ಇನ್ಮುಂದೆ ಈ ರಾಜ್ಯದ ಸರ್ಕಾರಿ ನೌಕರರು ಜೀನ್ಸ್-ಟೀ ಶರ್ಟ್ ಗಳನ್ನು ಧರಿಸುವಂತಿಲ್ಲ!
ಶನಿವಾರ, 11 ಸೆಪ್ಟಂಬರ್ 2021 (09:43 IST)
ನವದೆಹಲಿ : ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಉತ್ತರಾಖಂಡದ ಸರ್ಕಾರಿ ನೌಕರರು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಟಿ ಶರ್ಟ್ ಮತ್ತು ಜೀನ್ಸ್ ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ವರದಿಯ ಪ್ರಕಾರ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಜೀನ್ಸ್ ಮತ್ತು ಟಿ-ಶರ್ಟ್ ಧರಿಸುವಂತಹ ಅನೌಪಚಾರಿಕ ಡ್ರೆಸ್ಸಿಂಗ್ ಅನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಎಲ್ಲಾ ಜಿಲ್ಲಾ ಅಧಿಕಾರಿಗಳು, ಉದ್ಯೋಗಿಗಳು ಕಚೇರಿಯಲ್ಲಿ ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು ಮತ್ತು ಉನ್ನತ ಅಧಿಕಾರಿಗಳೊಂದಿಗಿನ ಸಭೆಗಳಲ್ಲಿ ಜೀನ್ಸ್, ಟೀ ಶರ್ಟ್ ಧರಿಸಬಾರದು ಎಂದು ಅವರು ಹೇಳಿದರು. ಇದಲ್ಲದೆ, 'ಅನುಸರಣೆ ಮಾಡದವರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಅವರು ಎಚ್ಚರಿಸಿದ್ದಾರೆ.
ಕೆಲವು ಜಿಲ್ಲಾ ಮಟ್ಟದ ಉದ್ಯೋಗಿಗಳು ಮತ್ತು ಅಧಿಕಾರಿಗಳು ಡೆನಿಮ್ ಮತ್ತು ಟಿ-ಶರ್ಟ್ ಗಳನ್ನು ಹಾಕಿಕೊಂಡು ಸಭೆಗಳಿಗೆ ಹಾಜರಾಗುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಇದು ಸರ್ಕಾರಿ ನೌಕರನಿಗೆ ಯೋಗ್ಯವಾಗಿ ಕಾಣುವುದಿಲ್ಲ ಎಂದು ಕುಮಾರ್ ಹೇಳಿದ್ದಾರೆ.