ಇಂಧೋರ್: ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು ಪ್ರಧಾನಿ ಶೇಖ್ ಹಸೀನಾ ಬಂಗಲೆಗೆ ನುಗ್ಗಿ ದಾಂಧಲೆ ಎಬ್ಬಿಸಿದ ದೃಶ್ಯಗಳು ಎಲ್ಲೆಡೆ ವೈರಲ್ ಆಗಿತ್ತು. ಮುಂದೊಂದು ದಿನ ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿಗೂ ಇದೇ ಗತಿಯಾಗುತ್ತದೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಸಜ್ಜನ್ ವರ್ಮ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ದಂಗೆಯೆದ್ದ ವಿದ್ಯಾರ್ಥಿಗಳು ಅವರ ನಿವಾಸಕ್ಕೆ ನುಗ್ಗಿ ವಸ್ತುಗಳನ್ನೆಲ್ಲಾ ಹೊತ್ತೊಯ್ದು ಅಕ್ಷರಶಃ ಲೂಟಿಗೈದಿದ್ದದರು. ಈ ಗಲಾಟೆ ನಡುವೆ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು. ಇದೀಗ ಈ ಘಟನೆ ಭಾರತದಲ್ಲೂ ಆಗಬಹುದು ಎಂದು ಕಾಂಗ್ರೆಸ್ ನಾಯಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನರೇಂದ್ರ ಮೋದಿಯವರೇ ನೆನಪಿಡಿ, ಒಂದು ದಿನ ಜನ ನಿಮ್ಮ ಮನೆಗೂ ನುಗ್ಗಬಹುದು, ನಿಮ್ಮ ತಪ್ಪಾದ ನೀತಿಗಳನ್ನು ವಿರೋಧಿಸಿ ನಿಮ್ಮ ಮನೆ ಮೇಲೂ ದಾಳಿ ಮಾಡಬಹುದು. ಇತ್ತೀಚೆಗೆ ಶ್ರೀಲಂಕಾದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಜನ ಅಲ್ಲಿಯೂ ಪ್ರಧಾನಿ ನಿವಾಸಕ್ಕೆ ನುಗ್ಗಿದ್ದರು. ಈಗ ಬಾಂಗ್ಲಾದೇಶದಲ್ಲಿ ಆಗಿದೆ. ಮುಂದೆ ಭಾರತದ ಸರದಿ ಎಂದು ಸಜ್ಜನ್ ವರ್ಮ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಭಾರತೀಯ ಯುವ ಜನ ಮೋರ್ಚಾ ಸಜ್ಜನ್ ವರ್ಮ ವಿರುದ್ಧ ದೇಶ ವಿರೋಧ ಹೇಳಿಕೆ ನೀಡಿದ ಆರೋಪದಲ್ಲಿ ದೂರು ನೀಡಿದೆ. ಬಾಂಗ್ಲಾದೇಶದಲ್ಲಿ ನಡೆದಿರುವುದು ಭಾರತದಲ್ಲೂ ನಡೆಯಬಹುದು ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ ಬೆನ್ನಲ್ಲೇ ಈಗ ಮತ್ತೊಬ್ಬ ಕಾಂಗ್ರೆಸ್ ನಾಯಕ ಅದೇ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.