ಹಲವು ಇಸಂಗಳ ನಡುವೆ ಎಲ್ಲಿ ಜಾರಿತೋ... 'ಸಿದ್ಧಾಂತ'

ND
ಆರು ದಶಕಗಳ ಅವಧಿಯಲ್ಲಿ ಎಷ್ಟೊಂದು ಇಸಂಗಳು ನಮ್ಮನ್ನು ಕಾಡಿಲ್ಲ. ನ್ಯಾಷನಲಿಸಂನಿಂದ ಹಿಂದುಯಿಸಂವರೆಗೆ ಸಾಗಿದ ದಾರಿ, ಸವೆಸಿದ ದಾರಿಯನ್ನು ಒಮ್ಮೆಯಾದರೂ ತಿರುಗಿ ನೋಡಬೇಕು ಎನ್ನಿಸುತ್ತದೆ. ಬಹುಶಃ ಅದಕ್ಕೂ ಒಂದು ಸುದಿನ ಬೇಕು. ಅದು ಸ್ವಾತಂತ್ರ್ಯೋತ್ಸವ ಆದರೆ ಸರಿಯಾಗುತ್ತದೆ ಏನೊ...

ಪ್ರಸಕ್ತ ರಾಜಕೀಯ ಸಿದ್ಧಾಂತಗಳಿಗೂ, ಸ್ವಾತಂತ್ರ್ಯ ಪೂರ್ವ ಇದ್ದ ರಾಜಕೀಯ ಸಿದ್ಧಾಂತಗಳಿಗೂ ವ್ಯತ್ಯಾಸ ಇಲ್ಲವೇ ಇಲ್ಲ ಎಂದರೆ ಅದು ತಪ್ಪು. ಕಾಂಗ್ರೆಸ್‌ನ ರಾಷ್ಟ್ರೀಯವಾದ, ಪಶ್ಚಿಮ ಬಂಗಾಳದಲ್ಲಿ ಹುಟ್ಟಿ, ಕೇರಳದಲ್ಲಿ ಮೊದಲ ಬಾರಿಗೆ ಫಲ ನೀಡಿದ ಕಮ್ಯುನಿಸಂ. ಇವುಗಳ ನಡುವೆ ಅಲ್ಲಲ್ಲಿ ಮಿಣುಕು ಹುಳಗಳಂತೆ ಇದ್ದ ಸಾವರ್ಕರ್ ಹಿಂದುತ್ವ. ರಾಜಕೀಯೇತರ ಶಕ್ತಿಯಾಗಲು ಪ್ರಯತ್ನಿಸುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಹುಟ್ಟಿದ ಸಮಾಜವಾದ, ಲೋಹಿಯಾವಾದ ಎಲ್ಲವೂ ಇಂದು ಮೂಲೆಗುಂಪು... ಯಾಕೆ ಹೀಗಾಯಿತು ?

ಬದಲಾದ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಲು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ರಾಜಕಾರಣಗಳು ವಿಫಲವಾದವೆ ?

ಹೌದು, ಇಂದಿನ ಪರಿಸ್ಥಿತಿಯನ್ನು ಗಮನಿಸಿದಲ್ಲಿ ನೂರು ಚಿಲ್ಲರೆ ರಾಜಕೀಯ ಪಕ್ಷಗಳನ್ನು ಹೊಂದಿರುವ ಭಾರತೀಯ ಒಕ್ಕೂಟದಲ್ಲಿ ಯಾವುದೇ ಪಕ್ಷಕ್ಕೆ ಸ್ವಂತಿಕೆ, ಸಿದ್ಧಾಂತ ಎನ್ನುವುದು ಉಳಿದಿಲ್ಲ. ಪ್ರತಿಯೋಂದು ಪಕ್ಷದಲ್ಲಿ ಅದೇ ಜಾತ್ಯತೀತತೆ, ಸಾಮಾಜಿಕ ನ್ಯಾಯ, ಅಲ್ಪಸಂಖ್ಯಾತರ ಏಳಿಗೆ... ಇದೇ ಕಲ್ಯಾಣ ಕಾರ್ಯಕ್ರಮಗಳ ಸಿದ್ಧಾಂತ... ಮತ್ತದೇ ಚುನಾವಣಾ ಪ್ರಣಾಳಿಕೆ. ಹಳೆ ಮದ್ಯವನ್ನು ಹೊಸಲಿ ಬಾಟಲಿಯಲ್ಲಿ ತುಂಬಿಟ್ಟಂತೆ.

