ಕಾಂಗೋ : ವಿಶ್ವಾದ್ಯಂತ ಈಗಾಗಲೇ ಕೊವಿಡ್ ಮಹಾಮಾರಿ 49 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ.
ಇದರ ಜೊತೆಗೆ ಕೊರೊನಾ ರೂಪಾಂತರಿ, ಮಲೇರಿಯಾ, ಡೆಂಗ್ಯೂ ಮುಂತಾದ ಅನೇಕ ರೋಗಗಳು ಪ್ರತಿವರ್ಷ ಸಾವಿರಾರು ಜನರನ್ನು ಬಲಿ ಪಡೆಯುತ್ತಿವೆ. ಇದರ ನಡುವೆ ಕಾಂಗೋದಲ್ಲಿ ಮತ್ತೊಂದು ನಿಗೂಢ ಕಾಯಿಲೆ ಪತ್ತೆಯಾಗಿದ್ದು, ಆಗಸ್ಟ್ನಿಂದ ಇಲ್ಲಿಯರೆಗೂ 165ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಆಗಸ್ಟ್‌ನಲ್ಲಿ ಕ್ವಿಲು ಪ್ರಾಂತ್ಯದ ಗುಂಗು ಪಟ್ಟಣದಲ್ಲಿ ಈ ನಿಗೂಢ ರೋಗ ಮೊದಲು ಕಾಣಿಸಿಕೊಂಡಿತ್ತು. ಈ ಕಾಯಿಲೆ 5 ವರ್ಷದವರೆಗಿನ ಮಕ್ಕಳನ್ನು ಹೆಚ್ಚಾಗಿ ಭಾಧಿಸುತ್ತಿದೆ. ಇಲ್ಲಿನ ಪ್ರಾದೇಶಿಕ ಆರೋಗ್ಯ ಮುಖ್ಯಸ್ಥ ಜೀನ್-ಪಿಯರ್ ಬಸಾಕೆ ಅವರು ಕೆಲವು ಸೋಂಕಿತ ಮಕ್ಕಳಲ್ಲಿ ಮಲೇರಿಯಾದಂತಹ ರೋಗಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.
ಈ ರೋಗ ಮಲೇರಿಯಾದ ರೀತಿಯ ರೋಗಲಕ್ಷಣಗಳನ್ನು ಹೊಂದಿದೆ. ಈ ಕಾಯಿಲೆಯ ಕುರಿತು ರ್ಯಾಪಿಡ್ ಟೆಸ್ಟ್ಗಳನ್ನು ಮಾಡಲಾಗುತ್ತಿದೆ. ಈ ಕಾಯಿಲೆಯಿಂದ ಅನೀಮಿಯಾ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಕಾರಣವೇನೆಂದು ಇನ್ನೂ ಪತ್ತೆಯಾಗಿಲ್ಲ ಎಂದು ಬಸಾಕೆ ತಿಳಿಸಿದ್ದಾರೆ.