ಭಾರತದ ಹಿಂದೂ ರಾಷ್ಟ್ರೀಯವಾದಕ್ಕೆ ನಮ್ಮ ಜತೆ ಯುದ್ಧ ಬೇಕು ಎಂದ ಚೀನಾ
ಶುಕ್ರವಾರ, 21 ಜುಲೈ 2017 (09:37 IST)
ಬೀಜಿಂಗ್: ಭಾರತದಲ್ಲಿರುವ ಹಿಂದೂ ರಾಷ್ಟ್ರೀಯವಾದಿಗಳಿಗೆ ನಮ್ಮೊಂದಿಗೆ ಯುದ್ಧ ಬೇಕು. ಅದಕ್ಕಾಗಿಯೇ ಸಿಕ್ಕಿಂ ಗಡಿಯಲ್ಲಿ ಕಾಲ್ಕೆರೆದು ಜಗಳ ತೆಗೆಯುತ್ತಿದೆ ಎಂದು ಚೀನಾ ಆರೋಪಿಸಿದೆ.
ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದಾಗಿನಿಂದ ದಿನಕ್ಕೊಂದು ಆಕ್ರಮಣಕಾರಿ ಲೇಖನ ಪ್ರಕಟಿಸುತ್ತಿದೆ. ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದೂ ರಾಷ್ಟ್ರೀಯವಾದಿ ಚಿಂತನೆಗಳ ಬಗ್ಗೆ ಅದು ಟೀಕಿಸಿದೆ.
‘ಭಾರತವನ್ನು ಯುದ್ಧದ ವಾತಾವರಣಕ್ಕೆ ದೂಡಲು ಕಾರಣ ಅಲ್ಲಿನ ಹಿಂದೂ ರಾಷ್ಟ್ರೀಯವಾದ. ಜತೆಗೆ ಮೋದಿ ಪ್ರಧಾನಿಯಾಗಿದ್ದು ಇದಕ್ಕೆ ತುಪ್ಪ ಸುರಿಯಿತು. ಧಾರ್ಮಿಕ ರಾಷ್ಟ್ರೀಯವಾದ ವಿಪರೀತಕ್ಕೆ ಹೋಗುತ್ತಿದ್ದರೂ ಮೋದಿ ಸರ್ಕಾರ ಅದರ ವಿರುದ್ಧ ಏನೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಟೀಕಿಸಿದೆ. ಅಲ್ಲದೆ, ಭಾರತ ಇತ್ತೀಚೆಗೆ ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಕಠಿಣ ನೀತಿ ಪ್ರಕಟಿಸಿದ್ದು, ಅವರ ವಿದೇಶಾಂಗ ತಜ್ಞರೂ ಇದಕ್ಕೆ ಚಕಾರವೆತ್ತುತ್ತಿಲ್ಲ ಎಂದು ಆರೋಪಿಸಿವೆ.