ನೆಹರು ಕಾಲಘಟ್ಟದಿಂದ ಇಂದಿರಾವರೆಗೆ ಅವಧಿಯನ್ನು ಭಾರತೀಯ ರಾಜಕಾರಣದಲ್ಲಿ ಒಂದು ಸಾಮ್ಯತೆಯ ಹಂತ ಎಂದು ಕರೆಯಬಹುದು. ರಾಜೀವರಿಂದ ಪಿವಿಎನ್‌ವರೆಗೆ ಇನ್ನೊಂದು ಹಂತ... ಇದೇ ಅವಧಿಯಲ್ಲಿ ಭಾರತೀಯ ಜನತಾ ಪಕ್ಷದ ಬೀಜಾಂಕುರವಾಗಿದ್ದು, ನಂತರದ ಅವಧಿಯಲ್ಲಿ ಇದೇ ಪಕ್ಷ ಸೈದ್ದಾಂತಿಕ ರಾಜಕಾರಣಕ್ಕೆ ಮುಂದಾಗಿದ್ದು, ಅಧಿಕಾರಕ್ಕಾಗಿ ತಾನು ನಂಬಿದ ಸಿದ್ಧಾಂತಗಳಿಗೆ ತಿಲಾಂಜಲಿ ಇತ್ತಿದ್ದು, ಇವೆಲ್ಲವುಗಳ ನಡುವೆ ಕಿಂಗ್ ಮೇಕರ್ ತರಹ ಪ್ರಾದೇಶಿಕ ಪಕ್ಷಗಳ ಉದಯ, ಸೈದ್ಧಾಂತಿಕ ರಾಜಕಾರಣದ ಬೇರನ್ನು ಅಲುಗಾಡಿಸಿದ್ದು ಸತ್ಯ.

ತತ್ವ ನಿಷ್ಠೆ ಇಲ್ಲದ ರಾಜಕಾರಣ


ಸ್ವಾತಂತ್ರ್ಯ ದೊರೆತ ಕಳೆದ ಆರು ದಶಕಗಳಲ್ಲಿ ಎಲ್ಲಿಯಾದರೂ, ಯಾವುದಾದರೂ ಒಂದು ಪಕ್ಷ ತತ್ವ ನಿಷ್ಠೆಗೆ ಪ್ರಾಧಾನ್ಯತೆ ನೀಡಿದೆಯೇ ?

