ಫೇಸ್ಬುಕ್ ಗೆಳೆಯನ ಪ್ರೀತಿ ನಂಬಿ ಕೋಟಿ ಕೋಟಿ ಹಣ ಕಳೆದುಕೊಂಡ ಮಹಿಳೆ
ಗುರುವಾರ, 23 ನವೆಂಬರ್ 2023 (11:52 IST)
ಅಲನ್ ಮೆಕಾರ್ಟಿ ಎಂದು ಕರೆದುಕೊಂಡ ನಕಲಿ ಒಳಾಂಗಣ ವಿನ್ಯಾಸಗಾರನನ್ನು ನಂಬಿದ ಮಹಿಳೆ ಅವನ ಜತೆ ಫೇಸ್‌ಬುಕ್ ಮೂಲಕ ಆನ್‌ಲೈನ್ ಸಂಭಾಷಣೆ ನಡೆಸುತ್ತಾ ಅವನ ಪ್ರೀತಿಗೆ ಬಿದ್ದಿದ್ದಳು. ಇದೀಗ ಅವನ ಮೋಸಕ್ಕೆ ಒಳಗಾಗಿ 3ಲಕ್ಷ ಡಾಲರ್ ಹಣವನ್ನು ಕಳೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾಳೆ.
ಆಸ್ಟ್ರೇಲಿಯಾ ಮಹಿಳೆಯೊಬ್ಬಳು ಫೇಸ್‌ಬುಕ್ ಪೋಸ್ಟ್‌ನಲ್ಲಿ ಆನ್‌ಲೈನ್ ರೋಮ್ಯಾನ್ಸ್ ವಂಚನೆಯಲ್ಲಿ ಸಿಕ್ಕಿ 3 ಲಕ್ಷ ಡಾಲರ್ ಹಣವನ್ನು ಕಳೆದುಕೊಂಡಿದ್ದಾಳೆ.
ಸ್ಕಾಟ್‌ಲೆಂಡ್ ಮೂಲದ ಈಗ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ಒಳಾಂಗಣ ವಿನ್ಯಾಸಕಾರ ಮೆಕಾರ್ಟಿಯ ಬಿಸಿನೆಸ್ ವೆಬ್‌ಸೈಟ್ ಮತ್ತು ಫೇಸ್‌ಬುಕ್ ವಿವರಗಳನ್ನು ಬಳಸಿಕೊಂಡು ಮೆಕಾರ್ಟಿಯ ಸೋಗಿನಲ್ಲಿ ಪರ್ತ್ ಮೂಲದ ಮಹಿಳೆಗೆ ತಾವು ವ್ಯವಹಾರ ಮಾಡಲು 3 ಲಕ್ಷ ಡಾಲರ್ ಹಣದ ಅಗತ್ಯವಿದೆಯೆಂದು ನೈಜೀರಿಯಾದ ಕ್ರಿಮಿನಲ್‌ಗಳು ಕೋರಿದ್ದರು.
ತಮ್ಮ ಜತೆ ಸಂಪರ್ಕದಲ್ಲಿರುವುದು ಮೆಕಾರ್ಟಿ ಎಂದು ಭಾವಿಸಿದ್ದ ಮಹಿಳೆ ಅವನನ್ನು ಪ್ರೀತಿಸತೊಡಗಿದ್ದಳು ಮತ್ತು ವ್ಯವಹಾರಕ್ಕಾಗಿ ಹಣ ಕೇಳಿದಾಗ ಮೂರು ಲಕ್ಷ ಡಾಲರ್ ಹಣವನ್ನು ಧಾರಾಳವಾಗಿ ನೀಡಿದ್ದಳು.
ಗ್ರಾಹಕ ರಕ್ಷಣೆ ಮತ್ತು ಪೊಲೀಸ್ ತಂಡಗಳು ತನಿಖೆ ನಡೆಸಿದಾಗ, ನ್ಯೂ ಸೌತ್ ವೇಲ್ಸ್‌ನಲ್ಲಿ ಇದೇ ರೀತಿ ಅನೇಕ ಮಂದಿ ವಂಚನೆಗೊಳಗಾಗಿದ್ದು, ಒಬ್ಬ ಮಹಿಳೆ 50,000 ಡಾಲರ್ ಕಳೆದುಕೊಂಡಿದ್ದನ್ನು ಬೆಳಕಿಗೆ ಬಂದಿತ್ತು.
ಈ ವಂಚನೆಯಲ್ಲಿ ಬಿಸಿನೆಸ್ ವೆಬ್‌ಸೈಟ್‌ಗಳನ್ನು ನೈಜೀರಿಯಾದ ಕಂಪ್ಯೂಟರ್ ಮತ್ತು ಈ ಮೇಲ್ ವಿಳಾಸ ಬಳಸಿ ನೋಂದಣಿ ಮಾಡಲಾಗಿದೆ ಎಂದು ಗ್ರಾಹಕ ರಕ್ಷಣೆ ಆಯುಕ್ತ ನ್ಯೂಕಾಂಬೆ ತಿಳಿಸಿದರು.