ಕನ್ನಡಿಗರ ಅಭಿಮಾನಕ್ಕೆ ಋಣಿ: ಎಲ್.ಎಸ್.ಶೇಷಗಿರಿ ರಾವ್

NRB
74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದವರು ಪ್ರೊ.ಎಲ್.ಎಸ್.ಶೇಷಗಿರಿ ರಾವ್. ಕನ್ನಡ ಸಾರಸ್ವತ ಲೋಕದಲ್ಲಿ ಎಲ್.ಎಸ್.ಎಸ್. ಎಂದೇ ಪರಿಚಿತರಾಗಿರುವ ಶೇಷಗಿರಿ ರಾವ್, ಕನ್ನಡದ ಹೆಸರಾಂತ ವಿಮರ್ಶಕರೂ ಹೌದು. ನ್ಯಾಷನಲ್ ಬುಕ್ ಟ್ರಸ್ಟ್, ಕೇಂದ್ರ ಸಾಹಿತ್ಯ ಅಕಾಡೆಮಿಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ರಾಷ್ಟ್ರೋತ್ಥಾನ ಬಳಗದ ಕಿರು ಹೊತ್ತಿಗೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರು ಎಂಬ ಹೆಗ್ಗಳಿಕೆಯೂ ಇವರದ್ದು. ಇಂಗ್ಲಿಷ್ ಪ್ರಾಧ್ಯಾಪಕರಾಗಿಯೂ ಕನ್ನಡ ಕೈಂಕರ್ಯದಲ್ಲಿ ತಮ್ಮದೇ ಆದ ಛಾಪು ಒತ್ತಿರುವ ರಾವ್, "ವೆಬ್‌ದುನಿಯಾ ಕನ್ನಡ" ಜತೆಗೆ ಮಾತನಾಡಿದ್ದಾರೆ.

ಎಲ್.ಎಸ್.ಎಸ್ ಕೃತಿಗಳು: ಸಾಮಾನ್ಯ ಮನುಷ್ಯ ಕಾದಂಬರಿ, ಫ್ರಾನ್ಸ್ ಕಾವ್ಯ, ವಿಲಿಯಮ್ ಶೇಕ್ಸ್‌ಪಿಯರ್, ಸಾಹಿತ್ಯ ಬದುಕು, ಸಾಹಿತ್ಯ ವಿಶ್ಲೇಷಣೆ, ಟಿ.ಪಿ.ಕೈಲಾಸಂ, ಕನ್ನಡ ಕೃತಿಗಳು, ಎ ಹಿಸ್ಟರಿ ಆಫ್ ಕನ್ನಡ ಲಿಟರೇಚರ್, ಇಂಟ್ರಡಕ್ಶನ್ ಟು ಮಾಡರ್ನ್ ಕನ್ನಡ ಲಿಟರೇಚರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಟಿ.ಪಿ.ಕೈಲಾಸಂ ಕೃತಿಗಳನ್ನು ಆಂಗ್ಲದಲ್ಲಿ ಬರೆದಿದ್ದಾರೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಅನಕೃ ಪುರಸ್ಕಾರ, ಬಿ.ಎಂಶ್ರೀ ಪುರಸ್ಕಾರಗಳು ಸಂದಿವೆ.

ಸಮ್ಮೇಳನಾಧ್ಯಕ್ಷತೆಗೆ ಆಯ್ಕೆಯಾದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?
ಕನ್ನಡಿಗರ ಅಭಿಮಾನಕ್ಕೆ ನಾನು ಚಿರಋಣಿ.

