ಸ್ಮಶಾನಗಳ ಸಾಮ್ರಾಜ್ಯ ಅಫ್ಘಾನ್: ಕಾಬೂಲ್ ಏರ್ಪೋರ್ಟ್ನಲ್ಲಿ ಶವವಾದ ನಾಗರಿಕರು!

ಸೋಮವಾರ, 16 ಆಗಸ್ಟ್ 2021 (15:36 IST)
ಕಾಬೂಲ್(ಆ.16): ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಸಾವಿರಾರು ಜನರು ದೇಶವನ್ನು ತೊರೆಯಲು ಮುಂದಾಗಿದ್ದಾರೆ. ಈ ಮಧ್ಯೆ ಕಾಬೂಲ್ ವಿಮಾನ ನಿಲ್ದಾಣದ ಕೆಲ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿವೆ. ಒಂದೆಡೆ ವಿಮಾನ ನಿಲ್ದಾಣದಲ್ಲಿ ಶವಗಳು ಬಿದ್ದಿದ್ದರೆ, ಮತ್ತೊಂದೆಡೆ ಜನರು ಜೀವ ಭಯದಿಂದ, ಕೊನೆಯ ವಿಮಾನ ಹತ್ತಲು ಯತ್ನಿಸುತ್ತಿರುವ ದೃಶ್ಯಗಳು ಬೆಚ್ಚಿ ಬೀಳುವಂತೆ ಮಾಡಿವೆ.

ಅಮೆರಿಕ ಸೇನೆ ಇದ್ದರೂ ತಾಲಿಬಾನಿಯರಿಂದ ಹಿಂಸಾಚಾರ'
ಕಾಬೂಲ್ ವಿಮಾನ ನಿಲ್ದಾಣ ಜನರಿಂದ ತುಂಬಿದೆ. ವೈರಲ್ ಆಗುತ್ತಿರುವ ದೃಶ್ಯಗಳನ್ನು ನೋಡಿದರೆ ಈ ಜನದಟ್ಟಣೆ ಮುಂಬೈನ ಲೋಕಲ್ ಟ್ರೇನ್ನಲ್ಲಿ ಕಂಡು ಬರುವ ದೃಶ್ಯವನ್ನೂ ಮೀರಿಸುವಂತಿದೆ. ಜೀವ ಭಯದಿಂದ ದೇಶ ಬಿಡಲು ಮುಂದಾದ ಅನೇಕರು ವಿಮಾನ ನಿಲ್ದಾಣದಲ್ಲಿ ಜಗಳವಾಡಲಾರಂಭಿಸಿದ್ದಾರೆ. ಇನ್ನು ಅಮೆರಿಕದ ಸೇನಾಪಡೆ ಕಾಬೂಲ್ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದೆಯಾದರೂ, ತಾಲಿಬಾನಿಯರು ನಿರ್ಭೀತರಾಗಿ ತಮ್ಮ ದರ್ಪ ತೋರಿಸಲಾರಂಭಿಸಿದ್ದಾರೆ. ಹೀಗಿರುವಾಗ ಇಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅನೇಕ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ವೀಸಾ ಮತ್ತು ಪಾಸ್ಪೋರ್ಟ್ ಇಲ್ಲದ ಜನರೂ ವಿಮಾನ ನಿಲ್ದಾಣಕ್ಕೆ ಧಾವಿಸಿ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಪರಿಸ್ಥಿತಿ ನಿಯಂತ್ರಿಸಲು ಅಮೆರಿಕ ಪಡೆ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ತಾಲಿಬಾನಿಯರ ಮೇಲಿಲ್ಲ ನಂಬಿಕೆ
ನಾಗರಿಕರನ್ನು ರಕ್ಷಿಸಲಾಗುವುದು ಎಂದು ತಾಲಿಬಾನ್ ಪದೇ ಪದೇ ಭರವಸೆ ನೀಡುತ್ತಿದೆ. ಹೀಗಿದ್ದರೂ ಅವರ ಮಾತನ್ನು ಒಪ್ಪಿಕೊಳ್ಳಲು ಇಲ್ಲಿನ ಜನ ಸಾಮಾನ್ಯರು ತಯಾರಿಲ್ಲ. ಇನ್ನು ಹಿಜಾಬ್ ಧರಿಸದ ಕಾರಣ ವಿಮಾನ ನಿಲ್ದಾಣದಲ್ಲಿ ಹಲವಾರು ಮಹಿಳೆಯರನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದು ವರದಿಗಳು ತಿಳಿಸಿದ್ದರೂ, ಈ ಮಾಹಿತಿ ಇನ್ನೂ ದೃಢಪಟ್ಟಿಲ್ಲ. ಅದೇನಿದ್ದರೂ ಕಾಬೂಲ್ನ ವಿಮಾನ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಪರಿಸ್ಥಿತಿ ಕೈಮೀರತೊಡಗಿದೆ ಎನ್ನುವುದು ಮಾತ್ರ ಖಚಿತ.
