ಇಸ್ಲಾಮಾಬಾದ್ : ಉಚಿತ ಪಡಿತರ ವಿವತರಣೆ ವೇಳೆ ಕಾಲ್ತುಳಿತಕ್ಕೆ ಸಿಕ್ಕಿ ಮಹಿಳೆಯರು, ಮಕ್ಕಳು ಸೇರಿದಂತೆ 11 ಮಂದಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಪಾಕಿಸ್ತಾನದ ಕರಾಚಿ ನಗರದಲ್ಲಿ ಶುಕ್ರವಾರ ನಡೆದಿದೆ.
ಕರಾಚಿಯ ಸಿಂಧ್ ಇಂಡಸ್ಟ್ರಿಯಲ್ ಟ್ರೇಡಿಂಗ್ ಎಸ್ಟೇಟ್) ಪ್ರದೇಶದಲ್ಲಿ ಘಟನೆ ನಡೆದಿದ್ದು, 8 ಮಹಿಳೆಯರು ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಇನ್ನೂ ಹಲವು ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಲ್ಲಿ ಉಚಿತ ಪಡಿತರ ಸಂಗ್ರಹಿಸಲು ಏಕಕಾಲಕ್ಕೆ ಸಾಕಷ್ಟು ಮಂದಿ ವಿತರಣಾ ಕೇಂದ್ರಕ್ಕೆ ನುಗ್ಗಿದ್ದಾರೆ. ಇದರಿಂದ ಕಾಲ್ತುಳಿತಕ್ಕೆ ಸಿಕ್ಕಿ ಜನ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ 7 ಮಂದಿಯನ್ನ ಕರಾಚಿ ಪೊಲೀಸರು ಬಂಧಿಸಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ದಿನ ಕಳೆದಂತೆ ಪಾಕಿಸ್ತಾನದಲ್ಲಿ ಆರ್ಥಿಕ ದಿವಾಳಿತನ ಹೆಚ್ಚಾಗುತ್ತಿದ್ದು, ಜನರು ಆಹಾರ ಸಾಮಗ್ರಿಗಳಿಗೂ ಪರದಾಡುವಂತಾಗಿದೆ. ಇತ್ತ ಆಹಾರ ಪದಾರ್ಥಗಳ ಬೆಲೆಯೂ ದುಬಾರಿಯಾಗಿರುವುದರಿಂದ ಟ್ರಕ್ಗಳು ಮತ್ತು ಪಡಿತರ ವಿತರಣಾ ಕೇಂದ್ರಗಳಿಂದ ಸಾವಿರಾರು ಚೀಲದಷ್ಟು ಗೋದಿ ಹಿಟ್ಟನ್ನ ಲೂಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.