ND
1950ರಿಂದ ಇಲ್ಲಿಯವರೆಗೆ ಒಂದು ಪಕ್ಷದಲ್ಲಿಯೂ ತತ್ವ ನಿಷ್ಠೆ ಇರಲಿಲ್ಲ ಮತ್ತು ಮುಂದೆಯೂ ಬರಲಿಕ್ಕೆ ಸಾಧ್ಯವಿಲ್ಲ ಎಂಬುದು ಇತಿಹಾಸವನ್ನು ಕೆದಕಿದರೆ ತಿಳಿಯುವ ಸತ್ಯ. ತತ್ವ ನಿಷ್ಠೆಗಿಂತ ವ್ಯಕ್ತಿ ನಿಷ್ಠೆಯೇ ಇಲ್ಲಿನ ರಾಜಕಾರಣದ ಪ್ರಮುಖ ಸಾಧನ. ಪರಿಣಾಮವಾಗಿ ಪ್ರಾದೇಶಿಕ ಪಕ್ಷಗಳ ಉದಯ. ಉದಾಹರಣೆಗೆ ಗೋವಾ ಮೊದಲು ಕೇಂದ್ರಾಡಳಿತ ಪ್ರದೇಶವಾಗಿತ್ತು. ನಂತರ ರಾಜ್ಯದ ಸ್ವರೂಪ ಪಡೆದುಕೊಂಡಿತು. ಒಪ್ಪಿಕೊಳ್ಳೋಣ. ಗೋವಾದ ಸಂಸ್ಕೃತಿ ಇತರ ಭಾರತಕ್ಕಿಂತ ಭಿನ್ನ. ಪೋರ್ಚುಗೀಸ್ ಜೀವನಶೈಲಿ ಇನ್ನೂ ಅಲ್ಲಲ್ಲಿ ಉಳಿದುಕೊಂಡಿದೆ. ಮೇಲೆ ಮರಾಠಿ ಪ್ರಭಾವ ಅದು ಬೇರೆ ಮಾತು. ಆರೇ ತಿಂಗಳ ಅವಧಿಯಲ್ಲಿ ಅಲ್ಲಿನ ಆಡಳಿತ ವಿರೋಧ ಪಕ್ಷದ ಸ್ಥಾನದಲ್ಲಿರುತ್ತದೆ. ಏಕೆಂದರೆ ಅಲ್ಲಿ ವ್ಯಕ್ತಿ ನಿಷ್ಠೆಯೂ ಇಲ್ಲ ತತ್ವ ನಿಷ್ಠೆಯೂ ಇಲ್ಲ. ಸೈದ್ದಾಂತಿಕ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಅಲ್ಲಿನ ಸ್ಥಳೀಯ ಎರಡು ಪಕ್ಷಗಳ ಪರಿಣಾಮವಾಗಿ ಲಾಗ ಹಾಕುತ್ತದೆ. .ಯಾಕೆ ಈ ರೀತಿ ?

ಭಾರತೀಯ ರಾಜಕಾರಣದಲ್ಲಿ ತತ್ವ ನಿಷ್ಠೆ ಇಲ್ಲದ ಪರಿಣಾಮವಾಗಿ, ಮೇಲಾಗಿ ವ್ಯಕ್ತಿ ನಿಷ್ಠೆಯು ಅವಶ್ಯಕತೆಗಿಂತ ಹೆಚ್ಚಿಗೆ ಬೆಳೆದ ಪರಿಣಾಮವಾಗಿ ಇಂದು ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಅಧಿಕಾರದಲ್ಲಿವೆ.

ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗೆ ಒಂದು ವ್ಯಕ್ತಿ ನಿಷ್ಠೆ ಕಾರಣವಾದರೆ ಇನ್ನೊಂದು, ಪ್ರಾದೇಶಿಕ ಅಸಮತೋಲನ ಮತ್ತು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ರಾಷ್ಟ್ರೀಯ ಪಕ್ಷಗಳು ಮುಂದಾಗದೇ ಇದ್ದದು. ಉದಾಹರಣೆಗೆ ಇಂದು ಹೊತ್ತಿ ಉರಿಯುತ್ತಿರುವ ಅಸ್ಸಾಮನ್ನೇ ತೆಗೆದುಕೊಳ್ಳಿ, ಅಕ್ರಮ ಬಾಂಗ್ಲಾ ವಲಸಿಗರಿಂದ ಉಂಟಾದ ಸಾಮಾಜಿಕ ಅಸಮಾನತೆ, ನಿರುದ್ಯೋಗ ಸಮಸ್ಯೆ, ಅಸ್ಸಾಂ ಗಣ ಪರಿಷತ್ ಸ್ಥಾಪನೆಗೆ ಕಾರಣವಾಯಿತು. ಪ್ರಫುಲ್ಲ ಕುಮಾರ್ ಮಹಂತೊ ಎಂಬ ವಿದ್ಯಾರ್ಥಿ ನಾಯಕ ಹುಟ್ಟು ಹಾಕಿದ ಪರಿಷತ್ ಯಾವ ರೀತಿಯಲ್ಲಿ ಬೆಳೆಯಿತು. ಎಂದರೆ ಕೇವಲ ಒಂದು ದಶಕದ ಅವಧಿಯಲ್ಲಿ ಕಾಂಗ್ರೆಸ್ ಅಸ್ಸಾಂನಿಂದ ಕಾಲು ಕೀಳಬೇಕಾಯಿತು. ಇದು ಅಲ್ಲಿನ ಸಮಸ್ಯೆಗೆ ಪರಿಹಾರ ರೂಪದಲ್ಲಿ ಹುಟ್ಟಿಕೊಂಡ ಸಂಘಟನೆ.

