ಚೀನಾಕ್ಕೂ ಡೆಲ್ಟಾ ಶಾಕ್: 18 ಪ್ರಾಂತ್ಯಗಳಲ್ಲಿ ಸೋಂಕು ಹೆಚ್ಚಳ!
ಸೋಮವಾರ, 2 ಆಗಸ್ಟ್ 2021 (15:21 IST)
ಬೀಜಿಂಗ್(ಆ.02): ವಿಶ್ವಕ್ಕೆಲ್ಲಾ ಕೋವಿಡ್ ಹಬ್ಬಿಸಿದ ಕುಖ್ಯಾತಿ ಹೊಂದಿರುವ ಚೀನಾ, ಇದೀಗ ಸ್ವತಃ ರೂಪಾಂತರಿ ಡೆಲ್ಟಾಮಾದರಿ ಕೊರೋನಾ ತಳಿಗೆ ಬೆಚ್ಚಿ ಬಿದ್ದಿದೆ. ದೇಶದ 18 ಪ್ರಾಂತ್ಯಗಳಲ್ಲಿ ಕಳೆದ 10 ದಿನಗಳಲ್ಲಿ ಸೋಂಕಿನ ಪ್ರಮಾಣ ದಿಢೀರ್ ಏರಿಕೆಯಾಗಿದ್ದು, ಇದಕ್ಕೆ ಡೆಲ್ಟಾತಳಿಯೇ ಕಾರಣವೆಂದು ಖಚಿತಪಟ್ಟಿದೆ.
ಈ ಹಿನ್ನೆಲೆಯಲ್ಲಿ ಸೋಂಕು ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಪ್ರಯಾಣ, ಪ್ರವಾಸ ಮೊದಲ ಚಟುವಟಿಕೆಗಳ ಮೇಲೆ ಹೊಸ ನಿರ್ಬಂಧಗಳನ್ನು ಹೇರಲಾಗಿದೆ.
* ದೇಶದ 18 ಪ್ರಾಂತ್ಯಗಳಲ್ಲಿ ರೂಪಾಂತರಿ ಡೆಲ್ಟಾಹಾವಳಿ
* ಚೀನಾಕ್ಕೂ ಡೆಲ್ಟಾ ಶಾಕ್
* ಪ್ರಯಾಣ, ಪ್ರವಾಸ ಸೇರಿದಂತೆ ಹಲವು ನಿರ್ಬಂಧ ಜಾರಿ
ರಾಜಧಾನಿ ಬೀಜಿಂಗ್, ಜಿಯಾಂಗ್ಸು, ಸಿಚಾನ್ ಸೇರಿದಂತೆ 18 ಪ್ರಾಂತ್ಯಗಳಲ್ಲಿ ಕಳೆದ 10 ದಿನಗಳಲ್ಲಿ 300ಕ್ಕೂ ಹೆಚ್ಚು ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದೆ. ಡೆಲ್ಟಾತಳಿ ಮತ್ತು ಪ್ರವಾಸೋದ್ಯಮವೇ ಸೋಂಕು ಹೆಚ್ಚಳಕ್ಕೆ ಕಾರಣ ಎಂದಿರುವ ಚೀನಾ ಸರ್ಕಾರ, ದೇಶದಲ್ಲಿರುವ ಎಲ್ಲಾ ಪ್ರವಾಸ ತಾಣಗಳನ್ನು ಬಂದ್ ಮಾಡಿದೆ. ಜತೆಗೆ ಹಲವು ಭಾಗಗಳಲ್ಲಿ ಲಾಕ್ಡೌನ್ ಜಾರಿ ಮಾಡಿದೆ. ಅತಿಹೆಚ್ಚು ಸೋಂಕು ಪತ್ತೆಯಾಗುತ್ತಿರುವ ಪ್ರಾಂತ್ಯಗಳ ಜನ, ವಾಹನಗಳು, ವಿಮಾನಗಳು ಮತ್ತು ರೈಲುಗಳು ರಾಷ್ಟ್ರ ರಾಜಧಾನಿ ಬೀಜಿಂಗ್ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಡೆಲ್ಟಾ, ಈಗಾಗಲೇ ವಿಶ್ವದಲ್ಲೇ ಅತ್ಯಂತ ಹೆಚ್ಚು ಸಾಂಕ್ರಾಮಿಕ, ಹೆಚ್ಚು ಅಪಾಯಕಾರಿ ತಳಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. 100ಕ್ಕೂ ಹೆಚ್ಚು ದೇಶಗಳಲ್ಲಿ ಈ ತಳಿ ಪತ್ತೆಯಾಗಿದೆ. ಹಲವು ದೇಶಗಳಲ್ಲಿ 2, 3 ಮತ್ತು 4ನೇ ಅಲೆ ಏಳಲು ಈ ತಳಿಯೇ ಕಾರಣವಾಗಿದೆ