ಭಾರತದ ವಿರುದ್ಧ ನೇಪಾಳ ಎತ್ತಿಕಟ್ಟಿದ್ದು ಚೀನಾವೇ ಎಂಬುದಕ್ಕೆ ಇಲ್ಲಿದೆ ಸಾಕ್ಷ್ಯ!
ಶನಿವಾರ, 20 ಜೂನ್ 2020 (08:52 IST)
ನವದೆಹಲಿ: ತಾನು ಗಡಿ ಖ್ಯಾತೆ ತೆಗೆಯುತ್ತಿರುವುದಲ್ಲದೆ ನೆರೆಯ ನೇಪಾಳವನ್ನೂ ಭಾರತದ ವಿರುದ್ಧ ಎತ್ತಿಕಟ್ಟುವುದರಲ್ಲಿ ಚೀನಾ ಪ್ರಧಾನ ಪಾತ್ರ ವಹಿಸಿದೆ ಎನ್ನುವುದಕ್ಕೆ ಪುಷ್ಠಿ ನೀಡುವಂತಹ ಸಾಕ್ಷ್ಯ ಸಿಕ್ಕಿದೆ.
ಕಳೆದ ಕೆಲವು ತಿಂಗಳುಗಳಿಂದ ನೇಪಾಳದಲ್ಲಿರುವ ಚೀನಾ ರಾಯಭಾರಿ ಹೌ ಯಾಂಕಿ ಸತತವಾಗಿ ನೇಪಾಳದ ಪ್ರಧಾನಿ ಕಚೇರಿಗೆ ಭೇಟಿ ನೀಡುತ್ತಿದ್ದರು. ಈ ವೇಳೆ ಅವರು ಭಾರತದ ವಿರುದ್ಧ ಸಂಚು ರೂಪಿಸಲು ತಂತ್ರ ಹೆಣೆದಿರಬಹುದು ಎನ್ನಲಾಗಿದೆ. ಇದಾದ ಬಳಿಕವೇ ನೇಪಾಳ ಭಾರತದ ಜತೆಗಿನ ವಿವಾದಿತ ಪ್ರದೇಶ ತನ್ನದು ಎಂಬ ಮಸೂದೆ ಪಾಸ್ ಮಾಡಿದ್ದು.
ಇದಲ್ಲದೆ, ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಸಂಘರ್ಷ ನಡೆದ ಬೆನ್ನಲ್ಲೇ ನೇಪಾಳ ಮತ್ತು ಚೀನಾದ ಆಡಳಿತಾರೂಢ ಪಕ್ಷಗಳು ಪರಸ್ಪರ ಸಭೆ ಸೇರಿದ್ದವು. ಈ ವೇಳೆ ಭಾರತದ ಜತೆಗಿನ ಗಡಿ ಸಂಘರ್ಷದ ಬಗ್ಗೆ ಚರ್ಚೆ ನಡೆಸಿದ್ದವು ಎಂದು ಸ್ಥಳೀಯ ಮಾಧ‍್ಯಮಗಳೇ ವರದಿ ಮಾಡಿವೆ. ಹೀಗಾಗಿ ಇವೆರಡೂ ದೇಶಗಳು ಸೇರಿಕೊಂಡು ವ್ಯವಸ್ಥಿತವಾಗಿಯೇ ಭಾರತದ ವಿರುದ್ಧ ಕತ್ತಿ ಮಸೆಯುವ ಕೆಲಸ ಮಾಡುತ್ತಿವೆ ಎನ್ನಲಾಗಿದೆ.