ಆದರೆ ಈಗ ಅಸ್ಸಾಂ ಗಣ ಪರಿಷತ್ ಕೂಡ ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ ಉಳಿದ ರಾಜಕೀಯ ಪಕ್ಷಗಳ ಮಟ್ಟಕ್ಕೆ ಇಳಿದು ಸಿದ್ಧಾಂತ ಕಳೆದುಕೊಂಡಂತಾಗಿದೆ.

ಇತ್ತೀಚೆಗಷ್ಟೇ ಆಂಧ್ರದಲ್ಲಿ ಒಂದು ತೆಲಂಗಾಣ ರಾಷ್ಟ್ರ ಸಮಿತಿ ಎನ್ನುವುದು ಹುಟ್ಟಿಕೊಂಡಿತು. ಪ್ರತ್ಯೇಕ ತೆಲಂಗಾಣ ರಾಜ್ಯದ ಕನಸು ಕಾಣುತ್ತಿರುವ ಅದು, ಕಾಂಗ್ರೆಸ್‌ನೊಂದಿಗೆ ಕೈಜೊಡಿಸಿದ್ದೇ ತಡ, ತೆಲಂಗಾಣ ಕನಸು ಕೊಳಚೆಯಲ್ಲಿ ಹರಿದು ಹೋಯಿತು. ಅಧಿಕಾರದ ಗದ್ದುಗೆ ಏರಿದ ನಂತರ ತೆಲಂಗಾಣ ಕಾಂಗ್ರೆಸ್‌ಗೂ ಬೇಡ, ರಾಷ್ಟ್ರ ಸಮಿತಿಗೂ ಬೇಡವಾದದ್ದು ವಿಪರ್ಯಾಸ ಸಂಗತಿಯಲ್ಲ. ಏಕೆಂದರೆ ಪ್ರಾದೇಶಿಕ ಹಿತಾಸಕ್ತಿಗಳನ್ನು ಬಳಸಿಕೊಂಡು ರಾಜಕಾರಣ ಮಾಡುವುದು ಒಂದು ಸಂಪ್ರದಾಯ!

ಇದು ರಾಜಕೀಯ ಪಕ್ಷಗಳ ಮತ್ತು ಅಂತಹ ಸ್ವಾರ್ಥತೆ ತುಂಬಿಕೊಂಡ ವ್ಯಕ್ತಿಗಳು ಜನರ ಪ್ರಾದೇಶಿಕ ಅಭಿಮಾನವನ್ನು ಯಾವ ತರಹ ಬಳಸಿಕೊಳ್ಳುತ್ತಿದ್ದಾರೆ ಮತ್ತು ರಾಜಕೀಯ ಪಕ್ಷಗಳಲ್ಲಿ ತತ್ವ ನಿಷ್ಠೆ ಮಾಯವಾಗಿರುವುದಕ್ಕೆ ಸಾಕ್ಷಿ. ಒಂದು ಒಳ್ಳೆಯದಿರಲಿ, ಕೆಟ್ಟದಿರಲಿ... ವ್ಯಕ್ತಿಗಳಿಗೆ, ಪಕ್ಷಗಳಿಗೆ ಸೈದ್ಧಾಂತಿಕ ನಿಲುವು ಬೇಕು. ಅದು ಕಳಚಿಕೊಂಡರೆ ಆಗುವ ಪರಿಣಾಮದ ಉದಾಹರಣೆಯ ರೂಪದಲ್ಲಿ ಇಂದು ಬಿಜೆಪಿ ನಮ್ಮ ಎದುರು ಇದೆ.

