ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಪುಂಡರು ಸಿಕ್ಕ ಸಿಕ್ಕಲ್ಲಿ ದಾಳಿ ನಡೆಸುತ್ತಿದ್ದಾರೆ. ಇದೀಗ ಇಲ್ಲಿನ ಖ್ಯಾತ ಹಿಂದೂ ದೇವಾಲಯಕ್ಕೆ ದಾಳಿ ಭೀತಿ ಎದುರಾಗಿದ್ದು ಯುವಕರು 3 ಗಂಟೆ ನಸುಕಿನಲ್ಲೂ ದೇವಾಲಯದ ಮುಂದೆ ಕಾವಲು ಕಾಯುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ಸ್ವಾತಂತ್ರ್ಯ ಯೋಧರ ಕುಟುಂಬಸ್ಥರಿಗೆ ನೀಡಲಾಗಿರುವ ಶೇ.30 ರಷ್ಟು ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳು ಆರಂಭಿಸಿದ ಹೋರಾಟ ಈಗ ಹಿಂಸಾರೂಪ ತಾಳಿದೆ. ನಿನ್ನೆ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಓಡಿ ಬಂದಿದ್ದು, ಅವರ ಅಧಿಕೃತ ನಿವಾಸದಲ್ಲಿ ಪುಂಡರು ಸಿಕ್ಕ ಸಿಕ್ಕ ವಸ್ತಗಳನ್ನು ದೋಚಿ ಪುಂಡಾಟ ಮೆರೆದಿದ್ದಾರೆ.
ಹಿಂಸಾಚಾರಕ್ಕಿಳಿದಿರುವ ಪುಂಡರು ಹಲವೆಡೆ ಬೆಂಕಿ ಹಚ್ಚಿ, ಪ್ರತಿಮೆಗಳನ್ನು ಧ್ವಂಸ ಮಾಡಿ ವಿಕೃತಿ ಮೆರೆಯುತ್ತಿದ್ದಾರೆ. ಹೀಗಾಗಿ ಹಲವರು ಭೀತಿಯಲ್ಲೇ ಕಾಲ ಕಳೆಯುವಂತಾಗಿದೆ. ಬಾಂಗ್ಲಾದೇಶದಲ್ಲಿ ಮುಸ್ಲಿಮ್ ಧರ್ಮೀಯರು ಬಹುಸಂಖ್ಯಾತರಾಗಿದ್ದರೂ ಕೆಲವೇ ಕೆಲವು ಅಪರೂಪದ ಹಿಂದೂ ದೇವಾಲಯಗಳಿವೆ.
ಈಗ ಆ ದೇವಾಲಯಗಳಿಗೆ ದಾಳಿಯ ಭೀತಿ ಎದುರಾಗಿದೆ. ಢಾಕಾದಲ್ಲಿರುವ ಢಾಕೇಶ್ವರಿ ಮಂದಿರ ಪ್ರಸಿದ್ಧ ಹಿಂದೂ ದೇವಾಲಯವಾಗಿದ್ದು, ಆ ದೇವಾಲಯದ ಮೇಲೆ ದಾಳಿಯಾಗುವ ಭೀತಿ ಎದುರಾಗಿದೆ. ಹೀಗಾಗಿ ನಸುಕಿನಲ್ಲೂ ಕೆಲವು ಯುವಕರ ಗುಂಪು ಢಾಕೇಶ್ವರಿ ದೇವಾಲಯದ ಮುಂಭಾಗ ನಿಂತು ಕಾವಲು ಕಾಯುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ನಡುವೆ ಕೆಲವು ಸುಳ್ಳು ಸುದ್ದಿಗಳೂ ಹರಿದಾಡುತ್ತಿವೆ. ಬಾಂಗ್ಲಾ ಕ್ರಿಕೆಟಿಗ ಲಿಟನ್ ದಾಸ್ ಮನೆ ಮೇಲೆ ದಾಳಿಯಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದು ಸುಳ್ಳು ಸುದ್ದಿ ಎಂದು ಬಳಿಕ ಬಯಲಾಗಿದೆ.