ಹವಾಮಾನ ನಿಧಿ ಕುರಿತು ಬೈಡನ್ ರಿಂದ ಶುಭ ಸಮಾಚಾರದ ನಿರೀಕ್ಷೆ: ವಿಶ್ವಸಂಸ್ಥೆ
ಬುಧವಾರ, 22 ಸೆಪ್ಟಂಬರ್ 2021 (08:05 IST)
ವಿಶ್ವಸಂಸ್ಥೆ, ಸೆ.22 : ಜಾಗತಿಕ ಹವಾಮಾನ ಬದಲಾವಣೆಯ ಸಮಸ್ಯೆಗೆ ಪರಿಹಾರ ರೂಪಿಸಲು ಅಗತ್ಯವಿರುವ 100 ಬಿಲಿಯನ್ ಡಾಲರ್ ಮೊತ್ತದ ನಿಧಿ ಸಂಗ್ರಹಿಸಲು ಎದುರಾಗಿರುವ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಶೀಘ್ರ ಶುಭ ಸಮಾಚಾರ ನೀಡಲಿದ್ದಾರೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ವಿಶ್ವಸಂಸ್ಥೆಯ ಮಹಾ ಅಧಿವೇಶನದ ನೇಪಥ್ಯದಲ್ಲಿ ನಡೆದ ರಹಸ್ಯ ಸಭೆಯ ಬಳಿಕ ಮಾತನಾಡಿದ ವಿಶ್ವಸಂಸ್ಥೆಯ ಅಧಿಕಾರಿ ' ಈ ಸಭೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಪ್ರತಿನಿಧಿ ಈ ಕುರಿತು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ' ಎಂದು ಸುದ್ಧಿಗೋಷ್ಟಿಯಲ್ಲಿ ಹೇಳಿದರು.
2015ರ ಪ್ಯಾರಿಸ್ ಒಪ್ಪಂದದ ಹಿನ್ನೆಲೆಯಲ್ಲಿ, ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಎದುರಿಸುವ ಕಾರ್ಯದಲ್ಲಿ ಬಡರಾಷ್ಟ್ರಗಳಿಗೆ ನೆರವಾಗಲು 2020ರಿಂದ 2025ರವರೆಗೆ ಪ್ರತೀ ವರ್ಷ 100 ಬಿಲಿಯನ್ ಡಾಲರ್ ಮೊತ್ತವನ್ನು ಸಂಗ್ರಹಿಸುವ ಗುರಿಯನ್ನು ಅಭಿವೃದ್ಧಿ ಹೊಂದಿದ ದೇಶಗಳು ರೂಪಿಸಿದ್ದವು. ಆದರೆ ಉದ್ದೇಶಿತ ಗುರಿ ಮುಟ್ಟಲು ವಿಫಲವಾಗಿವೆ. ಬ್ರಿಟನ್ನ ಪ್ರಧಾನಿ ಬೋರಿಸ್ ಜಾನ್ಸನ್ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.