80ರ ದಶಕದಲ್ಲಿ ರಾಷ್ಟ್ರಾಭಿಮಾನ, ಹಿಂದುತ್ವ ಎಂದು ಹೇಳಿಕೊಂಡ ಪಕ್ಷ ಕಾಲಾನಂತರದಲ್ಲಿ ತನ್ನ ಮೂಲ ಸಿದ್ಧಾಂತವನ್ನೆ ಮರೆಯಿತು. ಪಿವಿಎನ್ ಅಧಿಕಾರಾವಧಿಯಲ್ಲಿ ಸ್ವದೇಶಿ ಚಿಂತನೆ ಎಂದು ಹೇಳಿದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಾಡಿದ್ದೇನು? ಜಾಗತಿಕ ಅರ್ಥವ್ಯವಸ್ಥೆಯಿಂದ ನಮ್ಮನ್ನು ನಾವು ಹೊರಗಿಟ್ಟುಕೊಂಡು ಬಹುದಿನ ಬಾಳಲು ಸಾಧ್ಯವಿಲ್ಲ. ಅದೂ ಗೊತ್ತಿದ್ದೂ ಅಂದು ಸ್ವದೇಶಿ ಮಂತ್ರ ಜಪಿಸಿದ್ದು ಯಾಕೆ ?

ಪ್ರಾದೇಶಿಕ ಅಸಮಾನತೆ ಎಲ್ಲೆಲ್ಲಿಯೂ ಎಲ್ಲ ರಾಜ್ಯಗಳನ್ನು ಒಂದಿಲ್ಲೊಂದು ತರಹ ಕಾಡುತ್ತಿದೆ. ಇದಕ್ಕೆ ಕಾರಣ, ರಾಷ್ಟ್ರೀಯ ಪಕ್ಷಗಳಲ್ಲಿನ ಸಮಗ್ರ ಕೊರತೆಯ ಚಿಂತನೆ. ಇಂದಿಗೂ ಕೂಡ ಪ್ರಾದೇಶಿಕ ಪಕ್ಷಗಳು ಅಭಿವೃದ್ಧಿ ರಾಜಕೀಯ ತಂತ್ರಕ್ಕೆ ಜೋತು ಬಿದ್ದಿವೆ. ಆಡಳಿತಾರೂಢ ಕೇಂದ್ರದಲ್ಲಿನ ಪಕ್ಷಕ್ಕೆ ಬೆಂಬಲ ನೀಡಿದ್ದರೆ ಇಲ್ಲವೇ ಆ ಪ್ರಾದೇಶಿಕ ಬೆಂಬಲ ರಾಷ್ಟ್ರೀಯ ಪಕ್ಷಕ್ಕೆ ಅವಶ್ಯ ಇದ್ದಲ್ಲಿ, ಆ ರಾಜ್ಯಕ್ಕೆ ಕೇಂದ್ರದ ನೆರವು ಗಂಗೆಯ ಪ್ರವಾಹದಲ್ಲಿ ಹರಿಯುತ್ತಿರುತ್ತದೆ. ಹರಿಯದೇ ಇದ್ದಲ್ಲಿ ಅಧಿಕಾರದ ಗದ್ದುಗೆಯೊಂದಿಗಿನ ಸಂಬಂಧ ಹರಿದುಕೊಳ್ಳಬೇಕಾಗುತ್ತದೆ. ಇಂತಹ ರಾಜಕೀಯ ತಂತ್ರವನ್ನು ಕಂಡು ಹಿಡಿದಿದ್ದು ಚಂದ್ರಬಾಬು ನಾಯ್ಡು ಎನ್ನಬಹುದೇನೋ... ದೇವೇಗೌಡರಿಗೂ ಬೆಂಬಲ ನೀಡಿದ ಈ ಆಂಧ್ರದ ಮುಖ್ಯಮಂತ್ರಿ, ಗೌಡರ ಕಣ್ಣೆದುರೇ ದೊಡ್ಡ ದೊಡ್ಡ ಕಂಪನಿಗಳಿಗೆ ತನ್ನ ನೆಲದಲ್ಲಿ ಬಂಡವಾಳ ಹೂಡಲು ಅವಕಾಶವನ್ನು ಮಾಡಿಕೊಟ್ಟದ್ದು, ಒಂದು ರೀತಿಯಲ್ಲಿ ಕರ್ನಾಟಕದ ಪಾಲಿನ ದುರಂತ.

