ಇಸ್ಲಾಮಾಬಾದ್ : ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನವಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ 2 ವಾರಗಳ ಜಾಮೀನನ್ನು ಮಂಜೂರು ಮಾಡಿದೆ.
ಇಮ್ರಾನ್ ಖಾನ್ ಅವರನ್ನು ಮಂಗಳವಾರ ಪ್ಯಾರಾ ಮಿಲಿಟರಿ ಪಡೆ ಬಂಧಿಸಿದ್ದು ಬಳಿಕ ಪಾಕಿಸ್ತಾನದಾದ್ಯಂತ ಭಾರೀ ಪ್ರತಿಭಟನೆ ಭುಗಿಲೆದ್ದಿತು.
ಗುರುವಾರ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ ಅವರ ಬಂಧನವನ್ನು ಕಾನೂನು ಬಾಹಿರ ಎಂದು ಘೋಷಿಸಿ ತಕ್ಷಣವೇ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತು. ಇದಾದ ಬೆನ್ನಲೇ ಇಸ್ಲಾಮಾಬಾದ್ ಹೈಕೋರ್ಟ್ ಖಾನ್ ಅವರಿಗೆ ಜಾಮೀನನ್ನು ಮಂಜೂರು ಮಾಡಿದೆ.
ಇಮ್ರಾನ್ ಖಾನ್ ಮಂಗಳವಾರ ಪ್ರಕರಣವೊಂದರ ವಿಚಾರಣೆಗೆಂದು ಹೈಕೋರ್ಟ್ಗೆ ಹಾಜರಾಗಲು ತೆರಳುತ್ತಿದ್ದ ವೇಳೆ ಕೋರ್ಟ್ ಆವರಣದಲ್ಲಿಯೇ ಅವರನ್ನು ಬಂಧಿಸಲಾಗಿತ್ತು. ಇದರಿಂದ ಖಾನ್ ಬೆಂಬಲಿಗರು ಬಂಧನವನ್ನು ವಿರೋಧಿಸಿ ದೇಶಾದ್ಯಂತ ಭಾರೀ ಹಿಂಸಾಚಾರ ನಡೆಸಿದರು.