ಶಾಂತಿ-ಕ್ರಾಂತಿ : ಸಾವಿನಲ್ಲೂ "ಆಜಾದ್"

ಶಶಿಕುಮಾರ

ND
ಚಂದ್ರ ಶೇಖರ್ ಅಜಾದ್, ಪಂಡಿತ ಸೀತಾರಾಮ್ ತಿವಾರಿ ಹಾಗೂ ಜಾಗರಣಿ ದೇವಿ ದಂಪತಿಗಳ ಸುಪುತ್ರನಾಗಿ 1906 ನೇ ಇಸವಿ ಜುಲೈ 23ನೇ ತಾರೀಖಿನಂದು ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಬದರ್ಕದಲ್ಲಿ ಜನ್ಮ ತಾಳಿದರು.

ಭಾರತದ ಅತ್ಯಂತ ಜನಪ್ರಿಯ ಕ್ರಾಂತಿಕಾರಿಗಳಲ್ಲಿ ಪ್ರಮುಖರಾದ ಅಜಾದ್‌ರ ಸಾಲಿನಲ್ಲಿ ನಿಲ್ಲುವವರೆಂದರೆ, ಭಗತ್ ಸಿಂಗ್, ಸುಖ್ ದೇವ್, ರಾಜ್ ಗುರು, ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಕುಲ್ಲಾ ಖಾನ್. ಪ್ರಾಥಮಿಕ ಶಿಕ್ಷಣವನ್ನು ಮಧ್ಯ ಪ್ರದೇಶದ ಜಾಬುವಾ ಜಿಲ್ಲೆಯ ಭಾವ್ರ ಗ್ರಾಮದಲ್ಲಿ ಪಡೆದ ಅಜಾದ್, ಉನ್ನತ ಅಧ್ಯಯನಕ್ಕೆಂದು ವಾರಣಾಸಿಯ ಸಂಸ್ಕೃತ ಪಾಠಶಾಲೆಯನ್ನು ಸೇರಿದರು.

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲೇ ಕರಾಳ ಘಟನೆಯಾದ 1919ರಲ್ಲಿ ಅಮೃತ್‌ಸರ್‌ನಲ್ಲಿ ಸಂಭವಿಸಿದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ಅಜಾದ್ ತೀವ್ರವಾಗಿ ಮನನೊಂದಿದ್ದರು. 1921ರಲ್ಲಿ ಮಹಾತ್ಮ ಗಾಂಧಿಯವರು ಅಸಹಕಾರ ಚಳುವಳಿ ಆರಂಭಿಸಿದಾಗ, ಅಜಾದ್ ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಹದಿನೈದನೇ ವಯಸ್ಸಿಗೇ ತಮ್ಮ ಮೊದಲ ಶಿಕ್ಷೆಯನ್ನು ಪಡೆದರು ಅಜಾದ್. ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಅಜಾದ್‌ರನ್ನು ಪೊಲೀಸರು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು. ಮ್ಯಾಜಿಸ್ಟ್ರೇಟ್ ಹೆಸರು ಕೇಳಿದಾಗ, 'ಅಜಾದ್' ಎಂದು ಹೇಳುವ ಮೂಲಕ ಹದಿನೈದು ಛಡಿಯೇಟಿನ ಶಿಕ್ಷೆ ಅನುಭವಿಸಿದರು. ಪ್ರತಿಯೊಂದು ಹೊಡೆತಕ್ಕೂ 'ಭಾರತ್ ಮಾತಾ ಕಿ ಜೈ, ಗಾಂಧಿ ಕಿ ಜೈ' ಎನ್ನುವ ಘೋಷಣೆ ಕೂಗಿದರು. ಆ ಮೂಲಕ ಚಂದ್ರ ಶೇಖರ್ 'ಅಜಾದ್' ಎಂದೇ ಹೆಸರಾದರು.

ND
ಮಹಾತ್ಮ ಗಾಂಧಿಯವರು ತಾವು ಕರೆ ನೀಡಿದ್ದ 'ಅಸಹಕಾರ ಚಳುವಳಿ'ಯನ್ನು ಹಿಂದಕ್ಕೆ ಪಡೆದದ್ದರಿಂದ ನಿರಾಶರಾದ ಅಜಾದ್‌, ಶಾಂತಿ ಮತ್ತು ಅಹಿಂಸಾ ಮಾರ್ಗದ ಬದಲಾಗಿ ಆಕ್ರಮಣಕಾರಿ, ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಾರಂಭಿಸಿದರು. ಯಾವುದೇ ಮಾರ್ಗದಿಂದಲಾದರೂ ಸರಿ, ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಡುವುದನ್ನು ಗುರಿಯಾಗಿಸಿಕೊಂಡು ತನ್ನ ಒಡನಾಡಿಗಳೊಂದಿಗೆ ಸೇರಿ ಸಾಮಾನ್ಯ ಜನರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ದಮನಕಾರಿ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಹೆಸರಾದ ಬ್ರಿಟೀಶ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡರು.