ಆದರೆ ವ್ಯಾಸರಾಯ ಬಲ್ಲಾಳರು ಬೇಸರಗೊಂಡಿದ್ದಾರಲ್ಲಾ ?
ಬಲ್ಲಾಳರು ಮತ್ತು ನಾನು 60 ವರ್ಷದ ಸ್ನೇಹಿತರು. ಅವರ ಸಾಹಿತ್ಯದ ಬಗ್ಗೆ ನನಗೆ ತುಂಬ ಗೌರವವಿದೆ. ಸಮ್ಮೇಳನವನ್ನು ಅವರೇ ಉದ್ಘಾಟಿಸಿದ್ದಲ್ಲಿ ನನ್ನ ಸಂತೋಷ ಇಮ್ಮಡಿಯಾಗುತ್ತೆ.

ಕನ್ನಡಿಗರ ಸ್ಥಿತಿ-ಗತಿ ಹೇಗಿದೆ ?
ಕನ್ನಡಿಗರು ಮುಖ್ಯವಾಗಿ ಉದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಉಳಿದಂತೆ ನಮ್ಮ ಗಡಿನಾಡು ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಜಾಗತೀಕರಣದ ಅಬ್ಬರದಲ್ಲಿ ಕನ್ನಡಿಗರು ತಮ್ಮತನ ಕಳೆದುಕೊಳ್ಳುವ ಭೀತಿ ಎದುರಾಗುತ್ತಿದೆ. ಇದೆಲ್ಲವನ್ನೂ ಈ ಬಾರಿ ಸಮ್ಮೇಳನ ಭಾಷಣದಲ್ಲಿ ಪ್ರಸ್ತಾಪಿಸಬೇಕೆಂದಿದ್ದೇನೆ.

ಸಮ್ಮೇಳನಾಧ್ಯಕ್ಷರಾಗಿ ತಮ್ಮ ಪ್ರಮುಖ ವಿಚಾರವೇನು ?
ಮುಖ್ಯವಾಗಿ ರಾಜಧಾನಿ ಬೆಂಗಳೂರು ಕನ್ನಡತನವನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದೆ. ಬೆಂಗಳೂರನ್ನು ಕನ್ನಡ ರಾಜಧಾನಿಯಾಗಿ ಉಳಿಸುವ ನಿಟ್ಟಿನಲ್ಲಿ ಎಲ್ಲರ ಜವಾಬ್ದಾರಿಯಿದೆ. ಈ ಕುರಿತಾದ ನನ್ನ ಪ್ರಮುಖ ಚಿಂತನೆಗಳು ಈ ಬಾರಿಯ ಅಧ್ಯಕ್ಷ ಭಾಷಣದಲ್ಲಿ ಪ್ರಸ್ತಾಪವಾಗಬಹುದು.

ವೆಬ್‌ದುನಿಯಾಕ್ಕೆ ಶುಭ ಹಾರೈಕ

ಮಾತು ಮುಂದುವರಿಸುತ್ತಾ ಅವರು, ಮಾಧ್ಯಮ ಪ್ರಪಂಚ ಬೆಳೆಯುತ್ತಿದೆ. ದಿನೇ ದಿನೇ ಸಂವಹನ, ಸುದ್ದಿಯ ಬಿತ್ತರಣೆಗೆ ಹೊಸ ಮಾಧ್ಯಮಗಳು ಸೃಷ್ಟಿಯಾಗುತ್ತಿವೆ. ಕನ್ನಡದಲ್ಲಿ ವೆಬ್‌ದುನಿಯಾ ಹೆಸರಿನ ವೆಬ್ ಚಾನಲ್ ಆರಂಭಗೊಳ್ಳುತ್ತಿರುವುದು ಕನ್ನಡಿಗರಿಗೆಲ್ಲಾ ಹೆಮ್ಮೆಯ ಸಂಗತಿ. ವಿಶ್ವದೆಲ್ಲೆಡೆ ತಲುಪುವ "ವೆಬ್‌ದುನಿಯಾ ಕನ್ನಡ"ಕ್ಕೆ ನನ್ನ ಶುಭಾಶಯಗಳು ಎನ್ನುತ್ತಾ ಮಾತು ಮುಗಿಸಿದರು.

ವೆಬ್ದುನಿಯಾವನ್ನು ಓದಿ