ನನ್ನ ಕೈಯಲ್ಲಿ ಭಾರತದ ಲಸಿಕೆಯಿದೆ ಎಂದ ಬೋರಿಸ್

ಶುಕ್ರವಾರ, 22 ಏಪ್ರಿಲ್ 2022 (14:45 IST)
ನವದೆಹಲಿ : ಭಾರತದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದು ಸುದೀರ್ಘ ಮಾತುಕತೆ ನಡೆಸಿದರು.

ರಕ್ಷಣಾ ಕ್ಷೇತ್ರ, ವ್ಯಾಪಾರ ಹಾಗೂ ಸ್ವಚ್ಛ ಇಂಧನದಲ್ಲಿ ಸಹಕಾರ ವಿಸ್ತರಿಸುವ ನಿಟ್ಟಿನಲ್ಲಿ ಚರ್ಚಿಸಿದ್ದಾರೆ. ಇದೇ ವೇಳೆ ಮಾತನಾಡಿರುವ ಅವರು, ನನ್ನ ಕೈಯ್ಯಲ್ಲಿ ಭಾರತದ ಲಸಿಕೆಯಿದೆ. ಅದು ನನಗೆ ಒಳ್ಳೆಯದನ್ನು ಮಾಡಿದೆ. ನಾನು ಭಾರತಕ್ಕೆ ಧನ್ಯವಾದ ಹೇಳುತ್ತೇನೆ. ನನ್ನ ವಿಶೇಷ ಗೆಳಯ ಪ್ರಧಾನಿ ನರೇಂದ್ರಮೋದಿ ಅವರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದೂ ಹೇಳಿದ್ದಾರೆ. 

ನಾವು ರಕ್ಷಣಾ ಪಾಲುದಾರಿಕೆಯೊಂದಿಗೆ ಆರೋಗ್ಯ ಪಾಲುದಾರಿಕೆಯ ಬಗ್ಗೆಯೂ ಚರ್ಚಿಸಿದ್ದೇವೆ. ಉದಾಹರಣೆಗೆ ಅಸ್ಟ್ರಾಜೆನಿಕಾ ಸೀರಂ ಸಂಸ್ಥೆಯು ಕೋವಿಡ್ ವಿರುದ್ಧ ಹೋರಾಡಲು ಶತಕೋಟಿ ಜನರಿಗೆ ಲಸಿಕೆ ನೀಡಿದೆ. ಅಲ್ಲದೆ, ಅದು ಭಾರತಕ್ಕೂ ಸಹಾಯ ಮಾಡಿದೆ.

ಅದಕ್ಕಾಗಿ ವಿಶ್ವದ ಅತಿದೊಡ್ಡ ಲಸಿಕಾ ತಯಾರಕರಾದ ಸೀರಂ ಇನ್ಸ್ಟಿಟ್ಯೂಟ್ ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸಲು ಸ್ವೀಡಿಷ್ ಅಸ್ಟ್ರಾಜೆನಿಕ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿವೆ ಎಂದು ಹೇಳಿದ್ದಾರೆ. 

ಅಲ್ಲದೆ, ದೇಶೀಯವಾಗಿ ಯುದ್ಧ ವಿಮಾನಗಳ ತಯಾರಿಕೆ ಸಾಮಗ್ರಿಗಳ ಕ್ಷಿಪ್ರ ಪೂರೈಕೆ ಸೇರಿದಂತೆ ರಕ್ಷಣಾ ವ್ಯವಸ್ಥೆಯಲ್ಲಿ ಭಾರತಕ್ಕೆ ಸಹಕಾರ ನೀಡಲು ಬ್ರಿಟನ್ ಮುಂದಾಗಿದೆ.

ಪ್ರಸ್ತುತ ಭಾರತಕ್ಕೆ ಅಗತ್ಯವಿರುವ ರಕ್ಷಣಾ ಸಾಮಗ್ರಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ರಷ್ಯಾದಿಂದ ಪೂರೈಕೆಯಾಗುತ್ತಿದೆ. ಹಿಂದೂ ಮಹಾಸಾಗರದಲ್ಲಿ ಅಪಾಯಗಳನ್ನು ಎದುರಿಸಲು ಅಗತ್ಯವಿರುವ ಹೊಸ ತಂತ್ರಜ್ಞಾನ ಹಾಗೂ ಯುದ್ಧ ವಿಮಾನಗಳ ಅಭಿವೃದ್ಧಿಯಲ್ಲಿ ಪೂರ್ಣ ಸಹಕಾರ ನೀಡುವುದಾಗಿ ಬ್ರಿಟಿಷ್ ಹೈ ಕಮಿಷನ್ ಹೇಳಿದೆ ಎನ್ನಲಾಗಿದೆ.

ಕ್ಷಿಪ್ರಗತಿಯಲ್ಲಿ ರಕ್ಷಣಾ ಸಾಮಗ್ರಿಗಳ ಸಾಗಣೆಗೆ ಅನುವಾಗುವ ನಿಟ್ಟಿನಲ್ಲಿ ಭಾರತಕ್ಕೆ ಬ್ರಿಟನ್ ಮುಕ್ತ ಸಾರ್ವತ್ರಿಕ ರಫ್ತು ಪರವಾನಗಿ ಒದಗಿಸುವುದಾಗಿ ತಿಳಿಸಿದೆ. ಇದರಿಂದಾಗಿ ರಕ್ಷಣಾ ಸಾಮಗ್ರಿಗಳ ಪೂರೈಕೆ ಅವಧಿ ಕಡಿತಗೊಳ್ಳಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