20 ವರ್ಷ ಬಳಿಕ ಆಫ್ಘಾನಿಸ್ತಾನ ಮತ್ತೆ ತಾಲಿಬಾನ್ ಉಗ್ರರ ವಶ
ಅಮೆರಿಕ ತನ್ನ ಸೇನೆ ಹಿಂದಕ್ಕೆ ಪಡೆದರೆ ಆಷ್ಘಾನಿಸ್ತಾನದಲ್ಲಿ ಏನಾಗಬಹುದೆಂಬ ಆತಂಕ ಇತ್ತೋ ಅದು ನಿರೀಕ್ಷೆಗೂ ಮೊದಲೇ ನಿಜವಾಗಿದೆ. ಸತತ 2 ದಶಕಗಳ ಕಾಲ ಅಮೆರಿಕ ಮತ್ತು ನ್ಯಾಟೋ ಪಡೆಗಳನ್ನೇ ಕಂಗೆಡಿಸಿದ್ದ ತಾಲಿಬಾನ್ ಉಗ್ರರು ಭಾನುವಾರ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಳ್ಳುವ ಮೂಲಕ ಅಕ್ಷರಶಃ ಇಡೀ ದೇಶವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ 2 ದಶಕಗಳ ಬಳಿಕ ದೇಶ ಮತ್ತೆ ಕ್ರೂರಿಗಳ ಕೈವಶವಾಗಿದೆ.
ಕಳೆದೊಂದು ತಿಂಗಳಿನಿಂದ ದೇಶದ ಒಂದೊಂದೇ ಪ್ರದೇಶಗಳನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಾ ಬಂದಿದ್ದ ತಾಲಿಬಾನ್ ಉಗ್ರರು, ಭಾನುವಾರ ಕಾಬೂಲ್ ವ್ಯಾಪ್ತಿಯ ಮೂರು ಜಿಲ್ಲೆಗಳನ್ನು ವಶಪಡಿಸಿಕೊಂಡರು. ಅದರ ಬೆನ್ನಲ್ಲೇ ಶಾಂತಿಯುತವಾಗಿ, ಬೇಷರತ್ ಅಧಿಕಾರ ಹಸ್ತಾಂತರಕ್ಕೆ ಸರ್ಕಾರಕ್ಕೆ ಸೂಚಿಸಿದ ಉಗ್ರರು, ಅರಮನೆ ಪ್ರವೇಶಿಸಿ ಸಂಧಾನ ಮಾತುಕತೆ ನಡೆಸಿದರು. ಅದಾದ ಕೆಲ ಹೊತ್ತಿನಲ್ಲೇ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ರಹಸ್ಯವಾಗಿ ನೆರೆಯ ತಜಿಕಿಸ್ತಾನಕ್ಕೆ ಪಲಾಯನ ಮಾಡಿದರು. ಅಧ್ಯಕ್ಷರ ಪಲಾಯನದ ಬೆನ್ನಲ್ಲೇ ಉಗ್ರರು ನಗರದ ಮತ್ತಷ್ಟುಒಳಪ್ರದೇಶಗಳನ್ನು ಹೊಕ್ಕಿದ್ದಾರೆ.