ಕರ್ನಾಟಕದಲ್ಲಿ....


ಸ್ವಾತಂತ್ರ್ಯ ಕಾಲದಿಂದಲೂ ಕರ್ನಾಟಕದಲ್ಲಿ ಅದೇಕೊ ಏನೋ.. ಪ್ರಾದೇಶಿಕ ಪಕ್ಷಗಳು ಬಲಿಯಲೇ ಇಲ್ಲ. ಆಗಾಗ ಬಂಗಾರಪ್ಪ, ದೇವರಾಜ ಅರಸು ಪ್ರಯತ್ನ ಮಾಡಿದರೂ ಫಲ ಮಾತ್ರ ಶೂನ್ಯ. ಇಂದಿಗೂ ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ ಇದೆ. ವಾಸ್ತವಿಕವಾಗಿ ಅದು ಕರ್ನಾಟಕಕ್ಕೆ ಮಾತ್ರ ಸೀಮಿತ. ಲೆಕ್ಕದಲ್ಲಿ ರಾಷ್ಟ್ರೀಯ ಪಕ್ಷ. ಒಳಜಗಳಗಳೇ ಇದಕ್ಕೆ ಪ್ರಧಾನ ಕಾರಣ.

ಪರಿಸ್ಥಿತಿ ಈ ರೀತಿ ಇರುವಾಗ, ಭಾರತ ಸ್ವಾತಂತ್ರ್ಯ ಗಳಿಸಿ 6 ದಶಕಗಳನ್ನು ಪೂರ್ಣಗೊಳಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿಕೊಂಡ ಮೇಲೆ ವ್ಯವಸ್ಥೆಗೆ ತಕ್ಕ ಸಿದ್ಧಾಂತಗಳು ಇರಬೇಕು, ಅದು ಇಲ್ಲದ್ದರಿಂದಲೇ ಏನೋ... ಇಂದಿಗೂ ಆಮ್ ಆದ್ಮಿಗೆ ಯಾವುದೇ ಸೌಲಭ್ಯಗಳು ದಕ್ಕಿಲ್ಲ ಮತ್ತು ದಕ್ಕುವ ಸಾಧ್ಯತೆಗಳು ಸನಿಹದಲ್ಲಿ ಇಲ್ಲ.

ಭಾರತ 2020ರೊಳಗೆ ಜಗತ್ತಿನ ಶ್ರೀಮಂತ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುತ್ತದೆ ಎಂದು ಅಂದಾಜು ಮಾಡಲಾಗುತ್ತಿದೆ. ನಿಸ್ಸಂಶಯವಾಗಿ ಭಾರತ ಏಷಿಯಾದ ಶಕ್ತಿಶಾಲಿ ರಾಷ್ಟ್ರವಾಗುತ್ತದೆ. ಆರ್ಥಿಕವಾಗಿ ಸಬಲವಾಗುತ್ತದೆ ಸಂಶಯವಿಲ್ಲ. ಆದರೆ ಈ ದೇಶವನ್ನು,ದೇಶದ ಸಂಸ್ಕೃತಿಯನ್ನು ಉಳಿಸಿಕೊಂಡು ನಮಗೆಲ್ಲರಿಗೂ ಅನ್ನ ಹಾಕಿದ ಭಾರತೀಯ ರೈತನ ಅವಸಾನವಾಗಿರುತ್ತದೆ...

ಹಾಗಾಗದಿರಲಿ.... ಭಾರತ ಬೆಳೆಯಲಿ, ಅನ್ನದಾತರೂ ಬೆಳಗಲಿ....