು ನಿಸ್ವಾರ್ಥ ದುಡಿತದಿಂದ.

ಕವಿ ರವೀಂದ್ರನಾಥ ಠಾಗೋರರಿಂದ (1913ರಲ್ಲಿ ಸಾಹಿತ್ಯಕ್ಕೆ) ಹಿಡಿದು ಡಾ.ಸಿ.ವಿ.ರಾಮನ್ (1930-ಭೌತಶಾಸ್ತ್ರ), ಡಾ.ಹರಗೋವಿಂದ ಖುರಾನಾ (1968-ವೈದ್ಯಕೀಯ), ಡಾ.ಸುಬ್ರಹ್ಮಣ್ಯನ್ ಚಂದ್ರಶೇಖರ್ (1983-ಭೌತಶಾಸ್ತ್ರ), ಮದರ್ ತೆರೇಸಾ (1979-ಶಾಂತಿಗಾಗಿ) ಹಾಗೂ ಡಾ.ಅಮರ್ತ್ಯ ಸೇನ್ (1998-ವಿತ್ತಶಾಸ್ತ್ರ)ಕ್ಕಾಗಿ ವಿಶ್ವಶ್ರೇಷ್ಠವಾದ ನೊಬೆಲ್ ಪ್ರಶಸ್ತಿ ಗಳಿಸಿದವರು ದೇಶದ ಕೀರ್ತಿ ಪತಾಕೆ ಹಾರಿಸಿದ್ದರೆ, ಇಂದು ಅಭಿವೃದ್ಧಿಗೆ ಕಾರಣೀಭೂತವಾದ ಉದ್ಯಮ, ಶಿಕ್ಷಣ, ತಂತ್ರಜ್ಞಾನ... ಎಲ್ಲಾ ಕ್ಷೇತ್ರಗಳಲ್ಲೂ ಭಾರತೀಯರು ವಿರಾಜಮಾನರಾಗುತ್ತಿದ್ದಾರೆ.

WD
ಈ 21ನೇ ಶತಮಾನದಲ್ಲಿ ಎಲ್ಲೆಡೆಯೂ ಐಟಿ-ಬಿಟಿ ಎಂಬ ಎರಡಕ್ಷರದ ಪದಗಳೇ ಕೇಳಿಬರುತ್ತಿವೆ. ಈ ಕ್ಷೇತ್ರದ ಪ್ರಮುಖ ಸಾಧಕರ ಹೆಸರಿನ ಪಟ್ಟಿಯಲ್ಲಿ ಭಾರತೀಯರ ಹೆಸರು ಕೂಡ ಸೇರಿಕೊಂಡು, ಭಾರತೀಯ "ಮಾನವ ಸಂಪನ್ಮೂಲ"ಗಳು ವಿಶ್ವ ಮಾನ್ಯತೆ ಗಳಿಸಿಕೊಂಡಿರುವುದು ಹೆಮ್ಮೆ ತರುವ ವಿಷಯ. ಇಂದು ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ... ಅಲ್ಲಿ ಒಬ್ಬ ಭಾರತೀಯನ ಹೆಸರು ಮಾತ್ರ ಖಂಡಿತ ಇದ್ದೇ ಇರುತ್ತದೆ.

ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಅರ್ಥಶಾಸ್ತ್ರ, ರಾಜಕೀಯ, ಸಾಹಿತ್ಯ, ರಾಯಭಾರ... ಮುಂತಾದ ಸರ್ವ ಕ್ಷೇತ್ರಗಳಲ್ಲೂ ಸಾರ್ವತ್ರಿಕವಾಗಿ ಭಾರತೀಯರು ತಮ್ಮ ಛಾಪು ಮೆರೆಯುತ್ತಿರುವುದು ಪ್ರತಿಯೊಬ್ಬರಿಗೂ ಹೆಮ್ಮೆ ತರುತ್ತದೆ. ಇವೆಲ್ಲಾ ಧನಾತ್ಮಕ ಚಿಂತನೆಗಳೊಂದಿಗೆ ಒಂದಿಷ್ಟು ದೃಷ್ಟಿಯನ್ನು ಪಕ್ಕಕ್ಕೆ ಹೊರಳಿಸಿದರೆ... ಅದನ್ನು ದೃಷ್ಟಿಸುತ್ತಲೇ ಇರಬೇಕಾದ, ಒಂದಿಷ್ಟು ನಿಟ್ಟುಸಿರು ಬಿಟ್ಟು ಗಾಢವಾಗಿ ಚಿಂತಿಸಬೇಕಾದ ಪ್ರಮೇಯ ಖಂಡಿತಾ ಎದುರಾಗುತ್ತಿದೆ.

