BBC ಕಚೇರಿಗಳಲ್ಲಿ IT ಅಧಿಕಾರಿಗಳ ಪರಿಶೀಲನೆ

ಬುಧವಾರ, 15 ಫೆಬ್ರವರಿ 2023 (19:03 IST)
ಬಿಬಿಸಿಯ ಅಂತಾರಾಷ್ಟ್ರೀಯ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ತೆರಿಗೆ ಇಲಾಖೆಗೆ ಗುಮಾನಿ ಇದೆ. ಭಾರತದಲ್ಲಿ ಗಳಿಸಿದ ಲಾಭವನ್ನು ಬ್ರಿಟನ್‌ಗೆ ಸಂಸ್ಥೆ ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪದ ಮೇರೆಗೆ ಈ ದಾಳಿಯನ್ನು ನಡೆಸಲಾಗಿದೆ. ಬಿಬಿಸಿಗೆ ಈ ಕುರಿತು ಈ ಹಿಂದೆ ನೋಟಿಸ್‌ ನೀಡಿದ್ದರೂ ಉತ್ತರ ಬಾರದ ಕಾರಣ ಪರಿಶೀಲನೆ ನಡೆಸಲಾಗಿದೆ ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ನರೇಂದ್ರ ವಿರುದ್ಧದ ಸಾಕ್ಷ್ಯಚಿತ್ರ ಪ್ರಸಾರ ಮಾಡಿದ್ದಕ್ಕಾಗಿ ಬಿಬಿಸಿಯನ್ನು ತೆರಿಗೆ ಇಲಾಖೆ ಗುರಿಯಾಗಿಸಿಕೊಂಡಿದೆ ಎಂಬ ಕಾಂಗ್ರೆಸ್ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಬಿಜೆಪಿ ಮೇಲೆ ಗೂಬೆ ಕೂರಿಸುವುದು ತಪ್ಪು. ಬಿಬಿಸಿ ಎಂದರೆ ‘ಭ್ರಷ್ಟ ಬಕ್ವಾಸ್‌ ಕಾರ್ಪೊರೇಷನ್‌ ಎಂದು ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ತಿರುಗೇಟು ಕೊಟ್ಟಿದ್ದಾರೆ. ಸರ್ಕಾರಿ ಸಂಸ್ಥೆಗಳು ತಮ್ಮ ಕೆಲಸ ಮಾಡುತ್ತಿವೆ ಎಂದು ಸಚಿವ ಅನುರಾಗ್‌ ಠಾಕೂರ್‌ ಸಮರ್ಥಿಸಿಕೊಂಡಿದ್ದಾರೆ. ಮತ್ತೊಂದೆಡೆ ಮಂಗಳವಾರ ನಡೆಸಿದ್ದು ದಾಳಿ ಅಲ್ಲ, ಅದು ಕೇವಲ ಸಮೀಕ್ಷೆ ಅಷ್ಟೆ. ನಾವು ಕೆಲವೊಂದು ಲೆಕ್ಕದ ಪುಸ್ತಕಗಳ ಪರಿಶೀಲನೆಗೆ ತೆರಳಿದ್ದೇವೆ. ಇದು ಯಾವುದೇ ತಪಾಸಣೆ ಅಲ್ಲ. ನಾವು ಬಿಬಿಸಿಯಿಂದ ಬ್ಯಾಲೆನ್ಸ್‌ ಶೀಟ್‌ ಮತ್ತು ಲೆಕ್ಕಪತ್ರದ ದಾಖಲೆಗಳನ್ನು ಕೇಳಿದ್ದೇವೆ. ಕೆಲವು ಸ್ಪಷ್ಟನೆಗಳನ್ನು ಬಯಸಿದ್ದೇವೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಹೇಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