ಭಗತ್ ಸಿಂಗ್ ಮತ್ತಾತನ ಗೆಳೆಯರಾದ ಸುಖ್ ದೇವ್ ಮತ್ತು ರಾಜ್‌ಗುರು ಜತೆಗೂಡಿ ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್(ಎಚ್ಆರ್ಎಸ್ಎ)ಯನ್ನು ಸ್ಥಾಪಿಸಿದರು. ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ದೊರಕಿಸಿಕೊಡಬೇಕು ಹಾಗೂ ಭಾರತದ ಭವಿಷ್ಯದ ಪ್ರಗತಿಗೆ ಸಮಾಜವಾದಿ ತತ್ವಗಳ ಅಳವಡಿಕೆಗೆ ಎಚ್ಆರ್ಎಸ್ಎ ಬದ್ಧವಾಗಿತ್ತು.

ವೈಸ್‌ರಾಯ್ ರೈಲನ್ನು ಸ್ಫೋಟಗೊಳಿಸುವ ಪ್ರಯತ್ನವಾಗಿ 1926ರಲ್ಲಿ ಕಾಕೋರಿ ರೈಲು ದರೋಡೆಯಲ್ಲಿ ಪಾಲ್ಗೊಂಡ ಅಜಾದ್, 1928ರಲ್ಲಿ ಸೈಮನ್ ಆಯೋಗದ ವಿರುದ್ಧ ಲಾಹೋರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಬ್ರಿಟೀಶ್ ಅಧಿಕಾರಿಯಿಂದ ಮಾರಕ ಹೊಡೆತಕ್ಕೊಳಗಾಗಿ ಸಾವನ್ನಪ್ಪಿದ ಪಂಜಾಬ್ ಹುಲಿ ಲಾಲಾ ಲಜಪತ್‌ರಾಯ್ ಸಾವಿನ ಪ್ರತೀಕಾರವಾಗಿ ಭಗತ್ ಸಿಂಗ್ ಮತ್ತಿತರರೊಂದಿಗೆ ಸೇರಿ ಸಾಂಡರ್ಸ್ ಹತ್ಯೆಯಲ್ಲೂ ಪಾಲ್ಗೊಂಡರು.

ತಮಗೆ ಸಿಂಹಸ್ವಪ್ನವಾಗಿದ್ದ ಚಂದ್ರಶೇಖರ್ ಅಜಾದ್‌ರನ್ನು ಪೊಲೀಸರಿಗೆ ಬೇಕಾದವರಲ್ಲಿ ಬಹುಮುಖ್ಯರ ಪಟ್ಟಿಯಲ್ಲಿ ಸೇರಿಸಿಜ ಬ್ರಿಟಿಶರು, ಜೀವಂತವಾಗಿ ಅಥವಾ ಕೊಂದಾದರೂ ಸರಿ ಅವರನ್ನು ಬಂಧಿಸುವ ಕಾರ್ಯಕ್ಕೆ ಕೈ ಹಾಕಿದರು.

ಅದರಂತೆಯೇ, ಯೋಜನೆಯ ಪ್ರಕಾರ 1931ರ ಫೆಬ್ರವರಿ 27ರಂದು ಅಲಹಾಬಾದ್‌ನ ಆಲ್‌ಫ್ರೆಡ್ ಪಾರ್ಕ್‌ಗೆ ಆಜಾದ್ ಬರುವ ಸುಳಿವನ್ನು ಪಡೆದ ಬ್ರಿಟೀಶ್ ಪೊಲೀಸರು ಪಾರ್ಕನ್ನು ಸುತ್ತುವರಿದು, ಅಜಾದ್‌ಗೆ ತಮ್ಮ ವಶವಾಗುವಂತೆ ಎಚ್ಚರಿಸಿದರು. ಆದರೆ, ಬ್ರಿಟೀಶರ ಎಚ್ಚರಿಕೆಗೆ ಮಣಿಯದ ಅಜಾದ್, ವೀರನಂತೆ ಹೋರಾಡಿ ಮೂವರು ಪೊಲೀಸರನ್ನು ಬಲಿ ತೆಗೆದುಕೊಂಡರು. ಆದರೆ, ತಪ್ಪಿಸಿಕೊಳ್ಳಲು ದಾರಿಯೇ ಇಲ್ಲದಂತೆ ಪೊಲೀಸರು ಸುತ್ತುವರಿದಿದ್ದರಿಂದ, ಶತ್ರುಗಳ ಕೈ ವಶವಾಗಬಯಸದೆ ತಮಗೆ ತಾವೇ ಗುಂಡಿಟ್ಟುಕೊಂಡು ಆ ಮೂಲಕ ಜೀವಂತವಾಗಿ ಸೆರೆಯಾಗಬಾರದೆನ್ನುವ ತಮ್ಮ ಪ್ರತಿಜ್ಞೆಯನ್ನು ಪೂರೈಸಿಕೊಂಡು ಸಾವಿನಲ್ಲಿಯೂ 'ಅಜಾದ್' ಹೆಸರನ್ನು ಸಾರ್ಥಕಪಡಿಸಿಕೊಂಡರು. 'ಯೋಧ ಎಂದಿಗೂ ತನ್ನ ಆಯುಧವನ್ನು ತ್ಯಜಿಸುವುದಿಲ್ಲ' ಎಂದು ಹೇಳಿದ ಅಜಾದ್, ಬ್ರಿಟಿಶ್‌ರೊಂದಿಗೆ ಕಾದಾಡುತ್ತ ತನ್ನ ಪ್ರಾಣ ತ್ಯಜಿಸಿದರೂ ಕೈಯಲ್ಲಿನ ಆಯುಧವನ್ನು ಮಾತ್ರ ಬಿಡಲಿಲ್ಲ.