ಬದ್ಧತೆಯಿಲ್ಲದ ರಾಜಕಾರಣ ಮತ್ತು ರಾಜಕೀಯ ಕ್ಷೇತ್ರ, ನಾಗರಿಕ ಸಮಾಜ ತಲೆ ತಗ್ಗಿಸಿ ಕೂರಬೇಕಾದ ಕಟ್ಟಳೆಗಳನ್ನು ಜಾರಿಗೆ ತರುವ ಅಧಿಕಾರಾರೂಢರು, ತಂತ್ರಜ್ಞಾನದ ಮಂತ್ರ ಹೇಳುತ್ತಲೇ, ದೇಶದ ಬೆನ್ನೆಲುಬು ಮುರಿಯಲು ಹೊರಟಿರುವ ಬಂಡವಾಳಶಾಹಿಗಳು ನೆನಪಾಗುತ್ತಾರೆ.

WD
ಇನ್ನೂ ಕೆಲವು ಬಡಪಾಯಿ ಶ್ರೀಸಾಮಾನ್ಯರು ಮಾತ್ರ ಸ್ವಾತಂತ್ರ್ಯ ಅಂದರೆ ಏನು ಎಂದು ಕನವರಿಸುವ ಸಂಧಿಕಾಲದಲ್ಲಿದ್ದೇವೆ ಎಂಬ ನಿಜಾಂಶವನ್ನು ಬಚ್ಚಿಡಲು ಪ್ರಯತ್ನಿಸಲಾಗುತ್ತಿದೆ. ಇನ್ನೊಂದು ಕ್ಷೇತ್ರದಲ್ಲೂ ಭಾರತದ ಹೆಸರು ನಿಧಾನವಾಗಿ ಕೇಳಿಬರತೊಡಗಿದೆ... ಅದುವೇ ಭಯೋತ್ಪಾದನೆ... ಯಾವುದರಿಂದ ಭಾರತವಿಂದು ತತ್ತರಿಸುತ್ತಿದೆಯೋ, ಅದೇ ಪೀಡಕ ಹೆಸರಿನ ಜತೆ ಭಾರತದ ಹೆಸರು ಥಳುಕು ಹಾಕಿಕೊಳ್ಳುತ್ತಿರುವುದು ಸರ್ವಥಾ ಒಪ್ಪಿಕೊಳ್ಳತಕ್ಕ ವಿಷಯವಲ್ಲ...

ಇನ್ನು... ಪ್ರತಿವರ್ಷ ಆಗಸ್ಟ್ 15ರಂದು ಧಾಂ-ಧೂಂ ಎಂದು ಸ್ವಾತಂತ್ರ್ಯೋತ್ಸವ ಆಚರಿಸುತ್ತಾರೆ ಅಧಿಕಾರಸ್ಥರು. ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜ ಹಾರುತ್ತದೆ. ದೇಶದ ಗತ ಕಾಲವನ್ನು ನೆನಪಿಸಿಕೊಳ್ಳುತ್ತಾರೆ, ಶಕ ಪುರುಷರನ್ನು, ಅವರ ತ್ಯಾಗ, ಬಲಿದಾನಗಳನ್ನು ಹಾಡಿ ಹೊಗಳುತ್ತಾರೆ. ದೇಶದ ಅಭಿವೃದ್ಧಿಯ ಮೈಲಿಗಲ್ಲುಗಳನ್ನು ಸ್ಮರಿಸುತ್ತಾರೆ, ಮತ್ತಷ್ಟು ಅಭಿವೃದ್ಧಿಯಾಗಲು ಏನೆಲ್ಲಾ ಮಾಡಬಹುದೆಂಬ ಕುರಿತು ಕನಸು ಕಟ್ಟುತ್ತಾರೆ, ಸ್ವಾತಂತ್ರ್ಯ ದಿನವನ್ನು ಆಚರಿಸಿ, ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ ತಕ್ಷಣವೇ ತಾವು ಸಮಾರಂಭದಲ್ಲಿ ಮಾತನಾಡಿದ್ದನ್ನು ಮರೆತುಬಿಡುತ್ತಾರೆ. ಇದು ದೇಶದ ದುರಂತ.

