ಢಾಕಾ: ತಮ್ಮ ದೇಶದಲ್ಲಿ ಹಿಂಸಾಚಾರ ತಾರಕಕ್ಕೇರಿರುವ ಬೆನ್ನಲ್ಲೇ ಬಾಂಗ್ಲಾದೇಶೀಯರು ಈಗ ಪಶ್ಚಿಮ ಬಂಗಾಲದ ಮೂಲಕ ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾರೆ. ಭಾರತದ ಗಡಿ ಭದ್ರತಾ ಪಡೆಗಳಿಗೆ ಈಗ ಇವರನ್ನು ತಡೆಯುವುದೇ ಕೆಲಸವಾಗಿದೆ.
ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಶೇಖ್ ಹಸೀನಾ ರಾಜೀನಾಮೆ ನೀಡಿ ಪಲಾಯನಗೈದ ಬಳಿಕ ಅಕ್ಷರಶಃ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿತ್ತು. ಸಿಕ್ಕ ಸಿಕ್ಕಲ್ಲಿ ಕಲ್ಲು ತೂರಾಟ, ದಾಂಧಲೆ, ಬೆಂಕಿ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.
ಇದರ ನಡುವೆ ಬಾಂಗ್ಲಾದ ಜನ ಬಂಗಾಲ ಗಡಿ ಮೂಲಕ ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದಾರೆ. ಸಾವಿರದಷ್ಟು ಮಂದಿ ಬಂಗಾಲ ಗಡಿ ಮೂಲಕ ಭಾರತಕ್ಕೆ ಅಕ್ರಮವಾಗಿ ಬಂದು ಸೇರಿಕೊಳ್ಳಲು ರೆಡಿಯಾಗಿದ್ದಾರೆ. ಗುಂಪು ಗುಂಪಾಗಿ ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ಭಾರತಕ್ಕೆ ಬಂದು ಸೇರಿಕೊಳ್ಳಲು ಯತ್ನಿಸುತ್ತಿದ್ದಾರೆ.
ಆದರೆ ಇದೀಗ ಗಡಿ ಭದ್ರತಾ ಯೋಧರು ಗುಂಡು ಹಾರಿಸುವ ಮೂಲಕ ಅಕ್ರಮ ನುಸುಳುಕೋರರನ್ನು ಹಿಮ್ಮೆಟ್ಟಿಸಿದೆ. ಅಲ್ಲದೆ, ಗ್ರಾಮಸ್ಥರಿಗೂ ಬಾಂಗ್ಲಾದೇಶದಿಂದ ಅಕ್ರಮವಾಗಿ ಬರುವವರಿಗೆ ಆಶ್ರಯ ನೀಡದಂತೆ ಎಚ್ಚರಿಕೆ ನೀಡಿದೆ. ಈಗಾಗಲೇ ಭಾರತದಲ್ಲಿ ಬಾಂಗ್ಲಾದೇಶದಿಂದ ಇಲ್ಲಿಗೆ ಅಕ್ರಮವಾಗಿ ವಲಸೆ ಬಂದು ಇಲ್ಲಿನವರಂತೇ ಜೀವನ ಮಾಡುತ್ತಿರುವ ಅನೇಕರು ಇದ್ದಾರೆ. ರಾಜಕೀಯವಾಗಿ ಇಂತಹವರನ್ನು ಬಳಸಿಕೊಳ್ಳುವುದೂ ನಡೆದೇ ಇದೆ. ಇದರ ನಡುವೆ ಈಗ ಬಾಂಗ್ಲಾದಿಂದ ಮತ್ತಷ್ಟು ನುಸುಳುಕೋರರ ತಲೆನೋವು ಭಾರತಕ್ಕೆ ಎದುರಾಗಿದೆ.