ಬಾಂಗ್ಲಾದೇಶದ ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ಮಿಗ್-29 ಯುದ್ಧವಿಮಾನಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ವಿಚಾರಣೆ ಎದುರಿಸಲಿದ್ದಾರೆ. ಪ್ರಕರಣ ರದ್ದು ಮಾಡುವಂತೆ ಕೋರಿದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ಸದ್ಯ ತಾತ್ಕಾಲಿಕ ಜೈಲಿನಲ್ಲಿರುವ ಹಸೀನಾ ವಿರುದ್ಧ ಭ್ರಷ್ಟಾಚಾರದ ನಾನಾ ಆರೋಪಗಳಿವೆ. ಬಂಧನಕ್ಕೆ ಮುನ್ನ, ಪ್ರಸಕ್ತ ಸೇನಾ ಬೆಂಬಲಿತ ಉಸ್ತುವಾರಿ ಸರ್ಕಾರ ತಮ್ಮನ್ನು ರಾಜಕೀಯದಿಂದ ಮತ್ತು ಮುಂಬರುವ ಚುನಾವಣೆಗಳಿಂದ ಬಹಿಷ್ಕರಿಸಲು ಈ ಪ್ರಕರಣಗಳನ್ನು ಹೂಡಿದೆ ಎಂದು ಆಪಾದಿಸಿದ್ದಾರೆ.
ಹಸೀನಾ ಮತ್ತು ಸೇನೆಯ ಮಾಜಿ ಮುಖ್ಯಸ್ಥ ಮುಸ್ತಫಿಜುರ್ ರೆಹ್ಮಾನ್, ವಾಯುಪಡೆಯ ಮಾಜಿ ಮುಖ್ಯಸ್ಥ ಜಮಾಲ್ ಉದ್ದೀನ್ ಅಹ್ಮದ್ ಸೇರಿದಂತೆ ಐದು ಮಂದಿ ರಷ್ಯಾ ಸರ್ಕಾರದಿಂದ 8 ಮಿಗ್-29 ವಿಮಾನಗಳ ಖರೀದಿಯಲ್ಲಿ ಭ್ರಷ್ಟಾಚಾರ ಎಸಗಿದ್ದಾರೆಂದು ಹಿಂದಿನ ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿತ್ತು.
ಶೇಖ್ ಹಸೀನಾ ಅವಧಿಯಲ್ಲಿ 8 ಮಿಗ್ ವಿಮಾನಗಳ ಖರೀದಿಯಿಂದ 700 ಕೋಟಿ ಟಾಕಾ ಸರ್ಕಾರಕ್ಕೆ ನಷ್ಟವಾಗಿದೆಯಂದು ಆರೋಪಿಸಲಾಗಿತ್ತು.