ನಮ್ಮ ದೇಶದ ಸ್ಥಿತಿ ಇಂದು ಯಾವ ರೀತಿ ಇದೆ ಎಂದರೆ, ಹೊರಗೆ ಶೃಂಗಾರ, ಒಳಗೆ ಗೋಳಿಸೊಪ್ಪು ಎಂಬ ಮಾತಿದೆಯಲ್ಲ... ಅಂತಿದೆ... ಜಗತ್ತಿನ ಕಣ್ಣಿನಲ್ಲಿ ನಾವೊಂದು ಸಶಕ್ತ, ಅಭಿವೃದ್ಧಿಶೀಲ, ಸರ್ವಾಂಗ ಸುಂದರವಾಗಿ, ಕ್ರಾಂತಿಕಾರಿ ಬೆಳವಣಿಗೆ ಸಾಧಿಸುತ್ತಿರುವ ರಾಷ್ಟ್ರ. ಆಂತರಿಕವಾಗಿ ಮಾತ್ರ, ಭ್ರಷ್ಟಾಚಾರ ತಾಂಡವವಾಡುತ್ತಿದೆ, ಭಯೋತ್ಪಾದಕರು ರಕ್ತ ಕುಡಿಯುತ್ತಿದ್ದಾರೆ, ದೇಶದ ಅನ್ನ ತಿಂದು ಉಂಡಮನೆಗೆರಡು ಬಗೆಯುವವರ ಸಂಖ್ಯೆ ಹೆಚ್ಚಳವಾಗುತ್ತಿದೆ... ಜಾತ್ಯತೀತರು ಎನ್ನುತ್ತಲೇ, ಓಟಿನ ಬ್ಯಾಂಕ್ ತುಂಬಿಸುವುದಕ್ಕಾಗಿ ಜಾತಿ ಜಾತಿಗಳನ್ನು ಗುರುತಿಸಿ, ಅವರ ತೋರಿಕೆಯ ಉದ್ಧಾರಕ್ಕಾಗಿ ಮಾತ್ರವೇ ಶ್ರಮಿಸುವ ರಾಜಕಾರಣಿಗಳಿಂದಾಗಿ ಇಂದು ದೇಶದಲ್ಲಿ ಅಸಮಾಧಾನದ ಅಲೆಯೊಂದು ಅದ್ಯಾವುದೋ ರೂಪದಲ್ಲಿ ಆವರಿಸಿಕೊಂಡಿದೆ. ಪ್ರತಿಭಾವಂತರು ಮೂಲೆಗುಂಪಾಗುತ್ತಿದ್ದಾರೆ... ಇಲ್ಲವೇ ಪ್ರತಿಭಾಪಲಾಯನ ಆಗುತ್ತಿದೆ!... ಇದಂತೂ ಈಗ ಹಿಂದೆಂದಿಗಿಂತಲೂ ವ್ಯಾಪಕವಾಗಿ ನಡೆಯುತ್ತಿದೆ. ತಮ್ಮಲ್ಲಿರುವ ಪ್ರತಿಭೆಯನ್ನು ಹೊರಗೆಡಹಲು ಈ ದೇಶದಲ್ಲಿ ಅವಕಾಶ ನೀಡುತ್ತಿಲ್ಲ, ಜಾತಿಯ ಆಧಾರದಲ್ಲಿ ಕರೆದು ಕೆಲಸ ಕೊಡುತ್ತಾರೆ ಮತ್ತು ಈ ಪರಿಸ್ಥಿತಿಯು ಸುಧಾರಿಸುವ ಲಕ್ಷಣಗಳಿಲ್ಲ ಎಂಬುದು ಖಚಿತವಾದ ಬಳಿಕ ಅವರೆಲ್ಲಾ ಹಸಿರು ಹುಲ್ಲುಗಾವಲು ಅರಸುತ್ತಾ ದೇಶದಿಂದ ಹೊರಗೆ ಹುಡುಕಾಟ ಆರಂಭಿಸಿದ್ದಾರೆ...

ಪರಿಣಾಮ? ದೇಶ ವಿದೇಶಗಳಲ್ಲಿ ವಿಶೇಷವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎಲ್ಲೆಡೆಯೂ ಭಾರತೀಯ ಪ್ರತಿಭೆಗಳು ವಿದೇಶೀ ಕಂಪನಿಗಳಿಗಾಗಿ ದುಡಿಯುತ್ತಿದ್ದಾರೆ. ಭಾರತದ ಅಮೂಲ್ಯ ಮಾನವ ಸಂಪನ್ಮೂಲಗಳು ವಿದೇಶಗಳ ಜೇಬು ತುಂಬಿಸಲು ದುಡಿಯುವಂತಾಗಿದೆ...

ಇಂಥ ಪರಿಸ್ಥಿತಿ ಬದಲಾಗಬೇಕು... ನಿಜವಾದ ಸ್ವಾತಂತ್ರ್ಯ ದೊರೆಯಬೇಕಿದ್ದರೆ ದೇಶ ಸ್ವಾವಲಂಬಿಯಾಗಬೇಕು. ಇದ್ದ ಸಂಪನ್ಮೂಲಗಳು ಸಂಪೂರ್ಣವಾಗಿ ಬಳಕೆಯಾಗಬೇಕು. ನಮ್ಮ ದೇಶ, ನಮ್ಮ ಜನ, ಎಲ್ಲವೂ ನಮಗಾಗಿ ಎಂಬಂತಾದರೆ... ಭಾರತವೊಂದು ಪರಿಪೂರ್ಣ ವಿಶ್ವಶಕ್ತಿಯಾಗಿ ಮೂಡಿಬರುವುದರಲ್ಲಿ ಸಂದೇಹವಿಲ್ಲ.

ಹಾಗಾಗಲಿ, ಎಲ್ಲೆಡೆಯೂ ಸ್ವಾತಂತ್ರ್ಯದ ಸುಮದ ಘಮ ಪಸರಿಸಲಿ...