ಆಷ್ಘಾನಿಸ್ತಾನದ ಈ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಅಮೆರಿಕ, ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಕಾಬೂಲ್ನಲ್ಲಿರುವ ತಮ್ಮ ನಾಗರಿಕರು ಮತ್ತು ದೂತಾವಾಸ ಸಿಬ್ಬಂದಿಯನ್ನು ತವರಿಗೆ ಕರೆಸಿಕೊಳ್ಳಲು ಹರಸಾಹಸ ಆರಂಭಿಸಿವೆ. ಆದರೆ ಕಾಬೂಲ್ನ ಒಂದು ಏರ್ಪೋರ್ಟ್ ಮಾತ್ರವೇ ಬಳಕೆಗೆ ಲಭ್ಯವಿರುವ ಕಾರಣ ಅಲ್ಲಿಂದಲೇ ನೂರಾರು ವಿಮಾನ, ಕಾಪ್ಟರ್ಗಳು ಸಂಚಾರ ನಡೆಸಿದ್ದು, ನಿಲ್ದಾಣಕ್ಕೆ ಬಂದಿಳಿಯಲು ಹಲವು ಗಂಟೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
ಆಫ್ಘನ್ನಲ್ಲಿ ಆಗಿದ್ದೇನು?
2001ರಲ್ಲಿ ಅಮೆರಿಕದ ಮೇಲೆ ಉಗ್ರರು ಭೀಕರ ದಾಳಿ ನಡೆಸಿದ ನಂತರ ಅವರ ಹುಟ್ಟಡಗಿಸಲು ಅಮೆರಿಕವು ಅಷ್ಘಾನಿಸ್ತಾನಕ್ಕೆ ತನ್ನ ಸೇನೆ ಕಳುಹಿಸಿತ್ತು. ಕ್ರಮೇಣ ಅಲ್ಲಿದ್ದ ತಾಲಿಬಾನ್ ಉಗ್ರರ ಆಡಳಿತವನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವ ಸ್ಥಾಪಿಸಲು ನೆರವು ನೀಡಿತ್ತು. ಸತತ 20 ವರ್ಷ ಅಮೆರಿಕ ಸೇನೆ ಕಾರ್ಯಾಚರಣೆ ನಡೆಸಿದರೂ ಉಗ್ರರ ನಿರ್ನಾಮ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕ ಈ ವರ್ಷ ತನ್ನ ಸೇನೆಯನ್ನು ಸಂಪೂರ್ಣ ಹಿಂದಕ್ಕೆ ಕರೆಸಿಕೊಳ್ಳುತ್ತಿದೆ. ಕೆಲ ತಿಂಗಳ ಹಿಂದೆ ಆ ಬಗ್ಗೆ ಘೋಷಣೆ ಮಾಡಿದ ಬೆನ್ನಲ್ಲೇ ತಾಲಿಬಾನ್ ಉಗ್ರರು ಮತ್ತೆ ಚಿಗಿತುಕೊಂಡು, ಆಫ್ಘನ್ನ ಒಂದೊಂದೇ ಪ್ರಾಂತ್ಯ ವಶಪಡಿಸಿಕೊಂಡು, ಈಗ ಇಡೀ ದೇಶವನ್ನು ತೆಕ್ಕೆಗೆ ತೆಗೆದುಕೊಂಡಿದ್ದಾರೆ.
ಮುಂದೇನಾಗಲಿದೆ?
ಅಷ್ಘಾನಿಸ್ತಾನದ ಹಾಲಿ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಪಕ್ಕದ ತಜಿಕಿಸ್ತಾನಕ್ಕೆ ವಿಮಾನದಲ್ಲಿ ಪಲಾಯನ ಮಾಡಿದ್ದಾರೆ. ಹೀಗಾಗಿ ದೇಶದಲ್ಲಿ ಮಧ್ಯಂತರ ಸರ್ಕಾರ ರಚನೆ ಸಾಧ್ಯತೆ ಇದೆ. ಇಲ್ಲದೇ ಹೋದಲ್ಲಿ ತಾಲಿಬಾನ್ ಉಗ್ರರ ಕಮಾಂಡರ್ ಮುಲ್ಲಾ ಅಬ್ದುಲ್ ಘನಿ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ಹೊಸ ಸರ್ಕಾರ ರಚನೆಯಾಗಬಹುದು. ಈ ಸರ್ಕಾರಕ್ಕೆ ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳು ಮಾನ್ಯತೆ ನೀಡುವುದಿಲ್ಲ ಎಂದು ಈಗಾಗಲೇ ಘೋಷಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