ಬೀಜಿಂಗ್(ಆ.03): ಪದೇ ಪದೇ ಕಾಡುತ್ತಿರುವ ಸಾಂಕ್ರಾಮಿಕ ರೋಗಗಳಿಂದ, ದೇಶದ ಪ್ರಮುಖ ಮಾಂಸದ ಮೂಲವಾದ ಹಂದಿಗಳನ್ನು ಕಾಪಾಡಲು ಚೀನಾ ಸರ್ಕಾರ ಹೊಸದೊಂದು ಯೋಜನೆ ರೂಪಿಸಿದೆ. ಹಂದಿಗಳನ್ನು ಅತ್ಯಂತ ಸುರಕ್ಷತೆ ಮತ್ತು ಭದ್ರತೆ ಇರುವ, ಯಾವುದೆ ಹೊರಗಿನ ವ್ಯಕ್ತಿಗಳ ಸಂಪರ್ಕಕ್ಕೆ ಬರದ ರೀತಿಯ ಕಟ್ಟಡದಲ್ಲಿ ಇಡುವುದು!
ಹೌದು. ದಕ್ಷಿಣ ಚೀನಾದ ಹಲವು ನಗರಗಳಲ್ಲಿ ಹಂದಿಗಳನ್ನು ಸೋಂಕು ಮುಕ್ತವಾಗಿರಿಸಲು ಹಾಗ್ ಹೋಟೆಲ್ (ಹಂದಿಗಳ ಅತಿಥಿ ಗೃಹ) ನಿರ್ಮಿಸಲಾಗುತ್ತಿದೆ. ಇಂಥ ಒಂದು ಕಟ್ಟಡವಂತೂ 13 ಮಹಡಿ ಹೊಂದಿದ್ದು, ಅಲ್ಲಿ 10000ಕ್ಕೂ ಹೆಚ್ಚು ಹಂದಿಗಳನ್ನು ರಕ್ಷಿಸಲಾಗಿದೆ. ಈ ಕಟ್ಟಡಕ್ಕೆ ಸಿಸಿ ಟೀವಿ ಕ್ಯಾಮರಾ ಸೇರಿ ಅತಿ ಹೆಚ್ಚಿನ ಭದ್ರತೆಗಳನ್ನು ಒದಗಿಸಲಾಗಿದ್ದು, ಯಾರಿಗೂ ಒಳಗೆ ಪ್ರವೇಶ ಇಲ್ಲ.
ಕಾರಣ ಏನು?:
ಚೀನಿಯರಿಗೆ ಹಂದಿಗಳು ಪ್ರಮುಖ ಆಹಾರ. ಆದರೆ, ಸ್ವೈನ್ ಫ್ಮ್ಲ ನಂತಹ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಂಡಾಗ ಕೋಟ್ಯಂತರ ಹಂದಿಗಳನ್ನು ಸಾಯಿಸಬೇಕಾಗುತ್ತದೆ. ಹೀಗಾಗಿ ಹಂದಿಗಳನ್ನು ರೋಗಗಳಿಂದ ರಕ್ಷಿಸಲು ಹಾಗ್ ಹೋಟೆಲ್ ನಿರ್ಮಿಸಲಾಗುತ್ತಿದೆ. ಒಂದು ವೇಳೆ ಸಾಂಕ್ರಾಮಿಕಗಳು ಸಂಭವಿಸಿದ ವೇಳೆ ಹಂದಿಗಳು ನಾಶವಾದರೆ, ಈ ಕಟ್ಟಡದಲ್ಲಿರುವ ಹಂದಿಗಳನ್ನು ಬಳಸಿ ಹಂದಿಗಳ ಸಂತತಿಯನ್ನು ವೃದ್ಧಿಸುವುದು ಮತ್ತು ಮಾಂಸಕ್ಕೆ ಬಳಕೆ ಮಾಡಿಕೊಳ್ಳುವುದು ಚೀನಾದ ಪ್ಲಾನ್ ಆಗಿದೆ.
ಕೊರೋನಾ ವೈರಸ್ ಕಾಣಿಸಿಕೊಂಡ 2 ವರ್ಷ ಮುನ್ನ ಚೀನಾದಲ್ಲಿ ಕಾಣಿಸಿಕೊಂಡಿದ್ದ ಆಫ್ರಿಕನ್ ಹಂದಿ ಜ್ವರದಿಂದ ಚೀನಾದಲ್ಲಿ ಸಾಕಲಾಗಿದ್ದ ಅರ್ಧದಷ್ಟುಹಂದಿಗಳನ್ನು ನಾಶ ಮಾಡಲು ಕಾರಣವಾಗಿತ್ತು.
ಎಬೊಲಾ ಸೋಂಕಿನಿಂದ ಮನುಷ್ಯರು ಸಾಯುವ ರೀತಿಯಲ್ಲಿಯೇ ಆಫ್ರಿಕನ್ ಹಂದಿ ಜ್ವರ ಹಂದಿಗಳನ್ನು ಸಾಯಿಸುತ್ತದೆ. ಇದು 2018ರಲ್ಲಿ ಚೀನಾದಲ್ಲಿ ದೊಡ್ಡ ಮಟ್ಟದ ಸಾಂಕ್ರಾಮಿಕಕ್ಕೆ ಕಾರಣವಾಗಿತ್ತು. ಹಂದಿ ಜ್ವರ ಕಾಣಿಸಿಕೊಂಡ ಒಂದು ವರ್ಷದಲ್ಲಿ ಸುಮಾರು 40 ಕೋಟಿ ಹಂದಿಗಳು ಸಾವನ್ನಪ್ಪಿದ್ದವು. ಇದು ಅಮೆರಿಕ, ಬ್ರೆಜಿಲ್ನಲ್ಲಿ ವಾರ್ಷಿಕವಾಗಿ ಸಾವನ್ನಪ್ಪುವ ಹಂದಿಗಳ ಸಂಖ್ಯೆಗಿಂತಲೂ ಹೆಚ್ಚು. ಇದರಿಂದ ಚೀನಾ ಹಂದಿಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು