ರಷ್ಯಾದಿಂದ ಅಗ್ಗದ ಬೆಲೆಯಲ್ಲಿ ಕಚ್ಚಾ ತೈಲ ಖರೀದಿಗೆ ಮುಂದಾಗಿದ್ದೆ : ಇಮ್ರಾನ್ ಖಾನ್

ಸೋಮವಾರ, 10 ಏಪ್ರಿಲ್ 2023 (11:17 IST)
ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದಾರೆ. ಭಾರತದಂತೆ ಪಾಕಿಸ್ತಾನಕ್ಕೂ ರಷ್ಯಾದಿಂದ ಕಚ್ಚಾ ತೈಲವನ್ನು ಅಗ್ಗದ ಬೆಲೆಯಲ್ಲಿ ಪಡೆಯಲು ಬಯಸಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
 
ಭಾರತದಂತೆ ನಮಗೂ ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ಕಚ್ಚಾ ತೈಲ ಬೇಕಿತ್ತು. ದುರದೃಷ್ಟವಶಾತ್ ಅವಿಶ್ವಾಸ ನಿರ್ಣಯದಿಂದಾಗಿ ನನ್ನ ಸರ್ಕಾರ ಪತನವಾಯಿತು. ಇದರಿಂದ ರಷ್ಯಾದಿಂದ ಕಚ್ಚಾ ತೈಲ ಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಇಮ್ರಾನ್ ಖಾನ್ ವೀಡಿಯೋ ಸಂದೇಶವೊಂದರಲ್ಲಿ ರಾಷ್ಟ್ರವನ್ನುದ್ದೇಶಿಸಿ ಈ ವಿಚಾರವನ್ನು ತಿಳಿಸಿದ್ದಾರೆ.

ಕಳೆದ 23 ವರ್ಷಗಳಲ್ಲಿಯೇ ರಷ್ಯಾಗೆ ಭೇಟಿ ನೀಡಿದ್ದ ಮೊದಲ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಆಗಿದ್ದರು. ಕಳೆದ ವರ್ಷ ಉಕ್ರೇನ್ನೊಂದಿಗೆ ಯುದ್ಧ ಸಾರುವ ದಿನವೂ ಖಾನ್ ರಷ್ಯಾದಲ್ಲಿಯೇ ಇದ್ದರು. ಹಾಗೂ ಅಲ್ಲಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ್ದರು. ಆದರೂ ಅವರು ತಮ್ಮ ದೇಶದಲ್ಲಿ ನಗದು ಕೊರತೆ ಇರುವ ಸಮಯದಲ್ಲಿ ಪರಿಹಾರ ಪಡೆದುಕೊಳ್ಳುವಂತಹ ಯಾವುದೇ ಒಪ್ಪಂದಗಳನ್ನು ಮಾಡಲಾಗಲಿಲ್ಲ.

ಪಾಕಿಸ್ತಾನ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ರಷ್ಯಾ ಉಕ್ರೇನ್ನೊಂದಿಗೆ ಯುದ್ಧ ನಡೆಸುತ್ತಿದ್ದರೂ ಭಾರತ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಪಡೆಯುತ್ತಿದೆ. ಆದರೆ ಪಾಕಿಸ್ತಾನಕ್ಕೆ ಈ ಅದೃಷ್ಟ ಇಲ್ಲ ಎಂದು ಖಾನ್ ವಿಷಾದ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