ಪುಷ್ಕರ್ ಸಿಂಗ್ ಧಾಮಿ ಪ್ರಮಾಣವಚನ ಸ್ವೀಕಾರ

ಭಾನುವಾರ, 4 ಜುಲೈ 2021 (20:38 IST)
ಉತ್ತರಾಖಂಡದ 11ನೇ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಅವರು ಭಾನುವಾರ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಪುಷ್ಕರ್ ಅವರು ಆಯ್ಕೆಯಾದ 24 ಗಂಟೆಯೊಳಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಜ್ಯ ಪಾಲ ಬೇಬಿ ರಾಣಿ ಮೌರ್ಯ ಅವರು ಪುಷ್ಕರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಕುಮೌನ್ ಭಾಗದಿಂದ  (ಖಾತಿಮಾ ಕ್ಷೇತ್ರ) ಎರಡು ಬಾರಿ ಶಾಸಕಾಗಿರುವ ಪುಷ್ಕರ್ ಸಿಂಗ್ ಧಾಮಿ ಅವರನ್ನು ಶನಿವಾರ ಬಿಜೆಪಿ ಮುಖ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೆಸರು ಘೋಷಿಸಲಾಯಿತು.
ಮುಂದಿನ ವರ್ಷದ ಉತ್ತರಾಖಂಡ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಪುಷ್ಕರ್ ಸಿಂಗ್ ಧಾಮಿ ಅವರು ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ.
ಬಿಜೆಪಿ ಶಾಸಕರಾದ ಸತ್ಪಾಲ್ ಮಹಾರಾಜ್,  ಹರಾಜ್ ಸಿಂಗ್ ರಾವತ್, ಬನ್ಸಿಧರ್ ಭಾಗವತ್ ಮತ್ತು ಯಶಪಾಲ್ ಆರ್ಯ ಅವರು ಸಹ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಾಗೂ ಇತರೆ ಶಾಸಕರಾದ ಬಿಶಾನ್ ಸಿಂಗ್ ಚೌಪಾಲ್, ಸೌಬೋಧ್
ಯುನಿಯಾನ್, ಅರವಿಂದ್ ಪಾಂಡೆ, ಗಣೇಶ್ ಜೋಶಿ, ಧಾನ್ ಸಿಂಗ್ ರಾವತ್, ರೇಖಾ ಆರ್ಯ ಮತ್ತು ಯತೀಶ್ವರಾನಂದ ಅವರು ಸಹ ರಾಜ್ಯದ ನೂತನ ಸಚಿವ ಸಂಪುಟ ಸೇರ್ಪಡೆಯಾದರು.
ಪ್ರಮಾಣ ವಚನ ಸ್ಚೀಕರಿಸಿದ ಬಳಿಕ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಧಾಮಿ ಅವರು, ನಾನು ಯುವಜನಾಂಗದ ಜೊತೆಗೆ ಕೆಲಸ ಮಾಡುತ್ತೇನೆ ಮತ್ತು ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬಲ್ಲೆ. ಕೋವಿಡ್ ಜನರ ಬದುಕಿನ ಮೇಲೆ ಪರಿಣಾಮ ಬೀರಿದೆ. ಮುಂದೆ ಪರಿಸ್ಥಿತಿಯನ್ನು ಸುಧಾರಿಸುವತ್ತ ಗಮನ ಹರಿಸುತ್ತೇವೆ. ಜನರ ಜೀವನ ಸುಧಾರಣೆಯಾಗುವಂತೆ ಕೆಲಸ ನಿರ್ವಹಿಸುತ್ತೇವೆ. ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಯುವಕರನ್ನು ನೇಮಿಸುತ್ತೇವೆ ಎಂದು ಹೇಳಿದರು.
ಧಾಮಿ ಅವರು ಎರಡು ಬಾರಿ ಬಿಜೆಪಿ ಯುವ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹಾಗೂ 2002ರಿಂದ 2006ರವರೆಗೆ ಉತ್ತರಾಖಂಡ ಭಾರತೀಯ ಜನತಾ ಯುವ ಮೋರ್ಚಾದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮತ್ತು ಧಾಮಿ ಅವರು ಮಾಜಿ ಸಚಿವ ಮತ್ತು ಮಹಾರಾಷ್ಟ್ರ, ಗೋವಾ ರಾಜ್ಯಪಾಲರಾಗಿರುವ ಭಗತ್ ಸಿಂಗ್ ಕೌಶಿಯಾರಿ ಅವರ ಆತ್ಮೀಯರು ಆಗಿದ್ದಾರೆ.
ತೀರಥ್ ಸಿಂಗ್ ರಾವತ್ ಮುಖ್ಯಮಂತ್ರಿ ಸ್ಥಾನ ತೊರೆದ ಮೇಲೆ ಬಿಜೆಪಿ ಮುಖಂಡರಾದ ಸತ್ಪಾಲ್ ರಾವತ್ ಹಾಗೂ ಧನ್ಪಾಲ್ ರಾವತ್ ಸಿಎಂ ಗದ್ದುಗೆಯೇರುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಪುಸ್ಕರ್ ಸಿಂಗ್ ಧಾಮಿ ಅವರನ್ನು ಬಿಜೆಪಿ ಸಿಎಂ ಗಾದಿ ಮೇಲೆ ಕೂರಿಸಿದೆ. 45 ವರ್ಷದ ಧಾಮಿ ಉತ್ತರಾಖಂಡ್ ರಾಜ್ಯದ 10ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